ಮಡಿಕೇರಿ, ಜೂ. 8: ಕಳೆದ ಮಾರ್ಚ್ 22 ರಿಂದ ಭಾರತ ಲಾಕ್‍ಡೌನ್ ನಡುವೆ, ಸರಿಯಾಗಿ 78 ದಿನಗಳ ಅವಧಿಗೆ ಬಾಗಿಲು ಮುಚ್ಚಿಕೊಂಡು ಇಂದಿನಿಂದ ಸರಕಾರದಿಂದ ಜಾರಿಗೊಂಡಿರುವ ಷರತ್ತುಗಳ ಅನ್ವಯ ಬಾಗಿಲು ತೆರೆಯಲ್ಪಟ್ಟಿರುವ ದೇವಾಲಯಗಳಲ್ಲಿ ವಿರಳ ಸಂಖ್ಯೆಯ ಭಕ್ತರು ಪುನೀತಭಾವದಿಂದ ದೇವರ ದರ್ಶನ ಪಡೆದರು. ಹೊಟೇಲ್‍ಗಳಲ್ಲೂ ಕ್ಷೀಣ ಸಂಖ್ಯೆಯ ಗ್ರಾಹಕರು ಕಾಣಿಸಿಕೊಂಡರೆ, ವಸತಿಗೃಹಗಳಿಗೆ ಯಾರೂ ಸುಳಿಯಲೇ ಇಲ್ಲ.ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ಶ್ರೀ ಓಂಕಾರೇಶ್ವರ ದೇವಾಲಯ, ಶ್ರೀ ಆಂಜನೇಯ ಗುಡಿ, ಶ್ರೀ ಕೋಟೆ ಮಹಾಗಣಪತಿ ಸನ್ನಿಧಿಗಳಲ್ಲಿ ಸ್ಥಳೀಯ ಕೆಲವಷ್ಟು ಭಕ್ತರು ದರ್ಶನ ಪಡೆದರು. ಅಂತೆಯೇ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಗಳಿಗೂ ಒಂದಿಷ್ಟು ಕೊಡಗಿನ ಭಕ್ತರಷ್ಟೇ ಆಗಮಿಸಿ, ದೇವರ ದರ್ಶನ ಪಡೆದರೆ, ಪಾಡಿ ಶ್ರೀ ಇಗ್ಗುತ್ತಪ್ಪ, ಪಾಲೂರು ಶ್ರೀ ಹರಿಶ್ಚಂದ್ರ - ಮಹಾಲಿಂಗೇಶ್ವರ, ಇರ್ಪು ರಾಮೇಶ್ವರ ಸನ್ನಿಧಿಗಳಲ್ಲಿ ಆಯಾ ಗ್ರಾಮೀಣ ಸದ್ಭಕ್ತರು ಸಂದರ್ಶಿಸಿದ್ದು ಗೋಚರಿಸಿತು.ವಿವಿಧೆಡೆ ದರ್ಶನ : ಮಡಿಕೇರಿಯ ಶ್ರೀ ವಿಜಯ ವಿನಾಯಕ ದೇವಾಲಯ, ಶ್ರೀ ಚೌಡೇಶ್ವರಿ ಸನ್ನಿಧಿ, ಶ್ರೀ ಕರವಾಲೆ ಭಗವತಿ ಮಹಿಷಿ ಮರ್ಧಿನಿ ಸೇರಿದಂತೆ ಇತರ ದೇವಾಲಯಗಳಲ್ಲಿಯೂ ಎಂದಿನಂತೆ ಆಯಾ ಸನ್ನಿಧಿಗಳ ಭಕ್ತರು ದೇವರ ದರ್ಶನ ಪಡೆದು ತೆರಳುತ್ತಿದ್ದ ದೃಶ್ಯ ಗೋಚರಿಸಿದರೆ, ವಿಜಯ ವಿನಾಯಕ ಸನ್ನಿಧಿಯಲ್ಲಿ ಮಾತ್ರ ತಳಿರು ತೋರಣದ ಸ್ವಾಗತ ಲಭಿಸಿತು. ಸಂಕಷ್ಟ ಹರ ಚತುರ್ಥಿ ಪ್ರಯುಕ್ತ ನೂರಾರು ಭಕ್ತರು ಸೇವೆಗೆ ಹೆಸರು ನೋಂದಾಯಿಸಿ ಕೊಂಡಿದ್ದಾಗಿ ಸನ್ನಿಧಿ ಅರ್ಚಕ ಶ್ರೀ ಕೃಷ್ಣಉಪಾಧ್ಯಾಯ ಅವರು ನೆನಪಿಸಿದರು.
ಮೌನದ ಛಾಯೆ : ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನವರಾತ್ರಿ ಪರ್ವ ಕಾಲದಲ್ಲಿ, ಕರಗ ಮಹೋತ್ಸವ ಏರ್ಪಡಿಸುವ ನಾಲ್ಕು ‘ಶಕ್ತಿ’ ದೇವಾಲಯಗಳಲ್ಲಿ ಇಂದು ಸೂತಕದ ಕಾರಣ, ಬಾಗಿಲು ತೆರೆದುಕೊಂಡಿರಲಿಲ್ಲ. ಶ್ರೀ ಕುಂದೂರು ಮೊಟ್ಟೆ, ಚೌರಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕೋಟೆ ಮಾರಿಯಮ್ಮ, ಶ್ರೀ ಕಂಚಿಕಾಮಾಕ್ಷಿ ಹಾಗೂ ಮುತ್ತು ಮಾರಿಯಮ್ಮ ಸನ್ನಿಧಿಗಳಿಗೆ ಏಕ ಸಮುದಾಯದ ನೇತೃತ್ವದಲ್ಲಿ ಪೂಜೆಯ ಕಾರಣ, ಕಂಚಿ ಕಾಮಾಕ್ಷಿ ಅರ್ಚಕ ಕುಟುಂಬದಲ್ಲಿ ಸಂಭವಿಸಿದ ಸಾವಿನಿಂದಾಗಿ ದೇಗುಲಗಳು ಮುಚ್ಚಿಕೊಂಡು ಮೌನದ ಛಾಯೆ ಎದುರಾಯಿತು. ಇನ್ನುಳಿದಂತೆ ನಗರ ಹಾಗೂ ಗ್ರಾಮೀಣ ಭಾಗದ ಬಹುತೇಕ ದೇವಾಲಯಗಳು ಬಾಗಿಲು ತೆರೆದುಕೊಂಡು ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಭಕ್ತರಲ್ಲಿ ಬೇಸರ : ದೇವಾಲಯಗಳ ಬಾಗಿಲು ಕಳೆದ 78 ದಿನಗಳ ಬಳಿಕ ತೆರೆದುಕೊಂಡಿರುವ ಬಗ್ಗೆ ಅನೇಕರು ಸಂತಸ ವ್ಯಕ್ತಪಡಿಸಿದರೂ, ಕನಿಷ್ಟ ತೀರ್ಥ - ಗಂಧವೂ ಲಭಿಸದಿರುವದು ಬೇಸರ ತಂದಿದೆ ಎಂದು ಪರಿತಪಿಸುತ್ತಿದ್ದರು. ಅರ್ಚಕ ವರ್ಗ ಕೂಡ ಆರತಿಗೂ ಅವಕಾಶವಿಲ್ಲದೆ, ಕೇವಲ ಧಾರ್ಮಿಕ ದತ್ತಿ ಇಲಾಖೆಯ ನಿಯಮಾನುಸಾರ ಭಕ್ತರೆಡೆಗೆ ನಗುಬೀರಿ ಕಳುಹಿಸಿಕೊಡುತ್ತಿದ್ದ ಸಾಮಾನ್ಯ ಚಿತ್ರಣ ಎದುರಾಯಿತು.
ಮುಂಜಾಗ್ರತಾ ಕ್ರಮ : ದೇಗುಲಗಳ ಪ್ರವೇಶ ದ್ವಾರದಲ್ಲೇ ಆಡಳಿತ ಮಂಡಳಿ ಸ್ಯಾನಿಟೈಸರ್ ಹಾಗೂ ಶರೀರದ ಉಷ್ಣಾಂಶ ತಪಾಸಣೆಯೊಂದಿಗೆ ನಿಯಮ ಪಾಲಿಸಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಭಕ್ತರನ್ನು ಒಳಬಿಡುತ್ತಿದ್ದರು.
ತೆರೆಯದ ಮಸೀದಿಗಳು : ಇಸ್ಲಾಂ ಅನುಯಾಯಿಗಳ ಯಾವದೇ ಮಸೀದಿಗಳು ಸಂಯುಕ್ತ ಜಮಾಅತ್ ತೀರ್ಮಾನದಂತೆ ಬಾಗಿಲು ತೆರೆದುಕೊಂಡಿರಲಿಲ್ಲ. ಈ ಸಂಬಂಧ ಅಭಿಪ್ರಾಯ ಹಂಚಿಕೊಂಡ ಜಾಮಿಯಾ ಮಸೀದಿ ಅಧ್ಯಕ್ಷ ಮಹಮ್ಮದ್ ಇಮ್ರಾನ್ ಅವರು ಇನ್ನೊಂದು ತಿಂಗಳು ದೇಶದ ಪರಿಸ್ಥಿತಿ ನೋಡಿಕೊಂಡು, ಜನತೆಯ ಸುರಕ್ಷತೆ ನಿಟ್ಟಿನಲ್ಲಿ ಪರಿಶೀಲಿಸಿ ಮಸೀದಿಗಳನ್ನು ನಮಾಝ್‍ಗೆ ಅನುವು ಮಾಡಿಕೊಡುವದಾಗಿ ನುಡಿದರು. ಈ ಬಗ್ಗೆ ಈಗಾಗಲೇ ಜಮಾಅತ್ ನಿರ್ಧಾರವನ್ನು ಸಾರ್ವಜನಿಕವಾಗಿ ತಿಳಿಸಿರುವದಾಗಿ ಅಭಿಪ್ರಾಯಪಟ್ಟರು.
ಚರ್ಚ್‍ಗಳಲ್ಲಿ ಸಿದ್ಧತೆ : ಕ್ರೈಸ್ತ ಸಮುದಾಯದಿಂದ ಮೈಸೂರು ಪ್ರಾಂತದ ಬಿಷಫ್ ವಿಲಿಯಂ ಅವರ ಮಾರ್ಗದರ್ಶನದಲ್ಲಿ ಕೊಡಗಿನ ಚರ್ಚ್‍ಗಳನ್ನು ಭಕ್ತರ ಪಾರ್ಥನೆಗೆ ಕಲ್ಪಿಸಲಾಗುತ್ತಿದೆ ಎಂದು ಇಲ್ಲಿನ ಸಂತಮೈಕಲರ ಚರ್ಚ್ ಧರ್ಮಗುರು ರೆ.ಫಾ. ಜೆ.ವಿ. ಮೆಂಡೋನ್ಸಾ ನೆನಪಿಸಿದರು. ಈ ದಿಸೆಯಲ್ಲಿ ಪ್ರಾಂತೀಯ ಮುಖ್ಯಸ್ಥರು ತಾ. 11 ರಂದು ಜಿಲ್ಲೆಗೆ ಆಗಮಿಸುವದರೊಂದಿಗೆ ಸಭೆ ನಡೆಸಿ ಭಕ್ತರಿಂದ ಪೂಜಾ ವ್ಯವಸ್ಥೆ ಕೈಗೊಳ್ಳಲಾಗುವದು ಎಂದು ಮಾಹಿತಿ ನೀಡಿದರು. ಅಲ್ಲದೆ ಚರ್ಚ್‍ಗಳಲ್ಲಿ ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರು ಸಮಾನತೆಯೊಂದಿಗೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಈಗಾಗಲೇ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಮಾಹಿತಿಯಿತ್ತರು.
ಹೊಟೇಲ್‍ಗಳಲ್ಲಿ ಅಷ್ಟೇ : ನಗರದ ಬಹುತೇಕ ಹೊಟೇಲ್‍ಗಳಲ್ಲಿ ಕೈಬೆರಳೆಣಿಕೆ ಗ್ರಾಹಕರೊಂದಿಗೆ, ಕೆಲವರವಷ್ಟೇ ಊಟ, ಉಪಹಾರ ಸೇವಿಸುತ್ತಿದ್ದುದು ಗೋಚರಿಸಿತು. ಯಾವದೇ ವಸತಿಗೃಹಗಳಿಗೆ ಇಂದು ಯಾರೊಬ್ಬರೂ ಸುಳಿಯಲಿಲ್ಲವೆಂದು, ಸಂಬಂಧಿಸಿದ ಮಾಲೀಕರು ಪ್ರತಿಕ್ರಿಯೆ ನೀಡಿದರು.
ಕೆಎಸ್‍ಆರ್‍ಟಿಸಿ : ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಹೊಟೇಲ್‍ನಲ್ಲಿ ಸ್ವಲ್ಪಮಟ್ಟಿಗೆ ಗ್ರಾಹಕರು ಕಾಣಿಸಿಕೊಂಡರು. ಆದರೆ ಇಲ್ಲಿ ಮಾಸಿಕ ರೂ. 4.50 ಲಕ್ಷ ಕಟ್ಟಡ ಬಾಡಿಗೆ ದುಬಾರಿಯಾಗಿದ್ದು, ಈ ಮೊತ್ತವನ್ನು ಕಡಿಮೆಗೊಳಿಸಿ, ಈಗಿನ ಪರಿಸ್ಥಿತಿಯಲ್ಲಿ ಶೇ. 30 ಮೊತ್ತ ಕಡಿಮೆ ಮಾಡುವಂತೆ ಬೇಡಿಕೆ ಸಲ್ಲಿಸಿರುವದಾಗಿ ಈ ಹೊಟೇಲ್ ಪ್ರಮುಖ ಶರತ್ ಅನಿಸಿಕೆ ಹಂಚಿಕೊಂಡರು.
ವೀರಾಜಪೇಟೆ: ಶತಮಾನಗಳಿಂದಲೂ ಇತಿಹಾಸ
(ಮೊದಲ ಪುಟದಿಂದ) ಪ್ರಸಿದ್ಧವಾದ ಇಲ್ಲಿನ ಗಡಿಯಾರ ಕಂಬದ ಬಳಿಯಿರುವ ಗಣಪತಿ ದೇವಾಲಯವನ್ನು ಇಂದು ಬೆಳಿಗ್ಗೆ ಪ್ರಾರಂಭಿಸಲಾಯಿತು. ಬೆಳಿಗ್ಗೆ ಸಾಂಪ್ರದಾಯಿಕ ಬದ್ಧವಾಗಿ ವಿಧಿ ವಿಧಾನಗಳ ಪ್ರಕಾರ ದೇವಾಲಯದಲ್ಲಿ ಪೂಜೆಯೂ ನೆರವೇರಿತು. ದೇವಾಲಯದಲ್ಲಿ ಸರಕಾರದ ಷರತ್ತಿನಂತೆ ಸ್ಯಾನಿಟೈಸರ್, ಮಾಸ್ಕ್ ಧರಿಸಿಕೊಂಡು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.
ಬೆಳಗಿನಿಂದ ಸಂಜೆಯವರೆಗೆ ಭಕ್ತಾದಿಗಳ ಸಂಖ್ಯೆ ವಿರಳವಾಗಿತ್ತು. ಇಲ್ಲಿನ ಗಣಪತಿ ದೇವಾಲಯ ಮುಖ್ಯ ರಸ್ತೆಯ ಒತ್ತಾಗಿರುವುದರಿಂದ ಭಕ್ತಾದಿಗಳು ದೇವಾಲಯದ ಹೊರ ಭಾಗದಿಂದಲೇ ದೇವರ ದರ್ಶನ ಪಡೆದು ಕೈ ಮುಗಿಯುತ್ತಿದ್ದುದು ಕಂಡು ಬಂತು.
ವೀರಾಜಪೇಟೆಯ ತೆಲುಗರ ಬೀದಿಯಲ್ಲಿರುವ ಅಂಗಾಳ ಪರಮೇಶ್ವರಿ, ಮಾರಿಯಮ್ಮ ದೇವಾಲಯ, ಜೈನರ ಬೀದಿಯ ಬಸವೇಶ್ವರ ದೇವಸ್ಥಾನ, ಛತ್ರಕೆರೆಯ ಆಂಜನೇಯ ಸ್ವಾಮಿ, ಮೀನುಪೇಟೆಯ ಮುತ್ತಪ್ಪ ದೇವಾಲಯ, ಮಲೆತಿರಿಕೆ ಬೆಟ್ಟದಲ್ಲಿರುವ ಈಶ್ವರ ದೇವಸ್ಥಾನ, ಅಯ್ಯಪ್ಪ ದೇವಸ್ಥಾನ, ಮಗ್ಗುಲದ ಶನೀಶ್ವರ ಮತ್ತು ನವಗ್ರಹ ದೇವಾಲಯ ಸೇರಿದಂತೆ ಸುತ್ತ ಮುತ್ತಲಿನ ಎಲ್ಲ ದೇವಾಲಯಗಳು ಆರಂಭಗೊಂಡು ದೇವರಿಗೆ ಪೂಜೆ ಸಲ್ಲಿಸಿದವು. ಎಲ್ಲ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು.
ಪಾಡಿ ಶ್ರೀ ಇಗ್ಗುತ್ತಪ್ಪ ದೇವಳಕ್ಕೆ ಬೆಳಿಗ್ಗೆಯಿಂದಲೇ ಭಕ್ತರ ಆಗಮನ..!
ನಾಪೆÇೀಕ್ಲು: ಬೆಳಿಗ್ಗಿನಿಂದಲೇ ಕೊಡಗಿನ ಪ್ರಸಿದ್ಧ ಕ್ಷೇತ್ರವಾದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳಕ್ಕೆ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ತೆರಳುತ್ತಿರುವ ದೃಶ್ಯ ಕಂಡು ಬಂತು.
ದೇವಳಕ್ಕೆ ಆಗಮಿಸುವ ಭಕ್ತರಿಗೆ ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ ಸ್ಯಾನಿಟೈಸರ್, ಹ್ಯಾಂಡ್‍ವಾಶ್, ಮಾಸ್ಕ್ ನೀಡುವ ಸೌಲಭ್ಯಗಳ ವ್ಯವಸ್ಥೆ ಕೈಗೊಳ್ಳಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ದೇವಳದ ಸುತ್ತ ಗುರುತು ಮಾಡಲಾಗಿದೆ. ದೇವಳಕ್ಕೆ ಬರುವ ಭಕ್ತರಿಗೆ ಯಾವದೇ ತೊಂದರೆಯಾಗದಂತೆ ಎಲ್ಲಾ ಸೌಲಭ್ಯಗಳನ್ನು ಮಾಡಲಾಗಿದೆ ಎಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ. ಮಸೀದಿಗಳಲ್ಲಿ ಶುಕ್ರವಾರದ ಹಾಗೂ ಚರ್ಚ್‍ಗಳಲ್ಲಿ ಭಾನುವಾರ ಪ್ರಾರ್ಥನಾ ದಿನವಾಗಿರುವದರಿಂದ ಅಲ್ಲಿ ಜನರ ಓಡಾಟ ವಿರಳವಾಗಿತ್ತು. ಹಲವು ಕಡೆಗಳಲ್ಲಿ ಜಮಾಅತ್ ಆಡಳಿತ ಮಂಡಳಿ ಸ್ವಂತ ನಿರ್ಧಾರ ಕೈಗೊಂಡಿದ್ದು, ಒಂದು ತಿಂಗಳ ಮಟ್ಟಿಗೆ ಸಾಮೂಹಿಕ ಪ್ರಾರ್ಥನೆಯನ್ನು ರದ್ದುಗೊಳಿಸಿ, ಆದೇಶ ಹೊರಡಿಸಿರುವದು ತಿಳಿದು ಬಂದಿದೆ.
ಸಿದ್ದಾಪುರ: ಸಿದ್ದಾಪುರ ವ್ಯಾಪ್ತಿಯಲ್ಲಿ ಲಾಕ್‍ಡೌನ್ ಹಿನ್ನೆಲೆ ಮುಚ್ಚಲ್ಪಟ್ಟಿದ್ದ ದೇವಾಲಯಗಳಲ್ಲಿ ಇಂದಿನಿಂದ ಪೂಜಾ ಕಾರ್ಯಗಳು ಪಾರಂಭಗೊಂಡಿದ್ದು, ಭಕ್ತಾದಿಗಳ ಸಂಖ್ಯೆ ವಿರಳವಾಗಿತ್ತು.
ಶ್ರೀ ಉಮಾಮಹೇಶ್ವರಿ ದೇವಾಲಯ
ಗೋಣಿಕೊಪ್ಪಲು: ಪ್ರತಿಷ್ಠಿತ ದೇವಾಲಯಗಳಲ್ಲೊಂದಾದ ಗೋಣಿಕೊಪ್ಪಲುವಿನ ಶ್ರೀ ಉಮಾಮಹೇಶ್ವರಿ ದೇವಾಲಯದ ಬಾಗಿಲು ಮುಂಜಾನೆ 5.30ರ ವೇಳೆಯಲ್ಲಿ ತೆರೆಯುವ ಮೂಲಕ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದೇವಸ್ಥಾನದ ಆವರಣದಲ್ಲಿ ಭಕ್ತಾದಿಗಳಿಗೆ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಕಡ್ಡಾಯಗೊಳಿಸಲಾಗಿತ್ತು. ಅರ್ಚಕರು ಪೂಜಾ ಕಾರ್ಯಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸಿದ್ದರು. ಭಕ್ತಾದಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ದೇವರಿಗೆ ನಮಸ್ಕರಿಸಿ ಪೂಜೆ ನೆರವೇರಿಸಿದರು. ಭಕ್ತಾಧಿಗಳು ವಿರಳವಾಗಿದ್ದರು. ದೇವಸ್ಥಾನದ ಆಡಳಿತ ಮಂಡಳಿ ಭಕ್ತಾದಿಗಳ ಹಿತ ದೃಷ್ಟಿ ಕಾಯುವ ಹಿನ್ನಲೆಯಲ್ಲಿ ದೇವಸ್ಥಾನದ ಹೊರ ಭಾಗದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಿತ್ತು.
ಕುಶಾಲನಗರ: ಸರಕಾರದ ಆದೇಶದಂತೆ ಕುಶಾಲನಗರ ಪಟ್ಟಣ ವ್ಯಾಪ್ತಿಯ ಬಹುತೇಕ ದೇವಾಲಯಗಳು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು ಕಂಡುಬಂತು. ಪಟ್ಟಣದಲ್ಲಿ ಸುಮಾರು 20 ಕ್ಕೂ ಅಧಿಕ ದೇವಾಲಯಗಳಿದ್ದು ಕೆಲವು ಬಡಾವಣೆಗಳಲ್ಲಿ ದೇವಾಲಯ ಬೆಳಿಗ್ಗೆಯಿಂದ ತೆರೆದಿದ್ದು, ಭಕ್ತರು ದರ್ಶನ ಪಡೆದರು. ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿರುವ ಐತಿಹಾಸಿಕ ಗಣಪತಿ ದೇವಾಲಯದಲ್ಲಿ ಮಾತ್ರ ಎಂದಿನಂತೆ ಮಹಾಮಂಗಳಾರತಿ ಕಾರ್ಯ ಮಾತ್ರ ನಡೆಯಿತು. ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲು ಇನ್ನೆರೆಡು ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ವಸಂತಕುಮಾರ್ ತಿಳಿಸಿದ್ದಾರೆ.
ಆಡಳಿತ ಮಂಡಳಿ ಸಭೆ ಮಂಗಳವಾರ ನಡೆಯಲಿದ್ದು ಭಕ್ತಾದಿಗಳಿಗೆ ದೇವರ ದರ್ಶನ ಮಾಡಲು ಸರಕಾರದ ನಿಯಮಾವಳಿಯಂತೆ ವ್ಯವಸ್ಥೆ ಮಾಡಲು ಕಾಲಾವಕಾಶ ಬೇಕಾಗಿದೆ ಎಂದಿದ್ದಾರೆ. ಇನ್ನುಳಿದಂತೆ ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯ, ಆಂಜನೇಯ ದೇವಾಲಯ, ಸೋಮೇಶ್ವರ, ಸುಬ್ರಮಣ್ಯ ಮತ್ತು ಸಾಯಿ ಮಂದಿರಗಳು ಬೆಳಗಿನ ವೇಳೆ ಮತ್ತು ಸಂಜೆ ವೇಳೆ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ದೇವಾಲಯದ ಮುಂಭಾಗ ಹೂ ಮಾರುವ ವ್ಯಾಪಾರಿಗಳು ಭಕ್ತರ ಸಂಖ್ಯೆ ಕೊರತೆ ಇರುವ ಹಿನ್ನಲೆಯಲ್ಲಿ ತಾವು ತಂದಿದ್ದ ಹೂ ವ್ಯಾಪಾರ ಆಗದಿರುವ ಬಗ್ಗೆ ತಮ್ಮ ಜೀವನ ಸಾಗಿಸಲು ಉಂಟಾಗಿರುವ ಸಂಕಷ್ಟವನ್ನು ವ್ಯಕ್ತಪಡಿಸಿದರು. ಕಳೆದ 3 ತಿಂಗಳಿನಿಂದ ದೇವಾಲಯ ತೆರೆಯದಿರುವ ಹಿನ್ನಲೆಯಲ್ಲಿ ಮನೆಯಲ್ಲೇ ಉಳಿಯುವಂತಾಗಿದ್ದು ಜೀವನಕ್ಕೆ ಕಷ್ಟವಾಗಿದೆ ಎಂದು ಹೂ ಮಾರುವ ಮಹಿಳೆ ಲಕ್ಷ್ಮಿ ಎಂಬವರು ಶಕ್ತಿಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು.
ಭಾಗಮಂಡಲ: ಸರ್ಕಾರದ ನಿರ್ದೇಶನದಂತೆ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳನ್ನು ನಡೆಸಲು ಅನುಮತಿ ನೀಡಲಾಗಿದ್ದು ಸೋಮವಾರ ಇಲ್ಲಿನ ಭಗಂಡೇಶ್ವರ ದೇವಾಲಯದಲ್ಲಿ ಭಕ್ತರ ಸಮ್ಮುಖದಲ್ಲಿ ನಿತ್ಯ ಪೂಜೆ ಆರಂಭಗೊಂಡಿತು. ಸುತ್ತಮುತ್ತಲ ಊರುಗಳಿಂದ ಭಕ್ತರು ದೇವಾಲಯಕ್ಕೆ ಆಗಮಿಸಿದರು. 30-40 ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದ್ದು ಎರಡು ತಿಂಗಳುಗಳಿಗಿಂತಲೂ ಅಧಿಕ ಕಾಲ ಭಕ್ತರಿಗೆ ನಿರ್ಭಂಧ ಹೇರಲಾಗಿದ್ದ ತಲಕಾವೇರಿ ಹಾಗೂ ಭಾಗಮಂಡಲ ದೇವಾಲಯಗಳಲ್ಲಿ ಪೂಜೆ ನಡೆಸಲಾಯಿತು. ಮಾಸ್ಕ್ ಧರಿಸಿ ದೇವಾಲಯ ಪ್ರವೇಶಿಸಲು ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು. ಭಕ್ತರ ತಪಾಸಣೆ ನಡೆಸಿ ದೇವಾಲಯದ ಒಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಂಡ ಭಕ್ತರು ಭಾಗಮಂಡಲದಲ್ಲಿ ಭಗಂಡೇಶ್ವರನ ದರ್ಶನ ಪಡೆದರು. ತಲಕಾವೇರಿ ಕ್ಷೇತ್ರದಲ್ಲೂ ಎಂದಿನಂತೆ ಪೂಜೆಗಳನ್ನು ನೆರವೇರಿಸಲಾಯಿತು.
ಸರ್ಕಾರದ ನಿರ್ದೇಶನ ಬರುವತನಕ ಯಾವುದೇ ಪೂಜಾಸೇವೆಗಳು ಇರುವುದಿಲ್ಲ. ತ್ರಿವೇಣಿ ಸಂಗಮದಲ್ಲಿ ಪಿಂಡಪ್ರಧಾನ,ಕೇಶಮುಂಡನ ಸೇರಿದಂತೆ ಯಾವುದೇ ಧಾರ್ಮಿಕ ಪದ್ದತಿಗಳಿಗೆ ಅವಕಾಶ ನೀಡದೇ ನಿತ್ಯಪೂಜೆಗಳನ್ನು ಮಾತ್ರ ಕೈಗೊಳ್ಳಲಾಗುವುದು.ರಾಜ್ಯ ಮುಜರಾಯಿ ಇಲಾಖೆಯ ನಿರ್ದೇಶನಗಳನ್ನು ತಲಕಾವೇರಿ-ಭಾಗಮಂಡಲದಲ್ಲಿಯೂ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ.ಇದಕ್ಕೆ ಅಗತ್ಯವಿರುವ ಕ್ರಮಗಳನ್ನು ದೇವಾಲಯದ ವತಿಯಿಂದ ಕೈಗೊಳ್ಳಲಾಗಿದ್ದು ಇಂದಿನಿಂದ ಭಕ್ತರಿಗೆ ಭಗಂಡೇಶ್ವರನ ದರ್ಶನವಾಗಲಿದೆ.
ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು,ಸ್ಯಾನಿಟೈಸರ್ ಬಳಕೆ ಮಾಡುವುದು ಸೇರಿದಂತೆ ವಿವಿಧ ಮುಂಜಾಗ್ರತಾ ಕ್ರಮಗಳನ್ನು ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಹಾಗೂ ಪಾರುಪತ್ಯೆಗಾರ ಪೊನ್ನಣ್ಣ ಕೈಗೊಂಡಿದ್ದರು.
ಸೋಮವಾರಪೇಟೆ: ಲಾಕ್‍ಡೌನ್ ಹಿನ್ನೆಲೆ ಮುಚ್ಚಲ್ಪಟ್ಟಿದ್ದ ದೇವಾಲಯಗಳು ಇಂದು ಬಾಗಿಲು ತೆಗೆದಿದ್ದರಿಂದ ಭಕ್ತರ ಆಗಮನ ಕಂಡುಬಂತು.
ಬಿಗಿ ನಿಯಮಗಳನ್ನು ಅಳವಡಿಸಿ ದೇವಾಲಯದಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಪಟ್ಟಣದ ಶ್ರೀವಿದ್ಯಾಗಣಪತಿ, ಸೋಮೇಶ್ವರ, ಬಸವೇಶ್ವರ, ದೊಡ್ಡಮಳ್ತೆಯ ಹೊನ್ನಮ್ಮತಾಯಿ ಕ್ಷೇತ್ರ, ಕಕ್ಕೆಹೊಳೆಯ ಶ್ರೀ ಮುತ್ತಪ್ಪ ಮತ್ತು ಅಯ್ಯಪ್ಪ ದೇವಾಲಯ, ಆಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ಗ್ರಾಮೀಣ ಭಾಗದ ಬಹುತೇಕ ದೇವಾಲಯಗಳಲ್ಲಿ ಇಂದು ಬೆಳಿಗ್ಗೆ ಪೂಜೆಗಳು ನೆರವೇರಿದವು. ದೇವಾಲಯಗಳು ತೆರೆದಿದ್ದರೂ ಸಹ ಭಕ್ತರ ಸಂಖ್ಯೆಯಲ್ಲಿ ಇಳಿಕೆಯಾಗಿತ್ತು. ಭಕ್ತಾದಿಗಳು ದೇವಾಲಯದ ಒಳಗೆ ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆದರು.
ವೀರಾಜಪೇಟೆ: ಸರಕಾರ ಕೊರೊನ ವೈರಸ್ ನಿರ್ಬಂಧದ ಲಾಕ್‍ಡೌನ್ ಸಡಿಲಿಕೆಯಂತೆ ಹೊಟೇಲ್, ರೆಸ್ಟೋರೆಂಟ್‍ಗಳ ಆರಂಭಕ್ಕೆ ಷರತ್ತಿನ ಆದೇಶ ನೀಡಿದರೂ ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಸ್ಯ ಹಾಗೂ ಮಾಂಸಹಾರಿ ಹೊಟೇಲ್‍ಗಳನ್ನು ಷರತ್ತಿನಂತೆ ಆರಂಭಿಸಿದರೂ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ಹೊಟೇಲ್ ಮುಂದುಗಡೆ ಸ್ಯಾನಿಟೈಸರ್, ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಇಬ್ಬರಿಗೆ ಒಂದು ಟೇಬಲ್‍ನಂತೆ ಸೌಲಭ್ಯ ಕಲ್ಪಿಸಲಾಗಿತ್ತು. ಹೊಟೇಲ್ ಮಾಲೀಕರು ಗಿರಾಕಿಗಳಿಲ್ಲದೆ ಪರಿತಪಿಸುವಂತಾಗಿದೆ. ಇಲ್ಲಿನ ಕೆಲವು ಹೊಟೇಲ್‍ಗಳಿಗೆ ನೌಕರರ ಕೊರತೆ ಎದುರಾಗಿದ್ದರೂ ಇರುವ ನೌಕರರನ್ನು ಸರಿದೂಗಿಸಿಕೊಂಡು ಹೊಟೇಲ್ ಪುನಃರಾರಂಭಿಸಲಾಗಿದೆ.
ನಾಪೋಕ್ಲು : ಪಟ್ಟಣದ ಬಹುತೇಕ ಎಲ್ಲಾ ಹೊಟೇಲುಗಳನ್ನು ಆರಂಭಿಸಲಾಗಿದೆ. ಆದರೆ, ಗ್ರಾಹಕರ ಕೊರತೆಯಿಂದ ಎಲ್ಲಾ ಹೊಟೇಲುಗಳು ಬಿಕೋ ಎನ್ನುತ್ತಿದ್ದವು. ಸ್ಥಳೀಯ ಹೋಂಸ್ಟೇಗಳನ್ನು ತೆರೆಯಲಾಗಿದೆ. ಆದರೆ, ಅತಿಥಿಗಳಿಲ್ಲದ ಕಾರಣ ಹೋಂಸ್ಟೇಗಳು ಖಾಲಿ ಖಾಲಿಯಾಗಿರುವದು ಕಂಡು ಬಂತು.
ಸಿದ್ದಾಪುರ: ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕಳೆದ 2 ತಿಂಗಳಿನಿಂದ ಮುಚ್ಚಲಾಗಿದ್ದ ಸಿದ್ದಾಪುರ ವ್ಯಾಪ್ತಿಯ ಎಲ್ಲಾ ಹೋಟೆಲ್‍ಗಳು ತೆರೆಯಲಾಗಿದೆ. ಆದರೆ ಬಸ್ಸುಗಳ ಸಂಚಾರವಿಲ್ಲದೇ ಗ್ರಾಹಕರ ಸಂಖ್ಯೆಯು ವಿರಳವಾಗಿದೆ. ಸಿದ್ದಾಪುರ ವ್ಯಾಪ್ತಿಯಲ್ಲಿ ಇನ್ನೂ ಕೂಡ ಹೋಂ ಸ್ಟೇಗಳು ತೆರೆದಿರುವುದಿಲ್ಲ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೋಂಸ್ಟೇಗೆ ಹೊರ ಜಿಲ್ಲೆಯಿಂದ ಪ್ರವಾಸಿಗರು ಬರಬಹುದೆಂದು ಭಯದಿಂದ ತೆರೆಯಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಸೋಮವಾರಪೇಟೆ : 70 ದಿನಗಳ ಬಳಿಕ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಎರಡು ಖಾಸಗಿ ಬಸ್‍ಗಳ ಸಂಚಾರ ನಡೆಯಿತು. ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದಲ್ಲಿ ಎರಡು ಖಾಸಗಿ ಬಸ್‍ಗಳು ಸಂಚಾರ ಆರಂಭಿಸಿದವು.
ಪಟ್ಟಣದಲ್ಲಿ ಬಾರ್ ಮತ್ತು ರೆಸ್ಟೋರೆಂಟ್‍ಗಳು ತೆರೆದಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಗ್ರಾಹಕರು ಕಂಡುಬರಲಿಲ್ಲ. ರೆಸ್ಟೋರೆಂಟ್‍ಗಳ ಒಳಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕುರ್ಚಿ, ಮೇಜುಗಳನ್ನು ಅಳವಡಿಸಲಾಗಿತ್ತು. ರೆಸ್ಟೋರೆಂಟ್‍ನ ಒಳಗೆ ಕುಳಿತು ಊಟ ಮಾಡುವವರು, ಪಾರ್ಸೆಲ್ ತೆಗೆದುಕೊಂಡು ಹೋಗುವವರ ಸಂಖ್ಯೆಯಲ್ಲೂ ಇಳಿಕೆಯಾಗಿತ್ತು. ಲಾಕ್‍ಡೌನ್‍ನ ನಂತರದಲ್ಲಿ ಮೊದಲ ದಿನ ರೆಸ್ಟೋರೆಂಟ್ ತೆರೆದಿದ್ದು, ಗ್ರಾಹಕರ ಸಂಖ್ಯೆ ಕಡಿಮೆ ಇದೆ. ಹಲವಷ್ಟು ಮಂದಿಗೆ ಸಮರ್ಪಕ ಮಾಹಿತಿ ಇಲ್ಲ. ಮುಂದಿನ ಒಂದೆರಡು ದಿನಗಳಲ್ಲಿ ಗ್ರಾಹಕರು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ರೆಸ್ಟೋರೆಂಟ್‍ನ ಮಾಲೀಕರೋರ್ವರು ಆಶಾಭಾವನೆ ವ್ಯಕ್ತಪಡಿಸಿದರು.
- ವರದಿ : ಸೋಮೇಶ್, ವಾಸು, ಡಿಎಂಆರ್, ಪ್ರಭಾಕರ್, ಜಗದೀಶ್, ಚಂದ್ರಮೋಹನ್, ಸುನಿಲ್, ವಿಜಯ್