ವೀರಾಜಪೇಟೆ, ಜೂ. 11: ಸರಕಾರದ ಆದೇಶದಂತೆ ಶಾಲೆಗಳು ಪ್ರತಿ ವರ್ಷ ಶೇ. 15 ರ ಮಿತಿಯ ಒಳಗೆ ಬೋಧನಾ ಶುಲ್ಕ ಹೆಚ್ಚಿಸಲು ಅವಕಾಶ ಇದ್ದರೂ ಈ ಬಾರಿ 2020-21ನೇ ಸಾಲಿನಲ್ಲಿ ಕೊರೊನಾ ಕಾರಣ ಪೋಷಕರು ತೀವ್ರ ಅರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿ ಶುಲ್ಕ ಹೆಚ್ಚಿಸಬಾರದು ಎಂದು ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಶಿಕ್ಷಣ ಸಂಸ್ಥೆಗಳ 1995 ರ ನಿಯಮ 10 ಮತ್ತು 7 ರ ಪ್ರಕಾರ ವಿದ್ಯಾರ್ಥಿಗಳ ಮತ್ತು ಪೋಷಕರ ಆಯ್ಕೆಯಂತೆ ಶಾಲಾ ಶುಲ್ಕವನ್ನು ಪ್ರತಿ ತಿಂಗಳು, ಮೂರು ತಿಂಗಳಿಗೆ, ಅರ್ಧ ವಾರ್ಷಿಕವಾಗಿ ಅಥವಾ ವರ್ಷದ ಶುಲ್ಕವನ್ನು ಒಂದೇ ಬಾರಿ ಪಾವತಿಸಬಹುದಾಗಿದೆ. ಈ ಶುಲ್ಕವನ್ನು ಚೆಕ್, ಆರ್.ಟಿ.ಜಿ.ಎಸ್., ನೆಫ್ಟ್, ಆನ್‍ಲೈನ್ ಮೂಲಕವೇ ಆಯಾ ಶಾಲೆಯವರು ಕಡ್ಡಾಯವಾಗಿ ಪಡೆಯಬೇಕು. ಆ ಮೂಲಕ ಯಾವುದೇ ಕಾರಣಕ್ಕೂ ಲಾಕ್‍ಡೌನ್ ಸಂದರ್ಭ ವಿದ್ಯಾರ್ಥಿಗಳು ಅಥವಾ ಪೋಷಕರು ಶಾಲಾ ಆವರಣಕ್ಕೆ ಬಾರದಂತೆ ನೋಡಿಕೊಳ್ಳಬೇಕು.

ಆಡಳಿತ ಮಂಡಳಿ ಪೋಷಕರಿಗೆ ಇ-ಮೇಲ್ ಮೂಲಕ ಸೂಚನೆ ನೀಡುವಾಗ, ಶುಲ್ಕ ಪಾವತಿಸಲು ಶಕ್ತರಾದವರು ಹಾಗೂ ಸ್ವಇಚ್ಛೆಯಿಂದ ಪಾವತಿಸುವ ಪೋಷಕರು ಮಾತ್ರ ಪಾವತಿಸಬಹುದು. ಸಧ್ಯದ ಪರಿಸ್ಥಿತಿಯಲ್ಲಿ ಶುಲ್ಕ ಪಾವತಿಸಲು ಸಾಧ್ಯವಿಲ್ಲದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪೋಷಕರು ಶುಲ್ಕ ಪಾವತಿಸುವ ಆಗತ್ಯವಿರುವುದಿಲ್ಲ, ಈ ಆದೇಶವನ್ನು ಶಾಲಾ ಆಡಳಿತ ಮಂಡಳಿ ಮೀರಿದಲ್ಲಿ ಇಲ್ಲವೇ ಏನಾದರೂ ಪೋಷಕರಿಂದ ದೂರು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣಾಧಿಕಾರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.