ಕುಶಾಲನಗರ, ಜೂ. 11: ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆಯಲ್ಲಿರುವ ಸರ್ವೆ ನಂ 148 ರಲ್ಲಿ ಭೂಮಿಯೊಳಗೆ ಹುದುಗಿರುವ ದೇವರ ವಿಗ್ರಹಗಳನ್ನು ಹೊರತೆಗೆಯಬೇಕೆಂಬ ಆಗ್ರಹ ಹಿನ್ನೆಲೆಯಲ್ಲಿ ಅಧಿಕಾರಿಗಳು ಜಾಗದ ಸರ್ವೆ ಕಾರ್ಯ ನಡೆಸಿದರು.
ನಳಿನಿ ಶೇಷಾದ್ರಿ ಎಂಬವರಿಗೆ ಸೇರಿದ ಜಾಗದಲ್ಲಿ ಭೂಮಿಯೊಳಗೆ ದೇವರ ವಿಗ್ರಹಗಳು ಹುದುಗಿವೆ. ಅದನ್ನು ಹೊರತೆಗೆಯಬೇಕೆಂದು ಒತ್ತಾಯಿಸಿ ಶಾಂತಲ ಅಕ್ಷರ ಶಕ್ತಿ ಎಂಬ ಮಹಿಳೆ ಹಲವು ವರ್ಷಗಳಿಂದ ಆಗ್ರಹಿಸಿದ ಹಿನ್ನೆಲೆಯಲ್ಲಿ ಸರ್ವೆ ಕಾರ್ಯ ನಡೆಸಿದೆ.
ಈ ಹಿನ್ನೆಲೆಯಲ್ಲಿ ವಿವಾದಿತ ಜಾಗ ಖಾಸಗಿ ವ್ಯಕ್ತಿಯ ಒಡೆತನದಲ್ಲಿದೆಯೇ ಅಥವಾ ಸರಕಾರಿ ಭೂಮಿಯೇ ಎಂದು ಪತ್ತೆ ಹಚ್ಚಲು ತಾಲೂಕು ತಹಶೀಲ್ದಾರ್ ಗೋವಿಂದರಾಜು ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆಯಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಗೋವಿಂದರಾಜು, ಪ್ರಸಕ್ತ ಜಾಗ ಖಾಸಗಿ ವ್ಯಕ್ತಿಯ ಸುಪರ್ದಿಯಲ್ಲಿದೆ. ಮಹಿಳೆಯ ಒತ್ತಾಯದ ಹಿನ್ನೆಲೆಯಲ್ಲಿ ಸ್ಥಳವನ್ನು ಸರ್ವೆ ನಡೆಸಿ ವಿವಾದಿತ ಜಾಗ ಖಾಸಗಿಯೇ ಅಥವಾ ಸರಕಾರಿ ಜಾಗವೇ ಎಂಬ ಬಗ್ಗೆ ಪಟ್ಟಣ ಪಂಚಾಯಿತಿಗೆ ವರದಿ ನೀಡಲಾಗುವುದು ಎಂದು ತಿಳಿಸಿದರು.
ಈ ಬಗ್ಗೆ ಮಾತನಾಡಿದ ಜಾಗದ ಮಾಲೀಕರಾದ ನಳಿನಿ ಶೇಷಾದ್ರಿ ಅವರ ಪುತ್ರ ಆನಂದ ಸಾಗರ್, ತಮ್ಮದೇ ಕಟ್ಟಡದಲ್ಲಿ ಈ ಹಿಂದೆ ಶಾಲೆ ನಡೆಸುತ್ತಿದ್ದ ಮಹಿಳೆ ದೇವರ ಹೆಸರಿನಲ್ಲಿ ವಿವಾದ ಹುಟ್ಟುಹಾಕಿ ವಿನಾಕಾರಣ ತಮಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭ ಪಪಂ ಮುಖ್ಯಾಧಿಕಾರಿ ಸುಜಯ್ ಕುಮಾರ್, ಕಂದಾಯ ನಿರೀಕ್ಷಕ ಮಧುಸೂಧನ್, ಪಪಂ ಸದಸ್ಯ ಅಮೃತ್ ರಾಜ್, ವಕೀಲ ಆರ್.ಕೆ.ನಾಗೇಂದ್ರಬಾಬು, ಗ್ರಾಮಲೆಕ್ಕಿಗ ಗೌತಮ್, ಪಂಚಾಯಿತಿ ಅಧಿಕಾರಿ ಸತೀಶ್, ದೂರುದಾರ ಮಹಿಳೆ ಶಾಂತಲ ಅಕ್ಷರ ಶಕ್ತಿ ಸ್ಥಳದಲ್ಲಿ ಇದ್ದರು.