ಸಿದ್ದಾಪುರ, ಜೂ. 11: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಿಂದ ಕಾರ್ಮಿಕ ಮಹಿಳೆಯೊಬ್ಬರು ಪಾರಾದ ಘಟನೆ ಮಾಲ್ದಾರೆ ಗ್ರಾಮದಲ್ಲಿ ನಡೆದಿದೆ. ಮಾಲ್ದಾರೆ ಗ್ರಾಮದ ಕಳ್ಳ ಹಳ್ಳ ನಿವಾಸಿ ಉಷಾ ಎಂಬಾಕೆಯೇ ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾದ ಮಹಿಳೆ. ಉಷಾ ಎಂದಿನಂತೆ ಮಾಲ್ದಾರೆ ಗ್ರಾಮದ ಕಾಫಿ ತೋಟವೊಂದಕ್ಕೆ ಕೂಲಿ ಕೆಲಸಕ್ಕೆ ಹೋಗಿ ಹಿಂತಿರುಗಿ ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಒಂಟಿಸಲಗ ಮಹಿಳೆ ಉಷಾ ಅವರನ್ನು ಬೆನ್ನಟ್ಟಿದೆ. ಸಲಗದಿಂದ ತಪ್ಪಿಸಿಕೊಳ್ಳಲು ಎದ್ದು ಬಿದ್ದು ಓಡಿ ಪ್ರಾಣಾಪಾಯದಿಂದ ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ. ಮಾಲ್ದಾರೆ ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು, ಕಾರ್ಮಿಕರಿಗೆ ಹಾಗೂ ಕಾಫಿ ಬೆಳಗಾರರಿಗೆ ಸಮಸ್ಯೆಯಾಗುತ್ತ್ತಿದೆ ಎಂದು ಮಾಲ್ದಾರೆ ಜನಪರ ಸಂಘಟನೆಯ ಅಧ್ಯಕ್ಷ ಆಂಟೋನಿ ಆರೋಪಿಸಿದ್ದಾರೆ.ಕಾಡಾನೆಗಳ ಹಾವಳಿಯಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ; ಕೂಡಲೇ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಬೇಕು ತಪ್ಪಿದ್ದಲ್ಲಿ ಗ್ರಾಮಸ್ಥರು ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದÀು ಹೇಳಿದ್ದಾರೆ. ಇತ್ತೀಚೆಗೆ ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸಂದರ್ಭದಲ್ಲಿ ಯುವಕನೋರ್ವ ಜಾರಿ ಬಿದ್ದು ಗಾಯಗೊಂಡಿದ್ದಾನೆ. ಸಂಜೆವೇಳೆ ಕಾಡಾನೆ ದಾಳಿ: ಪಾರಾದ ಮಹಿಳೆ
(ಮೊದಲ ಪುಟದಿಂದ) ಕಾಡಾನೆ ಹಾವಳಿ ತಡೆಗೆ ಸರಕಾರ ಶಾಶ್ವತ ಯೋಜನೆಯನ್ನು ರೂಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಒಂಟಿ ಸಲಗದ ಓಡಾಟ-ಆತಂಕ
ಮಾಲ್ದಾರೆ ಪಟ್ಟಣದಲ್ಲಿ ಒಂಟಿ ಸಲಗವೊಂದು ರಾಜಾರೋಷವಾಗಿ ಸುತ್ತಾಡುತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಮಾಲ್ದಾರೆ ಪಟ್ಟಣದ ಮುಖ್ಯ ರಸ್ತೆಯ ಮೂಲಕ ಒಂಟಿ ಸಲಗವೊಂದು ಆಗಿಂದಾಗ್ಗೆ ಸುತ್ತಾಡುತ್ತಾ ಆತಂಕ ಸೃಷ್ಟಿಸುತ್ತಿದೆ.
ಮಾಲ್ದಾರೆ ಪಟ್ಟಣದ ಸಮೀಪದಲ್ಲಿರುವ ಅರಣ್ಯದಿಂದ ದಿನನಿತ್ಯ ಒಂಟಿಸಲಗವೊಂದು ಸಮೀಪದ ಕಾಫಿ ತೋಟಕ್ಕೆ ತೆರಳುತ್ತದೆ. ಕೆಲವೊಮ್ಮೆ ಮಾಲ್ದಾರೆ ಪಟ್ಟಣದ ಮುಖ್ಯ ರಸ್ತೆಯ ಮೂಲಕ ಬೆಳಗ್ಗಿನ ಸಮಯದಲ್ಲಿ ಸುತ್ತಾಡುತಿದ್ದು, ಈ ಹಿನ್ನೆಲೆ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಈ ಭಾಗದಲ್ಲಿ ಕೂಲಿ ಕೆಲಸಕ್ಕೆ ತೆರಳುವ ಕಾರ್ಮಿಕರು ಕೂಡ ಭಯಭೀತರಾಗಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಅವರೆಗುಂದ ನಿವಾಸಿ ಪೆಮ್ಮಯ್ಯ ಎಂಬವರು ಮಾಲ್ದಾರೆ ಪಟ್ಟಣಕ್ಕೆ ಆಗಮಿಸಿ ತಮ್ಮ ಕೆಲಸ ಮುಗಿಸಿಕೊಂಡು ಮನೆಯತ್ತ ಹಿಂತಿರುಗುತ್ತಿದ್ದ ಸಂದರ್ಭ ಮಾಲ್ದಾರೆ ಅಸ್ತಾನದ ಬಳಿ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು. ಇದೀಗ ಒಂಟಿ ಸಲಗವೊಂದು ಮಾಲ್ದಾರೆ ಪಟ್ಟಣದ ದೇವಾಲಯದ ಸಮೀಪ ಬೀಡುಬಿಟ್ಟು ಆತಂಕ ಸೃಷ್ಟಿಸುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೂಡಲೇ ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಆರ್.ಆರ್.ಟಿ. ತಂಡ ಸೂಕ್ತ ರೀತಿಯ ಕ್ರಮ ಕೈಗೊಂಡು ಕಾಡಾನೆಗಳ ಹಾವಳಿಯನ್ನು ತಡೆಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. -ವರದಿ: ವಾಸು