ಗೋಣಿಕೊಪ್ಪ, ಜೂ. 9: ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾ. 10 ರಂದು ಪೊನ್ನಂಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ಗ್ರಾ.ಪಂ. ನೌಕರರ ಸಂಘದ ಜಿಲ್ಲಾಧ್ಯಕ್ಷ ಭರತ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಬ್ಬಂದಿಗಳ ವೇತನ ಪಾವತಿ ವಿಷಯದಲ್ಲಿ ತಾರತಮ್ಯ ನೀತಿ ಕಾಣುತ್ತಿದೆ. ಸರಿಯಾದ ಸಮಯಕ್ಕೆ ವೇತನ ಪಾವತಿಯಾಗುತ್ತಿಲ್ಲ. ಸೂಕ್ತ ಸಮಯದಲ್ಲಿ ವೇತನ ಪಾವತಿಯಾಗದಿರಲು ಪಿಡಿಒ ನಿರ್ಲಕ್ಷ್ಯ ಕಾರಣ. ಅಧಿಕಾರಿಗಳು ಸಿಬ್ಬಂದಿಗೆ ಹೆಚ್ಚುವರಿ ಕೆಲಸಗಳನ್ನು ನೀಡುತ್ತಿದ್ದಾರೆ, ಆದರೆ ಅವರ ಸಮಸ್ಯೆಗಳ ಕಡೆಗೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
ಈಗಾಗಲೇ ಸಿಬ್ಬಂದಿ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲವು ಪಂಚಾಯಿತಿಗಳಲ್ಲಿ 12 ಗಂಟೆ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಸಂಖ್ಯೆಯ ಮಾಹಿತಿ ಕಲೆಹಾಕಲು ಸರ್ಕಾರ ಎಡವಿದೆ. ಸರ್ಕಾರದ ಲೆಕ್ಕದಲ್ಲಿ 50 ಸಾವಿರ ನೌಕರರಿದ್ದಾರೆ. ಆದರೆ 60 ಸಾವಿರ ಜನರು ರಾಜ್ಯದ ವಿವಿಧÀ ಪಂಚಾಯಿತಿಗಳಲ್ಲಿ ದುಡಿಯುತ್ತಿದ್ದಾರೆ ಎಂದರು. 14 ನೇ ಹಣಕಾಸು ಆಯೋಗದ ಹಣದಲ್ಲಿ ಸರ್ಕಾರಿ ಆದೇಶದಂತೆ ಸಿಬ್ಬಂದಿಗೆ ವೇತನ ನೀಡಲು ಕ್ರಮ ಕೈಗೊಳ್ಳಬೇಕು. ತೆರಿಗೆ ವಸೂಲಾತಿಯ ಶೇ. 40 ಹಣದಲ್ಲಿ ಬಾಕಿ ಉಳಿದ ವೇತನ ಪಾವತಿಸು ವಂತಾಗಬೇಕು ಹಾಗೂ ವೇತನ ತಡೆಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕು. ಕಾನೂನು ಬಾಹಿರವಾಗಿ ಅಕ್ರಮವಾಗಿ ನೇಮಕಾತಿಗಳು ಗಮನಕ್ಕೆ ಬಂದಿದೆ ಎಂದರು. ಇಎಫ್ಎಂಎಸ್ ತಂತ್ರಾಂಶದಲ್ಲಿ ನೌಕರರ ಮಾಹಿತಿ ದಾಖಲಾಗಲು ಸರ್ಕಾರ ಕ್ರಮ ಕೈಗೊಳ್ಳಬೇಕು ಹಾಗೂ ಕೆಲವು ಕಡೆಗಳಲ್ಲಿ ಸಮಸ್ಯೆಗೆ ಪಿಡಿಒ ನೇರ ಕಾರಣ ವಾಗಿದ್ದಾರೆ ಎಂದು ಆರೋಪಿಸಿದರು. ಗೋಷ್ಠಿಯಲ್ಲಿ ತಾಲೂಕು ಅಧಕ್ಷ ಎಂ.ಬಿ ಹರೀಶ್ ಹಾಗೂ ಕಾರ್ಯದರ್ಶಿ ಹೆಚ್.ಆರ್. ನವೀನ್ ಇದ್ದರು.