ಮಡಿಕೇರಿ, ಜೂ.11: ಮಡಿಕೇರಿ-ಕುಶಾಲನಗರ ರಸ್ತೆ ಡಾಂಬರೀಕರಣ, ಮೈಸೂರು ರಿಂಗ್ ರಸ್ತೆ ಹಾಗೂ ಮಡಿಕೇರಿ-ಸಂಪಾಜೆ ರಸ್ತೆ (ಎನ್ ಎಚ್ 275)ಯಲ್ಲಿ ತಡೆಗೋಡೆ ಸೇರಿದಂತೆ ವಿವಿಧ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣ ಗೊಳಿಸಿ ಶೀಘ್ರ ಕಾಮಗಾರಿಗಳನ್ನು ಆರಂಭಿಸುವಂತೆ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.ಸಂಸದ ಪ್ರತಾಪ್ ಸಿಂಹ ಅವರು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಮಹಾನಿರ್ದೇಶಕ ಐ ಜಿ ಪಾಂಡೆ ಅವರನ್ನು ಹೊಸದಿಲ್ಲಿಯಲ್ಲಿ ಬುಧವಾರ ಭೇಟಿ ಮಾಡಿ ಜಿಎಸ್ಟಿಗೆ ಸಂಬಂಧಿಸಿದ ತಾಂತ್ರಿಕ ಕಾರಣಗಳಿಗೆ ಟೆಂಡರ್ ಪ್ರಕ್ರಿಯೆ ತಡೆಹಿಡಿಯದೆ ಕಾಮಗಾರಿಗಳ ಆರಂಭಕ್ಕೆ ಅನುಮೋದನೆ ನೀಡಿ ಮಳೆಗಾಲದಲ್ಲಿ ಹೆದ್ದಾರಿ ಸಂಚಾರದ ತೊಂದರೆಗಳನ್ನು ತಪ್ಪಿಸಬೇಕಿದೆ ಎಂದು ಮನವರಿಕೆ ಮಾಡಿಕೊಟ್ಟರು. ಕೊಡಗಿನಲ್ಲಿ ಅತಿವೃಷ್ಟಿಯಿಂದ ರಸ್ತೆಗಳು ಹಾಳಾಗಿದ್ದು, ಮಡಿಕೇರಿ-ಸಂಪಾಜೆ ಮಾರ್ಗದಲ್ಲಿ ಮಳೆಗಾಲಕ್ಕೆ ಮುನ್ನ ಭೂಕುಸಿತ ತಡೆಯಲು ತಡೆಗೋಡೆ ನಿರ್ಮಾಣ ತುರ್ತಾಗಿ ಆಗಿಬೇಕಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಮಡಿಕೇರಿ-ಕುಶಾಲನಗರ ರಸ್ತೆ ಡಾಂಬರೀಕರಣಕ್ಕೆ ಸುಮಾರು 30 ಕೋಟಿ ರೂ. ಹಾಗೂ ಮಡಿಕೇರಿ-ಸಂಪಾಜೆ ರಸ್ತೆ (ಎನ್ ಎಚ್ 275)ಯಲ್ಲಿ ತಡೆಗೋಡೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸುಮಾರು 58 ಕೋಟಿ ರೂ. ಈಗಾಗಲೆ ಬಿಡುಗಡೆ ಮಾಡಿದೆ.