ಕುಶಾಲನಗರ, ಜೂ. 8: ಕಾರಿನಲ್ಲಿ ತ್ಯಾಜ್ಯ ತಂದು ಕಾವೇರಿ ನದಿಗೆ ಎಸೆಯುತ್ತಿದ್ದ ಸಂದರ್ಭ ಆತನನ್ನು ಹಿಡಿದು ಅದೇ ತ್ಯಾಜ್ಯವನ್ನು ಕಾರಿಗೆ ತುಂಬಿಸಿ ಕಳುಹಿಸಿದ ಘಟನೆಯೊಂದು ಕುಶಾಲನಗರ ಕಾವೇರಿ ನದಿ ಸೇತುವೆ ಬಳಿ ನಡೆದಿದೆ.
ಕಾರೊಂದರಲ್ಲಿ ಸಂಜೆ ವೇಳೆ ವ್ಯಕ್ತಿಗಳು ಜಿಲ್ಲೆಗೆ ಭೇಟಿ ನೀಡಲು ಬರುತ್ತಿದ್ದ ಸಂದರ್ಭ ಸೇತುವೆ ಮೇಲೆ ಕಾರು ನಿಲ್ಲಿಸಿ ಕಾರಿನಲ್ಲಿದ್ದ ತ್ಯಾಜ್ಯ ತುಂಬಿದ ಚೀಲಗಳನ್ನು ನದಿಗೆ ಎಸೆಯುತ್ತಿದ್ದ ಸಂದರ್ಭ ಸ್ಥಳೀಯ ಉದ್ಯಮಿ ದಾವುದ್ ಎಂಬವರು ಇದನ್ನು ಗಮನಿಸಿ ತಕ್ಷಣ ಅವರ ಬಳಿ ತೆರಳಿ ತ್ಯಾಜ್ಯವನ್ನು ಮತ್ತೆ ಅವರ ಕಾರಿಗೆ ತುಂಬಿಸಿ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಗೆ ತ್ಯಾಜ್ಯವನ್ನು ನದಿ ಮತ್ತಿತರ ಸಾರ್ವಜನಿಕ ಪ್ರದೇಶದಲ್ಲಿ ಎಸೆಯದಂತೆ ತಿಳಿಹೇಳಿದ್ದಾರೆ. ಕಾರಿನಲ್ಲಿದ್ದ ವ್ಯಕ್ತಿಗಳು ಗುಜರಾತಿನಿಂದ ಬಂದ ಪ್ರವಾಸಿಗರು ಎಂದು ತಿಳಿದುಬಂದಿದೆ. ಜಿಲ್ಲೆಗೆ ಪ್ರವಾಸಕ್ಕೆಂದು ಬರುವ ಸಂದರ್ಭ ಕೆಲವರು ತ್ಯಾಜ್ಯವನ್ನು ನದಿಗೆ ಎಸೆಯುತ್ತಿರುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿಲೇವಾರಿ ಮಾಡುತ್ತಿರುವ ಬಗ್ಗೆ ಸ್ಥಳೀಯ ಗ್ರಾಮಪಂಚಾಯ್ತಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಹಾಗೂ ಕಸ ವಿಲೇವಾರಿಗೆ ಸಮರ್ಪಕ ಯೋಜನೆ ರೂಪಿಸಬೇಕೆಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಪ್ರಮುಖರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.