ಕುಶಾಲನಗರ, ಜೂ. 11: ಹಾಡಹಗಲೇ ಬೈಕ್‍ನಲ್ಲಿ ಬಂದ ಅಪರಿಚಿತರು ವಾಹನವೊಂದನ್ನು ಅಡ್ಡಗಟ್ಟಿ ಚಾಲಕ ಮತ್ತು ಕ್ಲೀನರ್ ಮೇಲೆ ಮೆಣಸಿನಹುಡಿ ಎರಚಿ ಹಣ ದರೋಡೆ ಮಾಡಲು ಯತ್ನಿಸಿ ವಿಫಲವಾದ ಘಟನೆ ಕುಶಾಲನಗರ ಸಮೀಪದ ಆನೆಕಾಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಗುರುವಾರ ಮಧ್ಯಾಹ್ನ 3 ಗಂಟೆಗೆ ಘಟನೆ ನಡೆದಿದ್ದು, ದರೋಡೆ ಕೋರರು ಪರಾರಿಯಾಗಿದ್ದಾರೆ.ಕುಶಾಲನಗರದ ವಿನಾಯಕ ಏಜೆನ್ಸಿಗೆ ಸೇರಿದ ದಿನಬಳಕೆ ವಸ್ತುಗಳನ್ನು ಅಂಗಡಿಗಳಿಗೆ ವಿತರಿಸುವ ಗೂಡ್ಸ್ ವಾಹನ (ಕೆಎ.11.ಬಿ.7308) ಮಾದಾಪುರ ಮತ್ತು ಸುಂಟಿಕೊಪ್ಪ ಕಡೆಯಿಂದ ವ್ಯಾಪಾರದ ಹಣ ಸಂಗ್ರಹಿಸಿ ಕುಶಾಲನಗರಕ್ಕೆ ಹಿಂತಿರುಗುತ್ತಿದ್ದ ಸಂದರ್ಭ, ವಾಹನವನ್ನು ಹಿಂಬಾಲಿಸಿಕೊಂಡು ಬೈಕ್‍ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ವಾಹನವನ್ನು ತಡೆದಿದ್ದಾರೆ. ನಂತರ ಈ ವಾಹನಕ್ಕೆ ಸಾಲ ಇದೆ. ವಸೂಲಿಗೆ ಬಂದಿದ್ದೇವೆ ಎಂದು ಬೈಕ್‍ನ ಹಿಂಬದಿ ಸವಾರ ಮಾತುಕತೆ ಪ್ರಾರಂಭಿಸಿದ್ದಾನೆ. ಇದೇ ಸಂದರ್ಭ ಚಾಲಕ ತನ್ನ ಮಾಲೀಕರಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ಸಾಲದ ಬಗ್ಗೆ ಚರ್ಚಿಸುತ್ತಿದ್ದಾಗ ಏಕಾಏಕಿ ಖಾರದ ಪುಡಿ ಮುಖಕ್ಕೆ ಎರಚಿದ್ದಾರೆ. ಕಣ್ಣು, ಮೈಮೇಲೆ ಖಾರದ ಪುಡಿ ಬಿದ್ದು, ವಿಚಲಿತನಾದ ಚಾಲಕ ವಾಹನವನ್ನು ಮುಂದಕ್ಕೆ ಚಾಲಿಸಿದ್ದು ಈ ಸಂದರ್ಭ ಬೈಕ್‍ನಲ್ಲಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ.
ನಂತರ ಆನೆಕಾಡು ಬಳಿಯ ಹೋಟೆಲ್ ಒಂದರಲ್ಲಿ ಬಂದು ಮುಖ ತೊಳೆದುಕೊಂಡು ಮಾಹಿತಿ ಯನ್ನು (ಮೊದಲ ಪುಟದಿಂದ) ಪೊಲೀಸರಿಗೆ ತಿಳಿಸಿದ ಮೇರೆಗೆ ಗುಡ್ಡೆಹೊಸೂರಿನಲ್ಲಿದ್ದ ಹೈವೇ ಪಟ್ರೋಲಿಂಗ್ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆಯಲ್ಲಿ ಗೂಡ್ಸ್ ವಾಹನ ಚಾಲಕ ಕಿರಣ್ ಮತ್ತು ಸಹಚರ ರಾಜು ಅವರ ದೇಹದಲ್ಲಿ ಸಂಪೂರ್ಣ ಮೆಣಸಿನ ಹುಡಿ ಕಂಡುಬಂತು. ಯಾವುದೇ ಅಪಾಯವಿಲ್ಲದೆ ಪಾರಾಗಿರುವುದು ಸಂತಸದ ವಿಷಯ ಎಂದು ವಿನಾಯಕ ಏಜೆನ್ಸಿ ಮಾಲೀಕರಾದ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಮಾದಾಪುರ ಮತ್ತು ಸುಂಟಿಕೊಪ್ಪ ವ್ಯಾಪ್ತಿಯಿಂದ ಸಂಗ್ರಹಗೊಂಡ 70 ಸಾವಿರಕ್ಕೂ ಅಧಿಕ ಹಣ ವಾಹನದಲ್ಲಿತ್ತು. ಈ ಹಿನ್ನೆಲೆಯಲ್ಲಿ ದರೋಡೆಗೆ ಪ್ರಯತ್ನಿಸಿರುವ ಸಾಧ್ಯತೆಯಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳ ಪೈಕಿ ಓರ್ವ ಮುಖಕ್ಕೆ ಬಟ್ಟೆಯಿಂದ ಮುಚ್ಚಿಕೊಂಡಿದ್ದು ಆತನ ಸುಳಿವು ಪತ್ತೆಯಾಗಿಲ್ಲ ಎಂದು ಚಾಲಕ ಕಿರಣ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನಂದೀಶ್ ಮತ್ತು ಸಿಬ್ಬಂದಿಗಳು ಮಹಜರು ನಡೆಸಿ ಮಾಹಿತಿ ಪಡೆದುಕೊಂಡು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.