ಸೋಮವಾರಪೇಟೆ,ಜೂ.8: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಐಪಿಡಿಎಸ್ ಯೋಜನೆಯಡಿ ವಿದ್ಯುತ್ ಇಲಾಖೆ ಮೂಲಕ ಕೈಗೊಳ್ಳಲಾಗಿರುವ ಕಾಮಗಾರಿಗಳಿಂದ ಪ.ಪಂ.ನ ಆಸ್ತಿಗೆ ಹಾನಿಯಾಗಿದ್ದು, ಇದರ ನಷ್ಟ ಭರಿಸುವಂತೆ ಪ.ಪಂ.ನಿಂದ ಇಲಾಖೆಗೆ ನೋಟೀಸ್ ಜಾರಿಗೊಳಿಸಿ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಆದೇಶಿಸಿದ್ದಾರೆ.

ಪಟ್ಟಣ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಅನುದಾನದಡಿ ಐಪಿಡಿಎಸ್ ಯೋಜನೆಯ ಮೂಲಕ ಕೋಟ್ಯಾಂತರ ವೆಚ್ಚದ ಕಾಮಗಾರಿಗಳು ನಡೆಯುತ್ತಿದ್ದು, ಹಲವೆಡೆ ಪ.ಪಂ.ನ ಚರಂಡಿ, ರಸ್ತೆಗೆ ಹಾನಿ ಮಾಡಲಾಗಿದೆ.

ಕೆಲವೆಡೆ ಚರಂಡಿಯ ಮಧ್ಯ ಭಾಗದಲ್ಲಿಯೇ ಕಂಬಗಳನ್ನು ಅಳವಡಿಸಲಾಗಿದೆ ಎಂದು ಸ್ಥಳೀಯ ಜನಪ್ರತಿನಿಧಿಗಳು ಶಾಸಕರ ಗಮನ ಸೆಳೆದ ಸಂದರ್ಭ, ತಕ್ಷಣ ವಿದ್ಯುತ್ ಇಲಾಖೆಗೆ ನೋಟೀಸ್ ಜಾರಿಗೊಳಿಸುವಂತೆ ರಂಜನ್ ಸೂಚಿಸಿದ್ದಾರೆ.

ಇದರೊಂದಿಗೆ ಪ.ಪಂ. ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುವ ಸಂದರ್ಭ ಪ.ಪಂ.ನಿಂದ ಯಾವದೇ ಅನುಮತಿಯನ್ನೂ ಪಡೆದಿಲ್ಲ. ಹಲವಷ್ಟು ಕಡೆಗಳಲ್ಲಿ ಪ.ಪಂ. ಆಸ್ತಿಗೆ ಹಾನಿ ಮಾಡಲಾಗಿದೆ. ಈ ಹಿನ್ನೆಲೆ ನಷ್ಟ ಭರಿಸಿಕೊಡುವಂತೆ ಇಲಾಖೆಗೆ ನೋಟೀಸ್ ಜಾರಿಗೊಳಿಸಿ ಎಂದು ಮುಖ್ಯಾಧಿಕಾರಿ ನಾಚಪ್ಪ ಅವರಿಗೆ ಶಾಸಕರು ನಿರ್ದೇಶನ ನೀಡಿದ್ದಾರೆ.