ಹೊದ್ದೂರು, ಜೂ. 9: ವಯೋವೃದ್ಧರಿಗೆ, ಹಿರಿಯ ನಾಗರಿಕರಿಗೆ, ದಿವ್ಯಾಂಗರಿಗೆ, ವಿಧವೆಯರಿಗೆ ಹಲವಾರು ವರ್ಷಗಳಿಂದ ಸರಕಾರದ ಮಾಸಾಶನ ಲಭ್ಯವಾಗುತ್ತಿತ್ತು. ಅಂಚೆ ಇಲಾಖೆಯ ಮೂಲಕವೂ ಹಲವರಿಗೆ ಈ ಹಣ ಬಟವಾಡೆಯಾಗುತ್ತಿತ್ತು. ಆದರೆ, ಜನವರಿ ಮಾಹೆಯಿಂದ ಈವರೆಗೆ ಹಲವಾರು ಮಂದಿಗೆ ಈ ಹಣ ಬಂದೇ ಇಲ್ಲ ಎಂದು ಪಿಂಚಣಿದಾರರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಈ ಕುರಿತಂತೆ, ಸಂಬಂಧಿಸಿದ ಅಂಚೆ ಇಲಾಖೆ, ಆಯಾ ವ್ಯಾಪ್ತಿಗೆ ಬರುವ ಖಜಾನೆ, ತಾಲೂಕು ಕಚೇರಿಗಳಲ್ಲಿ ವಿಚಾರಿಸಿದರೂ, ಸಮರ್ಪಕ ಉತ್ತರ ಲಭ್ಯವಿಲ್ಲ. ಅಂಚೆ ಇಲಾಖೆಯ ಮುಖಾಂತರ ವಿತರಣೆಯಾಗುತ್ತಿರುವ ಮಾಸಾಶನವು ಪ್ರತೀ ವರ್ಷವೂ ಒಂದೆರಡು ತಿಂಗಳು ಬರುವುದೇ ಇಲ್ಲ. 3 ವರ್ಷಗಳಿಂದ ಕೆಲವರಿಗೆ ಈ ರೀತಿ ಆದ ಉದಾಹರಣೆಗಳಿವೆ. ಈ ಕುರಿತು ಮಡಿಕೇರಿಯ ಜಿಲ್ಲಾ ಅಂಚೆ ಅಧೀಕ್ಷಕರಿಗೆ ಲಿಖಿತ ದೂರು ನೀಡಲಾಗಿತ್ತು. ಇಲಾಖಾ ತನಿಖೆಗೆ ಮನವಿ ಮಾಡಿದ್ದರೂ ಪ್ರಯೋಜನವಿಲ್ಲವಾಗಿದೆ. ಖುದ್ದು ಅಂಚೆ ಕಚೇರಿ ಅಧೀಕ್ಷಕರ ಕಚೇರಿಗೆ ಭೇಟಿ ನೀಡಿ ವಿವರ ಪಡೆದರೂ ಪ್ರಯೋಜನ ಶೂನ್ಯ. ಈ ಬಗ್ಗೆ ಅಂಚೆ ಇಲಾಖೆಯ ಅಧಿಕಾರಿಗಳು-ಸಂಬಂಧಿಸಿದ ಸಿಬ್ಬಂದಿವರ್ಗದವರೂ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲೆಯ ಹಲವಾರು ಮಾಧ್ಯಮಗಳಲ್ಲಿ ಸಮಗ್ರ ವರದಿ ಪ್ರಕಟವಾದರೂ ಸಂಬಂಧಿಸಿದ ಇಲಾಖಾಧಿಕಾರಿಗಳು ಸ್ಪಂದಿಸದೇ ಮೌನಕ್ಕೆ ಶರಣಾಗಿದ್ದಾರೆ ಎಂದು ಪಿಂಚಣಿ ದೊರೆಯದ ಫಲಾನುಭವಿಗಳು ದೂರಿದ್ದಾರೆ.

ಸೋರಿಕೆಯ ಶಂಕೆ !

ಕೆಲ ಅಧಿಕಾರಿಗಳ ಅಸಡ್ಡೆಯ ಪರಿಣಾಮ ಬಡವರಿಗೆ ದೊರೆಯಬೇಕಾದ ಮಾಸಾಶನದ ಹಣ ಎಲ್ಲೋ ಸೋರಿ ಹೋಗುತ್ತಿರುವ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಬಡವರ ಬಗ್ಗೆ ಕನಿಕರ ತೋರಿ, ಅವರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ, ಹಲವರಿಗೆ ನಿಂತು ಹೋಗಿರುವ ಮಾಸಾಶನದ ಹಣ ಮತ್ತು ಹಿಂದಿನ ವರ್ಷಗಳ ಬಾಕಿಯನ್ನು ಕೊಡಿಸಿಕೊಡುವ ಕ್ರಮ ವಹಿಸುವಂತೆ ಪಿಂಚಣಿ ದೊರೆಯದ ಫಲಾನುಭವಿಗಳು ಆಗ್ರಹಿಸಿದ್ದಾರೆ.