ಮಡಿಕೇರಿ, ಜೂ. 11: ಬೆಂಗಳೂರಿನ ಆರ್ಚ್‍ಬಿಷಪ್ ಪೀಟರ್ ಮಚಾಡೊ ಹಾಗೂ ಮೈಸೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಕೆ.ಎ ವಿಲಿಯಂ ಅವರುಗಳ ಮುಂದಾಳತ್ವದಲ್ಲಿ ರೂ.49.5 ಕೋಟಿ ಸಂಗ್ರಹವಾಗಿರುವು ದಾಗಿ ನಿವೃತ್ತ ನ್ಯಾಯಮೂರ್ತಿ ಸಲ್ದಾನ ಅವರು ಆರೋಪಿಸಿರುವುದು ಸುಳ್ಳು ಎಂದು ಸಂತ ಅನ್ನಮ್ಮ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಮದಲೈ ಮುತ್ತು ಸ್ಪಷ್ಟನೆ ನೀಡಿದ್ದಾರೆ.
ನಗರದ ಸಂತ ಮೈಕಲರ ಚರ್ಚ್‍ನಲ್ಲಿ ತಾ.11 ರಂದು (ಇಂದು) ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮೈಸೂರು ಧರ್ಮಕ್ಷೇತ್ರದ ಅಧ್ಯಕ್ಷ ಕೆ.ಎಂ. ವಿಲಿಯಮ್, ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಮದಲೈ ಮುತ್ತು ಸೇರಿದಂತೆ ಇತರರು ಆಗಮಿಸಿದ್ದರು. ಈ ಸಂದರ್ಭ ವಿಲಿಯಂ ಅವರನ್ನು, ಸಲ್ದಾನ ಅವರು ತಮ್ಮ ಮೇಲೆ ಮಾಡಿದ ಆರೋಪದ ಕುರಿತು ಮಾಧ್ಯಮ ಪ್ರಶ್ನಿಸಿದಾಗ, ಈ ಕುರಿತು ಮದಲೈ ಮುತ್ತು ಅವರು ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಮದಲೈ ಮುತ್ತು ಅವರು ಹಟ್ಟಿಹೊಳೆ ಬಳಿ ಚರ್ಚ್‍ಗೆ ಸೇರಿದ ಜಾಗದಲ್ಲಿ ಸುಮಾರು 35 ಮನೆಗಳನ್ನು ಮೈಸೂರು ಧರ್ಮಕ್ಷೇತ್ರದ ವತಿಯಿಂದ ನಿರ್ಮಿಸುವ ಯೋಜನೆ ಯನ್ನು ಕೈಗೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ ಮೈಸೂರು ಧರ್ಮಕ್ಷೇತ್ರದಿಂದ ದಾನಿಗಳಿಂದ ಒಟ್ಟು ಬ್ಯಾಂಕ್ ಬಡ್ಡಿಯನ್ನೊಳಗೊಂಡು ರೂ. 2,43,42,552 ಹಣ ಸಂಗ್ರಹವಾಗಿದೆ. ಇದರೊಂದಿಗೆ ಬೆಂಗಳೂರು ಧರ್ಮಕ್ಷೇತ್ರದ ವತಿಯಿಂದ ರೂ.1.5 ಕೋಟಿ ಹಣ ಕಾಮಗಾರಿ ಪ್ರಾರಂಭವಾದ ಬಳಿಕ ನೀಡುವುದಾಗಿ ಭರವಸೆ ನೀಡಲಾಗಿದೆ. ಒಟ್ಟು ಈ ಯೋಜನೆಯ ಮೊತ್ತ ರೂ.3.93 ಕೋಟಿಯಾಗಿದೆ. ಈ ಹಣದಲ್ಲಿ ಚರ್ಚ್‍ಗೆ ಸೇರಿದ್ದ ಜಾಗದಲ್ಲೆ ಸಂತ್ರಸ್ತರಿಗೆ ಮನೆ ನಿರ್ಮಿಸುವ ಕಾರ್ಯ ಕೈಗೊಳ್ಳಲು ನಿರ್ಧರಿಸ ಲಾಗಿದೆ. ಫಲಾನುಭವಿಗಳ ಪಟ್ಟಿಯನ್ನು ಜಿಲ್ಲಾಡಳಿತದಿಂದ ಪಡೆಯಲಾಗಿದೆ. ಸಂಬಂಧಪಟ್ಟ ಪಂಚಾಯಿತಿಯಿಂದ ನಿರಾಕ್ಷೇಪಣಾ ಪತ್ರ ಪಡೆದು, ಇತರ ಎಲ್ಲಾ ದಾಖಲಾತಿಗಳನ್ನು ಜಿಲ್ಲಾಡಳಿತಕ್ಕೆ ನೀಡಿದ್ದು, ಆ ಮೂಲಕ ಸರಕಾರಕ್ಕೆ ತಲುಪಿದೆ.
(ಮೊದಲ ಪುಟದಿಂದ)
ಕಾಮಗಾರಿ ಪ್ರಾರಂಭಿಸಲು ಅನುಮತಿ ದೊರೆತ ತಕ್ಷಣ ಸಂಗ್ರಹವಾದ ಮೊತ್ತದಲ್ಲಿ ಎಷ್ಟು ಮನೆಗಳನ್ನು ಕಟ್ಟಲು ಸಾಧ್ಯವಿದೆಯೊ ಅಷ್ಟು ಮನೆಗಳನ್ನು ನಿರ್ಮಿಸಲಾಗುತ್ತದೆ ಎಂದರು. ರೂ.49.5 ಕೋಟಿ ಹಣ ಸಂಗ್ರಹವಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಲ್ದಾನ ಅವರು ಮಾಡಿದ ಆರೋಪವು ಸತ್ಯಕ್ಕೆ ದೂರವಾಗಿದೆ. ವಿಲಿಯಂ ಹಾಗೂ ಪೀಟರ್ ಮಚಾಡೊ ಅವರುಗಳ ಹೆಸರನ್ನು ಹಾಳು ಮಾಡಲು ಈ ರೀತಿ ಸುಳ್ಳು ವದಂತಿಗಳನ್ನು ಸೃಷ್ಟಿಸುತ್ತಿದ್ದಾರೆ ಎಂದರು. ಕಲಾವಿದ ಸೋನು ನಿಗಮ್ ಅವರ ಕಾರ್ಯಮಕ್ರದಲ್ಲಿ ಕೂಡ ಚರ್ಚಿನ ದೇಣಿಗೆಗೆ ಹಣ ಸಂಗ್ರಹವಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕಾರ್ಯಕ್ರಮವೇ ನಡೆದಿಲ್ಲ ಎಂದು ಹೇಳಿದರು.
ಈ ಕುರಿತು ಅವರು ಪತ್ರಿಕಾ ಪ್ರಕಟಣೆಯನ್ನು ನೀಡಿದ್ದು, ಯೋಜನೆಯನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರಲು ಸರಕಾರದ ಅನುಮತಿ ಕಡ್ಡಾಯ. ಸರಕಾರದ ಆದೇಶದಂತೆ ನಿಯಮಾನುಸಾರ ಜಿಲ್ಲಾಡಳಿತ ಪರಿಶೀಲನೆ ನಡೆಸಿ ಸರಕಾರದ ಅನುಮತಿಗೆ ಶಿಫಾರಸು ಮಾಡಿತು. ಇದಕ್ಕೆ ಸ್ಪಂದಿಸಿದ ಸರಕಾರವು ಮೇ.16 2020 ರಂದು ಅನುಮತಿ ನೀಡಿ ಜಿಲ್ಲಾಧಿಕಾರಿಯ ಹಂತದಲ್ಲಿಯೇ ನಿಯಮಾನುಸಾರ ಪರಿಶೀಲಿಸಿ ಕ್ರಮ ವಹಿಸುವಂತೆ ಆದೇಶಿಸಿದೆ. ಈ ಯೋಜನೆಯ ಕಾಮಗಾರಿಯನ್ನು ಪ್ರಾರಂಭಿಸಲು ಜಿಲ್ಲಾಡಳಿತದ ಅನುಮತಿಯನ್ನು ನಿರೀಕ್ಷಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಕಾಮಗಾರಿ ಪ್ರಾರಂಭಿಸಲು ವಿಳಂಬವೇಕೆ?
2018ರಲ್ಲಿ ಸಂಭವಿಸಿದ ಪ್ರವಾಹದಲ್ಲಿ ಸಂತ್ರಸ್ತರಾದವರಿಗೆ 2 ವರ್ಷಗಳಾದರೂ ವಸತಿ ಕಲ್ಪಿಸುವ ಯೋಜನೆ ಪ್ರಾರಂಭವಾಗದ ಕುರಿತು ಪ್ರತಿಕ್ರಿಯಿಸಿದ ವೀರಾಜಪೇಟೆ ಸಂತ ಅನ್ನಮ್ಮ ಚರ್ಚ್‍ನ ಪ್ರಮುಖರು, ಕಾಮಗಾರಿ ವಿಳಂಬದ ಕುರಿತು ವಿವರಿಸಿದರು. 2018 ನಲ್ಲಿ ಪ್ರಕೃತಿ ವಿಕೋಪ ಸಂದರ್ಭ ಸಂತ್ರಸ್ತರಾದ ಸುಮಾರು 35 ಕುಟುಂಬಗಳಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ವೀರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ಮುಖ್ಯಸ್ಥ ಮದಲೈ ಮುತ್ತು ಅವರು 2019 ಮಾರ್ಚ್ 22 ರಂದು ಜಿಲ್ಲಾಧಿಕಾರಿ ಅವರಿಂದ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯಲ್ಲಿ, ಸೋಮವಾರಪೇಟೆಯ ಹಾಡಗೇರಿ ಗ್ರಾಮದ ಹಟ್ಟಿಹೊಳೆ ಸರ್ವೆ ನಂಬರ್ 109/2, 104/1, 104/P, 103/3P1, 103/3P2 ಹಾಗೂ 103/P5 ರಲ್ಲಿ ಶಾಲೆ ಮತ್ತು ಚರ್ಚ್‍ಗಳು ಒಳಗೊಂಡ ಸುಮಾರು 7.54 ಎಕರೆ ಜಾಗವಿದ್ದು, ಅದರಲ್ಲಿ 4.1 ಎಕರೆ ಜಾಗವು ಕೃಷಿಗೆ ಯೋಗ್ಯವಲ್ಲದೆ ಪಾಳು ಬಿದ್ದಿದೆ. ಸದರಿ ಜಾಗದ ಉತ್ತರ ಭಾಗದಲ್ಲಿ 2.54 ಎಕರೆ ಜಾಗದಲ್ಲಿ 45x35 ವಿಸ್ತೀರ್ಣದ 35 ನಿವೇಶನಗಳನ್ನು ವಿನ್ಯಾಸಗೊಳಿಸಿ 35 ಮನೆಗಳನ್ನು ಉಚಿತವಾಗಿ ನಿರ್ಮಿಸಿ ಸಂತ್ರಸ್ತರಿಗೆ ನೀಡುವ ಯೋಜನೆಯನ್ನು ಮೈಸೂರು ಕ್ಯಾಥೊಲಿಕ್ ಧರ್ಮಕ್ಷೇತ್ರದ ವತಿಯಿಂದ ಕೈಗೊಳ್ಳಲಾಗಿದೆ. ಈ ಯೋಜನೆಯನ್ನು ವಿಶೇಷ ಯೋಜನೆಯನ್ನಾಗಿ ಪರಿಗಣಿಸಿ ಕಾಮಗಾರಿಯನ್ನು ಪ್ರಾರಂಭಿಸಲು ಬೇಕಾದ ಅನುಮತಿಯನ್ನು ಒದಗಿಸಬೇಕಾಗಿ ವಿನಂತಿ ಮಾಡಲಾಗಿತ್ತು.
ಈ ಕುರಿತು ಜಿಲ್ಲಾಡಳಿತ ಕರ್ನಾಟಕ ಸರಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಸಪ್ಟೆಂಬರ್ 17 2019 ರಂದು ಮನವಿ ಮಾಡಿದ್ದು, ಮೇ 16 2020 ರಂದು ಸರಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಿಂದ ಅವರು ಜಿಲ್ಲಾಧಿಕಾರಿ ಹಂತದಲ್ಲೇ ನಿಯಮಾನುಸಾರ ಪರಿಶೀಲಿಸಿ ಕ್ರಮ ವಹಿಸುವಂತೆ ನಿರ್ದೇಶನ ಬಂದಿದೆ. ಸದ್ಯದಲ್ಲಿ ಕಾಮಗಾರಿ ಪ್ರಾರಂಭಿಸಲು ಜಿಲ್ಲಾಧಿಕಾರಿಯ ನಿರೀಕ್ಷೆಯಲ್ಲಿ ಇರುವುದಾಗಿ ಸಂಸ್ಥೆಯ ಪ್ರಮುಖರು ‘ಶಕ್ತಿ’ಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ವಸತಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಾಲಿಸಬೇಕಾದ ನಿಬಂಧನೆಗಳು
ಹಟ್ಟಿಹೊಳೆಯಲ್ಲಿ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಹಲವು ನಿಬಂಧನೆಗಳು ಇದ್ದು, ಇದರೊಂದಿಗೆ ಭೂ ವಿಜ್ಞಾನ ಸಂಸ್ಥೆಯಿಂದಲೂ ಜಾಗದ ಪರಿಶೀಲನೆ ಆಗಬೇಕಿತ್ತು. ಖಾಸಗಿ ಭೂವಿಜ್ಞಾನ ಸಂಸ್ಥೆಯೊಂದು ಜಾಗದ ಪರಿಶೀಲನೆ ನಡೆಸಿದ್ದು, ಹಲವು ನಿಬಂಧನೆಗಳನ್ನು ಪಾಲಿಸಿದರೆ ಮಾತ್ರ ಕಾಮಗಾರಿ ನಡೆಸಬಹುದಾಗಿ ಫೆಬ್ರವರಿ 27 2019 ರಂದು ವರದಿ ನೀಡಿದೆ.
ಸಂಸ್ಥೆಯಿಂದ ನಿಬಂಧನೆಗಳು
* ವಸತಿ ಕಲ್ಪಿಸಲು ಗುರುತಿಸಿದ್ದ ಜಾಗವು ಹೊಳೆಯ ಹತ್ತಿರ ಇರುವುದರಿಂದ, ಸದರಿ ಜಾಗದಲ್ಲಿ, ಅಗತ್ಯವಿರುವಷ್ಟು ‘ನೀರು ಇಂಗಿಸುವ’ ಸೌಲಭ್ಯ ಒದಗಿಸಬೇಕಾಗಿದೆ. ಇದಕ್ಕೆ ತಡೆಗೋಡೆಯು ನೆಲಮಟ್ಟದಿಂದ 8 ರಿಂದ 10 ಮೀಟರ್‍ನಷ್ಟು ತಳಭಾಗದವರೆಗೆ ನಿರ್ಮಾಣವಾಗಬೇಕಿದೆ ಹಾಗೂ ನೆಲಮಟ್ಟದಿಂದ 1 ರಿಂದ 1.5 ಮೀಟರಿನಷ್ಟು ಮೇಲ್ಬಾಗಕ್ಕೆ ಏರಬೇಕಿದೆ.
* ಸದರಿ ಜಾಗವು ಭೂಕಂಪನದ ಸ್ಥಳ ಎಂದು ಗುರುತಿಸಲ್ಪಟ್ಟಿದ್ದು, ಕಾಮಗಾರಿಯನ್ನು ‘ಬಿಲ್ಡಿಂಗ್ ಕನ್‍ಸ್ಟ್ರಕ್‍ಷನ್ ಕೋಡ್’ ನಿಯಮಾನುಸಾರ ಕೈಗೊಳ್ಳಬೇಕಾಗಿದೆ.
‘ಶಂಕುಸ್ಥಾಪನೆ ಅಲ್ಲ, ಧಾರ್ಮಿಕ ಆಶೀವರ್ಚನ’
ಮೈಸೂರು ಧರ್ಮಪ್ರಾಂತ್ಯದ ಅಧ್ಯಕ್ಷ ಕೆ.ಎ. ವಿಲಿಯಂ ಅವರು ಇಂದು ಸಂತ ಮೈಕಲರ ಚರ್ಚ್ ನಲ್ಲಿ ನೂತನ ಕಟ್ಟಡ ಉದ್ಘಾಟನೆಗೆ ಆಗಮಿಸಿದ್ದರು. ತಾ.10 ರಂದು ಪತ್ರಿಕಾ ಪ್ರಕಟಣೆಯ ಮೂಲಕ ಹಟ್ಟಿಹೊಳೆಯಲ್ಲಿ ಸಂತ್ರಸ್ತರ ಮನೆ ನಿರ್ಮಾಣ ಸಲುವಾಗಿ ಶಂಕುಸ್ಥಾಪನೆ ನಡೆಸುವುದಾಗಿ ತಿಳಿಸಲಾಗಿತ್ತು. ಆದರೆ ಈ ಕಾರ್ಯಕ್ರಮವು ದಿಢೀರನೆ ರದ್ದುಗೊಂಡಿತು. ಈ ಕುರಿತು ಪ್ರತಿಕ್ರಿಯಿಸಿದ ಮದಲೈ ಮುತ್ತು ಅವರು ಶಂಕುಸ್ಥಾಪನೆ ನೆರವೇರಿಸಬೇಕಾದರೆ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಆಹ್ವಾನ ಮಾಡಬೇಕು. ಆದರೆ ಇದು ಯಾವುದು ಆಗದೆ ಇರುವ ಕಾರಣ ಶಂಕುಸ್ಥಾಪನೆ ಇಂದು ನಡೆಯುವುದಿಲ್ಲ. ಬದಲಿಗೆ ಧಾರ್ಮಿಕ ಪೂಜೆ ನಡೆಯುತ್ತದೆ. ಇದು ವೈಯಕ್ತಿಕ ಕಾರ್ಯಕ್ರಮ ಎಂದು ತಿಳಿಸಿದರು. ‘ಶಂಕುಸ್ಥಾಪನೆ ಅಲ್ಲ, ಧಾರ್ಮಿಕ ಆಶೀವಚರ್Àನ’ ಎಂದು ಸ್ಪಷ್ಟೀಕರಣ ನೀಡಿದರು.