ಕುಶಾಲನಗರ, ಜೂ. 9: ನದಿ, ಪರಿಸರಗಳ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಕುಶಾಲನಗರ ಪಟ್ಟಣ ಪಂಚಾಯಿತಿ ಅಧಿಕಾರಿ ಸತೀಶ್ ತಿಳಿಸಿದ್ದಾರೆ. ಅವರು ಕುಶಾಲನಗರದಲ್ಲಿ ಹುಣ್ಣಿಮೆ ಅಂಗವಾಗಿ ಕಾವೇರಿ ಆರತಿ ಬಳಗದ ಆಶ್ರಯದಲ್ಲಿ ನಡೆದ 107ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನದಿಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸುವ ಮೂಲಕ ನದಿ ನೀರು ಸರಾಗವಾಗಿ ಹರಿಯಲು ಅವಕಾಶ ಕಲ್ಪಿಸುವುದರೊಂದಿಗೆ ಪ್ರವಾಹ, ಪ್ರಕೃತಿ ವಿಕೋಪವನ್ನು ತಪ್ಪಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಅರ್ಚಕ ಕೃಷ್ಣಮೂರ್ತಿ ಭಟ್ ಅವರು ಅಷ್ಟೋತ್ತರ, ಕಾವೇರಿ ಸ್ತೋತ್ರ ಪಠಿಸುವುದರೊಂದಿಗೆ ನದಿಗೆ ಪೂಜೆ ಸಲ್ಲಿಸಿ ಮಹಾ ಆರತಿ ಬೆಳಗುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನದಿ ತಟದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕುಶಾಲನಗರ ಪಪಂ ಮಾಜಿ ಅಧ್ಯಕ್ಷ ಎಂ.ಎಂ. ಚರಣ್, ಉದ್ಯಮಿ ಪುರುಷೋತ್ತಮ್ ರೈ, ಕೊಡಗನ ಹರ್ಷ, ತೋರೇರ ಉದಯಕುಮಾರ್, ಶಿವಶಂಕರ್, ಕಾವೇರಿ ಆರತಿ ಬಳಗದ ಪ್ರಮುಖರಾದ ಎಂ.ಎನ್. ಚಂದ್ರ ಮೋಹನ್, ಡಿ.ಆರ್. ಸೋಮಶೇಖರ್, ಕೆ.ಆರ್. ಶಿವಾನಂದನ್, ಮಂಡೇಪಂಡ ಬೋಸ್ ಮೊಣ್ಣಪ್ಪ, ಅಕ್ಷಯ್, ವನಿತಾ ಚಂದ್ರಮೋಹನ್, ಅಶ್ವಿನಿ ರೈ ಇದ್ದರು.