ವೀರಾಜಪೇಟೆ, ಜೂ. 11: ವೀರಾಜಪೇಟೆಯ ತಿತಿಮತಿ ಬಳಿಯ ಬೆಮ್ಮತ್ತಿ ಎಂಬಲ್ಲಿ ನಡೆದ ಎರಡು ಕುಟುಂಬಗಳ ನಡುವಿನ ಕಲಹ ಪ್ರಕರಣದಲ್ಲಿ ಜಿಲ್ಲಾ ವಕ್ಫ್ ಮಂಡಳಿಯ ಉಪಾಧ್ಯಕ್ಷ ಬಾಪುಟ್ಟಿ ಎಂಬವರ ಹೆಸರನ್ನು ಅನಾವಶ್ಯಕವಾಗಿ ಸೇರಿಸಲಾಗಿದ್ದು, ಇದನ್ನು ಪರಿಶೀಲಿಸಿ ಕೈ ಬಿಡುವಂತೆ ಒತ್ತಾಯಿಸಿ ಜೆ.ಡಿ.ಎಸ್. ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ವೀರಾಜಪೇಟೆ ವಲಯದ ಡಿ.ವೈ.ಎಸ್.ಪಿ. ಜಯಕುಮಾರ್ ಅವರಿಗೆ ಖುದ್ದು ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಜಯಕುಮಾರ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಬೆಮ್ಮತ್ತಿ ಗ್ರಾಮದಲ್ಲಿ ಕುಟುಂಬದ ಕಲಹಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಗೋಣಿಕೊಪ್ಪಲಿನ ಪೊಲೀಸರು ಎಫ್.ಐ.ಆರ್. ದಾಖಲಿಸಿದ್ದರು.

ಡಿ.ವೈ.ಎಸ್.ಪಿ.ಗೆ ಮನವಿ ಸಲ್ಲಿಸುವ ಸಂದರ್ಭ ಜೆಡಿಎಸ್‍ನ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ಮನ್ಸೂರ್ ಆಲಿ, ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ವೀರಾಜಪೇಟೆ ಕ್ಷೇತ್ರದ ಅಧ್ಯಕ್ಷ ಎಸ್.ಹೆಚ್. ಮತೀನ್, ನಗರ ಸಮಿತಿ ಅಧ್ಯಕ್ಷ ಪಿ.ಎ. ಮಂಜುನಾಥ್ ಮತ್ತಿತರ ಕಾರ್ಯಕರ್ತರು ಹಾಜರಿದ್ದರು.