ಸೋಮವಾರಪೇಟೆ, ಜೂ. 9: ಸಾರ್ವಜನಿಕ ವ್ಯಕ್ತಿಯೋರ್ವರು ತಮ್ಮ ಕಾರಿನಲ್ಲಿ ‘ಆಲ್ ಇಂಡಿಯಾ ಕೌನ್ಸಿಲ್ ಆಫ್ ಹ್ಯೂಮನ್ ರೈಟ್ಸ್-ಲಿಬರ್ಟಿ ಅಂಡ್ ಸೋಷಿಯಲ್ ಜಸ್ಟೀಸ್’ ಎಂದು ಅಳವಡಿಸಿಕೊಂಡಿದ್ದ ಫಲಕವನ್ನು ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ತೆಗೆಸಿ, ದಂಡ ವಿಧಿಸಿದ್ದಾರೆ.
ತಾಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ನಳ್ಳಿ ಗ್ರಾಮದ ವ್ಯಕ್ತಿಯೋರ್ವರು ತಮ್ಮ ಮಾರುತಿ ಸ್ವಿಫ್ಟ್ ಕಾರಿನ ಮುಂಭಾಗ ನಂಬರ್ ಪ್ಲೇಟ್‍ಗೆ ಹೊಂದಿಕೊಂಡಂತೆ ‘ಆಲ್ ಇಂಡಿಯಾ ಕೌನ್ಸಿಲ್ ಆಫ್ ಹ್ಯೂಮನ್ ರೈಟ್ಸ್-ಲಿಬರ್ಟಿ ಅಂಡ್ ಸೋಷಿಯಲ್ ಜಸ್ಟೀಸ್’ ಎಂಬ ಫಲಕವನ್ನು ಅಳವಡಿಸಿಕೊಂಡಿದ್ದರು.
ಈ ಬಗ್ಗೆ ಸ್ಥಳೀಯರು ಸೋಮವಾರಪೇಟೆ ಪೊಲೀಸರಿಗೆ ದೂರು ನೀಡಿದ್ದರು. ವಾಹನ ಹಾಗೂ ಮಾಲೀಕನನ್ನು ಠಾಣೆಗೆ ಕರೆಸಿದ ಠಾಣಾಧಿಕಾರಿ ಶಿವಶಂಕರ್ ಅವರು, ವಿಚಾರಣೆ ನಡೆಸಿ, ಸರ್ವೋಚ್ಚ ನ್ಯಾಯಾಲಯದ ಆದೇಶದ ಬಗ್ಗೆ ವಿವರಣೆ ನೀಡಿದರು.
ನ್ಯಾಯಾಲಯದ ಆದೇಶದ ಬಗ್ಗೆ ಯಾವದೇ ಮಾಹಿತಿಯಿಲ್ಲ ಎಂದು ಕಾರಿನ ಮಾಲೀಕ ತಿಳಿಸಿದ ಸಂದರ್ಭ, ‘ಡಿಫೆಕ್ಟಿವ್ ನಂಬರ್ ಪ್ಲೇಟ್’ ಕಲಂನಡಿ ಕಾನೂನು ಕ್ರಮ ಜರುಗಿಸಿದ್ದು, ಮಾಲೀಕರಿಗೆ 500 ದಂಡ ವಿಧಿಸುವ ಮೂಲಕ, ಮುಂದಿನ ದಿನಗಳಲ್ಲಿ ಫಲಕ ಅಳವಡಿಸದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.