ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ
ನವದೆಹಲಿ, ಜೂ. 11: ದೇಶದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವಂತೆ ಪೆಟ್ರೋಲ್ ಹಾಗೂ ಡೀಸೆಲ್ ತೈಲ ಬೆಲೆ ಏರಿಕೆ ಗುರುವಾರವೂ ಮುಂದುವರೆದಿದ್ದು, ಗ್ರಾಹಕರಿಗೆ ಬರೆ ಹಾಕುತ್ತಿವೆ. ಪ್ರತಿ ಲೀಟರ್ಗೆ ತಲಾ 60 ಪೈಸೆ ಹೆಚ್ಚಳ ಮಾಡಲಾಗಿದೆ. ಪರಿಷ್ಕರಣೆಯಲ್ಲಿ 82 ದಿನಗಳ ವಿರಾಮ ಕೊನೆಯಾದ ನಂತರ ಸತತ ಐದನೇ ದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಕಂಡಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 73.40 ರೂ. ನಿಂದ 74 ರೂ.ಗೆ ಹಾಗೂ ಡೀಸೆಲ್ ದರ ಲೀಟರ್ಗೆ 71.62 ರಿಂದ 72.22 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಸರಕಾರಿ ತೈಲ ಕಂಪೆನಿಗಳು ಹೇಳಿವೆ. ಒಟ್ಟಾರೆ ಕಳೆದ ಐದು ದಿನಗಳಿಂದ ದೇಶದಲ್ಲಿ ಪೆಟ್ರೋಲ್ 2.74 ರೂ. ಮತ್ತು ಡಿಸೇಲ್ 2.83 ರೂ. ಏರಿಕೆಯಾಗಿದೆ.
ಆರ್ಬಿಐ ಅಧಿಕಾರಿಗಳಿಂದ ಆರ್ಥಿಕ ಚರ್ಚೆ
ನವದೆಹಲಿ, ಜೂ. 11: ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದು, ಮೈಕ್ರೋ ಎಕಾನಾಮಿಕ್ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಆರ್ಥಿಕತೆಯ ವಿವಿಧ ಕ್ಷೇತ್ರಗಳ ಬಗ್ಗೆ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳಿಂದ ಅಭಿಪ್ರಾಯವನ್ನೂ ಸಂಗ್ರಹಿಸಿದ್ದಾರೆ. ಕ್ರೆಡಿಟ್ ರೇಟಿಂಗ್ ಸಂಸ್ಥೆ ಸ್ಟ್ಯಾಂಡರ್ಡ್ ಹಾಗೂ ಪೂರ್ಸ್ ಭಾರತದ ದೀರ್ಘಾವಧಿಯ ವಿದೇಶಿ ಹಾಗೂ ಸ್ಥಳೀಯ ಕ್ರೆಡಿಟ್ನ್ನು ಅತ್ಯಂತ ಕಡಿಮೆ ಹೂಡಿಕೆ ಗ್ರೇಡ್ ನೀಡಿದ್ದು, ಆರ್ಥಿಕತೆಗೆ ಸಂಬಂಧಿಸಿದಂತೆ ಸ್ಥಿರತೆ ಕಾಯ್ದುಕೊಳ್ಳಲಿದೆ ಎಂಬ ವರದಿ ಪ್ರಕಟಿಸಿತ್ತು. ಈ ಬೆನ್ನಲ್ಲೇ ಆರ್ಬಿಐ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. ಭಾರತದ ದೀರ್ಘಾವಧಿಯ ರೇಟಿಂಗ್ನ್ನು ಬಿಬಿಬಿ-ಮೈನಸ್ ನೀಡಿದ್ದು, ಅಲ್ಪಾವಧಿಯ ರೇಟಿಂಗ್ನ್ನು ಂ3 ನಲ್ಲಿ ಗುರುತಿಸಲಾಗಿದೆ. ಜೂ. 1 ರಂದು ಮೂಡೀಸ್ ಭಾರತದ ರೇಟಿಂಗ್ನ್ನು ಬಿಎಎ2-ಬಿಎಎ3ಗೆ ಇಳಿಕೆ ಮಾಡಿತ್ತು.
ರಾಹುಲ್ ವಿರುದ್ಧ ಸೇನೆ ಅಸಮಾಧಾನ
ನವದೆಹಲಿ, ಜೂ. 11: ಲಡಾಖ್ ಗಡಿಯಲ್ಲಿ ಚೀನಾ ಜೊತೆಗಿನ ಭಾರತದ ಪ್ರಸ್ತುತ ನಿಲುವು ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗಳು “ಅನಪೇಕ್ಷಿತ ಮತ್ತು ಶೋಚನೀಯ” ಎಂದು ಸಶಸ್ತ್ರ ಪಡೆಗಳ ಹಿರಿಯರು, ಪರಿಣತರು ಖಂಡಿಸಿದ್ದಾರೆ. ಈ ಕುರಿತು ಗುರುವಾರ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ 71 ಹಿರಿಯ ಅಧಿಕಾರಿಗಳು ಸಹಿ ಹಾಕಿದ್ದು, “ನಾವು ಸೇನೆ, ನೌಕಾಪಡೆ ಮತ್ತು ವಾಯುಸೇನೆಯಲ್ಲಿ ಸಾಕಷ್ಟು ಕಾಲ ಸೇವೆ ಸಲ್ಲಿಸಿದ ಅನುಭವಿಗಳು, ಪ್ರಸ್ತುತ ಲಡಾಖ್ ಗಡಿಯಲ್ಲಿ ಭಾರತೀಯ ಮತ್ತು ಚೀನಾದ ಪಡೆಗಳ ನಡುವಿನ ನಿಲುಗಡೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರ ಇತ್ತೀಚಿನ ಅನಪೇಕ್ಷಿತ ಟ್ವೀಟ್ಗಳು ಮತ್ತು ಕಮೆಂಟ್ಗಳು ಆತಂಕ ಹುಟ್ಟಿಸುತ್ತವೆ ಎಂದಿದ್ದಾರೆ. ರಾಹುಲ್ ಗಾಂಧಿ ಈ ವಿವಾದದ ಇತಿಹಾಸವನ್ನಾದರೂ ಓದಬೇಕೆಂದು ನಾವು ಬಯಸುತ್ತೇವೆ ಮತ್ತು 1962 ಅನ್ನು ಅವರು ಎಂದಿಗೂ ಮರೆಯಬಾರದು, ಅವರ ಮುತ್ತಜ್ಜ ಜವಾಹರಲಾಲ್ ನೆಹರೂ ಅವರೇ ನೇತೃತ್ವ ವಹಿಸಿದ್ದು ಮತ್ತು ನಾವು ಆಗ ಸಂಪೂರ್ಣ ಸಿದ್ಧತೆಯಿಲ್ಲದೆ ಸಿಕ್ಕಿಬಿದ್ದಿದ್ದೆವು. ಅದರಿಂದ ಬಹಳ ಅವಮಾನವನ್ನು ಅನುಭವಿಸಬೇಕಾಯಿತು ನಮ್ಮ ಸೈನಿಕರು ಧೈರ್ಯದಿಂದ ಹೋರಾಡಿ ಚೀನಾಕ್ಕೆ ಭಾರಿ ಪ್ರಮಾಣದ ಸಾವು ನೋವುಗಳನ್ನು ಉಂಟು ಮಾಡಿದರೂ, ಚೀನಾದ ಕೈಯಲ್ಲಿ ಸೋಲು ಅನುಭವಿಸಬೇಕಾಯಿತು ಎಂದಿದ್ದಾರೆ.
ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿ ನೇಮಕ
ಬೆಂಗಳೂರು, ಜೂ. 11: ಗ್ರಾಮ ಪಂಚಾಯಿತಿಗಳಿಗೆ ಶೀಘ್ರ ಚುನಾವಣೆ ನಡೆಸಲು ಉದ್ದೇಶಿಸಿದ್ದು, ಅಲ್ಲಿಯವರೆಗೆ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಹೇಳಿದ್ದಾರೆ. ಇಂದು ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆ.ಸಿ. ಮಾಧುಸ್ವಾಮಿ, ಜಿಲ್ಲಾಧಿಕಾರಿ ಹಂತದಲ್ಲಿ ಆಡಳಿತಾಧಿಕಾರಿಗಳನ್ನು ನೇಮಿಸಲಾಗುವುದು. ತಕ್ಷಣದಿಂದ ಜಾರಿಗೆ ಬರುವಂತೆ ಈ ಕುರಿತು ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು. ಕರ್ನಾಟಕ ಉಪ ಖನಿಜ ನಿಯಮಾವಳಿ ಬದಲಿಸಲಾಗಿದೆ. ಇದರಿಂದ ತೂಕದ ಮೇಲೆ ರಿಯಾಯಿತಿ, ಬಿಲ್ ಕಟಾವಿನಲ್ಲಿ ರಾಜಧನ ಕಡಿಮೆ ಮಾಡುವ, ಸಣ್ಣ ಪ್ರಮಾಣದ ತೆರಿಗೆ, ಗ್ರಾನೈಟ್ ಉದ್ಯಮದಲ್ಲಿ ಕಡಿಮೆ ರಾಜಧನ ವಸೂಲಿ ಮಾಡಲು ತೀರ್ಮಾನಿಸಲಾಗಿದೆ ಎಂದರು. ಇಂದಿರಾ ಕ್ಯಾಂಟೀನ್ನಲ್ಲಿ ದರ ಹೆಚ್ಚಿಸಬೇಕು ಎಂಬ ವಿಚಾರ ಚರ್ಚೆಗೆ ಬಂದಿತ್ತು. ಬೆಲೆ ಹೆಚ್ಚಳ ಅನಿವಾರ್ಯ ಎಂಬ ಪ್ರಸ್ತಾಪವಾಯಿತಾದರೂ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಮುಂದಿನ ಸಂಪುಟ ಸಭೆಯಲ್ಲಿ ಈ ಪ್ರಸ್ತಾವದ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಅಮೂಲ್ಯ ಜಾಮೀನು ಅರ್ಜಿ ತಿರಸ್ಕøತ
ಬೆಂಗಳೂರು, ಜೂ. 11: ಸಿಎಎ ಹಾಗೂ ಎನ್ಆರ್ಸಿ ವಿರೋಧಿ ಪ್ರತಿಭಟನೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿ ಜೈಲು ಪಾಲಾಗಿರುವ ಅಮೂಲ್ಯ ಲಿಯೋನಾ ಅವರ ಜಾಮೀನು ಅರ್ಜಿಯನ್ನು ಸಿಟಿ ಸಿವಿಲ್ ಕೋರ್ಟ್ ಗುರುವಾರ ತಿರಸ್ಕರಿಸಿದೆ. ಜಾಮೀನು ಕೋರಿ ಅಮೂಲ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಧೀಶ ವಿದ್ಯಾಧರ್ ಶಿರಹಟ್ಟಿ ಅವರು, ಆರೋಪಿಗೆ ಜಾಮೀನು ನೀಡಿದರೆ ತಪ್ಪಿಸಿಕೊಳ್ಳಬಹುದು ಮತ್ತು ಬೇರೆ ರೀತಿಯ ಅಪರಾಧಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಸಮಾಜಕ್ಕೂ ಒಳಿತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಕರಣದ ತನಿಖೆಯೂ ಪೂರ್ಣಗೊಂಡಿಲ್ಲ ಮತ್ತು ತನಿಖಾಧಿಕಾರಿಗಳು ಇನ್ನೂ ಚಾರ್ಜ್ ಶೀಟ್ ಸಲ್ಲಿಸಿಲ್ಲ ಎಂದು ನ್ಯಾಯಾಧೀಶರು ಜಾಮೀನು ನಿರಾಕರಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆದ ಸಿಎಎ, ಎನ್ಆರ್ಸಿ ವಿರೋಧಿ ಸಮಾವೇಶದಲ್ಲಿ ಅಮೂಲ್ಯ ಭಾಗಿಯಾಗಿದ್ದರು.
ಮೂವರು ಎಲ್ಇಟಿ ಉಗ್ರರ ಬಂಧನ
ಶ್ರೀನಗರ, ಜೂ. 11: ಉತ್ತರ ಕಾಶ್ಮೀರದ ಗಡಿ ಜಿಲ್ಲೆಯಾದ ಕುಪ್ವಾರಾದಲ್ಲಿ ಭದ್ರತಾ ಪಡೆಗಳು ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಜಾಲವನ್ನು ಪತ್ತೆ ಮಾಡಿ, ಅವರಿಂದ ಅಫೀಮು ಮತ್ತು ಭಾರತೀಯ ಕರೆನ್ಸಿಯನ್ನು ವಶಪಡಿಸಿಕೊಂಡಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ನ ವಿಶೇಷ ತಂಡ ಮತ್ತು ಸಿಆರ್ಪಿಎಫ್ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಕಣಿವೆಯಲ್ಲಿ ಮಾದಕ ವಸ್ತು ಪೂರೈಕೆ ಮತ್ತು ಹಿಂಸಾಚಾರಗಳಲ್ಲಿ ಭಾಗಿಯಾಗಿದ್ದ ಮೂವರು ಎಲ್ಇಟಿ ಉಗ್ರರನ್ನು ಬಂಧಿಸಿವೆ ಎಂದು ಅವರು ತಿಳಿಸಿದ್ದಾರೆ. ಲಷ್ಕರ್ಜಾಲದ ಸದಸ್ಯರು ಪಾಕಿಸ್ತಾನದಲ್ಲಿರುವ ಸಂಘಟನೆಯ ಹಿರಿಯ ಉಗ್ರರೊಂದಿಗೆ ಸಂಪರ್ಕದಲ್ಲಿದ್ದರು. ಈ ಕುರಿತಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅರಣ್ಯ ಸಿಬ್ಬಂದಿಗೆ 30 ಲಕ್ಷ ಪರಿಹಾರ
ಬೆಂಗಳೂರು, ಜೂ. 11: ಕರ್ತವ್ಯನಿರತ ಅರಣ್ಯ ಇಲಾಖೆ ಸಿಬ್ಬಂದಿ ಮೃತಪಟ್ಟ ಸಂದರ್ಭ ನೀಡಲಾಗುವ ಪರಿಹಾರ ಮೊತ್ತವನ್ನು 20 ಲಕ್ಷದಿಂದ 30 ಲಕ್ಷಕ್ಕೆ ರಾಜ್ಯ ಸರ್ಕಾರ ಹೆಚ್ಚಿಸಿದೆ. ಈ ವರ್ಷದ ಜೂನ್ ತಿಂಗಳಿನಿಂದಲೇ ಇದು ಜಾರಿಯಾಗಲಿದೆ. ಪೊಲೀಸ್ ಸಿಬ್ಬಂದಿಯಂತೆ ಅರಣ್ಯಾ ಸಿಬ್ಬಂದಿ ಮೃತಪಟ್ಟಾಗ ಅವರ ಕುಟುಂಬ ಸದಸ್ಯರಿಗೆ 30 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆಗಾರರು, ಕಳ್ಳರನ್ನು ತಡೆಯುವಾಗ ಅಥವಾ ವನ್ಯಜೀವಿಗಳ ದಾಳಿಯಿಂದ ಅರಣ್ಯ ಸಿಬ್ಬಂದಿ ಮೃತಪಟ್ಟರೆ ಅವರ ಕುಟುಂಬ ಸದಸ್ಯರಿಗೆ ಪರಿಹಾರ ನೀಡುವ ಯೋಜನೆಯನ್ನು 2018 ಆಗಸ್ಟ್ನಿಂದ ಜಾರಿಗೆ ತರಲಾಗಿದೆ. ಈವರೆಗೂ ರಾಜ್ಯದಲ್ಲಿ ಕರ್ತವ್ಯನಿರತ 49 ರಿಂದ 50 ಅರಣ್ಯ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಬಂಧ ರೂ. 10 ಲಕ್ಷ ಪರಿಹಾರವನ್ನು ಹೆಚ್ಚಿಸುವುದಲ್ಲದೇ, ಪೊಲೀಸರಿಗೆ ಸಮನಾಗಿ ಭತ್ಯೆಯನ್ನು ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದಾಗ್ಯೂ, ದಿವ್ಯಾಂಗರಾದವರಿಗೆ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ಪರಿಹಾರ ಮೊತ್ತವನ್ನು ಹೆಚ್ಚಿಸಿರಲಿಲ್ಲ. ಕರ್ತವ್ಯನಿರತ ಅರಣ್ಯಾಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳಿಂದ ಉಪ ಆರ್ಎಫ್ಒ, ಫಾರೆಸ್ಟ್ ಗಾಡ್ರ್ಸ್ ಹಾಗೂ ಕಾವಲುಗಾರರಿಗೆ ಪರಿಹಾರವನ್ನು ನೀಡಲಾಗುತ್ತದೆ. ವಿವಿಧ ಆನೆ ಶಿಬಿರಗಳಲ್ಲಿರುವ ಮಾವುತರು, ಕಾವಾಡಿಗರಿಗೂ ಇದು ಅನ್ವಯವಾಗಲಿದೆ.