ಮಡಿಕೇರಿ, ಜೂ. 8: ಬಾಳೆಗೊನೆ ಮಾರಾಟ ಮಾಡಿದ ಹಣ ನೀಡಿಲ್ಲ ಎಂಬ ನೆಪದೊಂದಿಗೆ ವ್ಯಕ್ತಿಯೋರ್ವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆಗೆ ಯತ್ನಿಸಿದ ಪ್ರಕರಣ ಮುಕ್ಕೋಡ್ಲು ಗ್ರಾಮದಲ್ಲಿ ನಡೆದಿದೆ.
ಮುಕ್ಕೋಡ್ಲು ನಿವಾಸಿ ಎಂ.ಜಿ. ಪ್ರದೀಪ್ ಹಟ್ಟಿಹೊಳೆಯಲ್ಲಿ ಹೊಟೇಲ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಒಂದು ಪಿಕ್ಅಪ್ ಜೀಪ್ ಹಾಗೂ ಆಟೋರಿಕ್ಷಾ ಇದ್ದು, ಬಿಡುವಿನ ವೇಳೆಯಲ್ಲಿ ಬಾಡಿಗೆಗೆ ಓಡಿಸುತ್ತಿದ್ದರು. ಕಳೆದ ತಾ. 3ರಂದು ಮನೆಯ ಬಳಿಯಲ್ಲಿರುವ ನಾಗಬಾಣೆ ಕಾಲೋನಿ ನಿವಾಸಿಗಳಾದ ಸೋಮಯ್ಯ, ನಾಗರಾಜ ಮತ್ತು ಶಂಭು ಎಂಬವರುಗಳು ತಮ್ಮ ತೋಟಗಳಿಂದ ಕಟಾವು ಮಾಡಿದ ಬಾಳೆಗೊನೆಗಳನ್ನು ಮಾರಾಟ ಮಾಡುವಂತೆ ಹೇಳಿದ್ದರು. ಅದರಂತೆ ಪ್ರದೀಪ ಮಂಜು ಎಂಬಾತನಿಗೆ ಪಿಕ್ಅಪ್ ನೀಡಿ ಬಾಳೆಗೊನೆ ತರಿಸಿಕೊಂಡಿದ್ದಾರೆ. ಆದರೆ ಬಾಳೆಗೆ ಬೇಡಿಕೆ ಇಲ್ಲದ್ದರಿಂದ ಹಣ ನೀಡಲು ಸಾಧ್ಯವಾಗಿರಲಿಲ್ಲ.
ತಾ.6ರಂದು ಬಾಳೆಯನ್ನು ಕಿರಗಂದೂರಿಗೆ ಕೊಂಡೊಯ್ದು ಮಾರಾಟ ಮಾಡಿದ್ದು, ಒಟ್ಟು ಹಣದಲ್ಲಿ ಸೋಮಯ್ಯ ಎಂಬವರಿಗೆ ರೂ. 650 ನೀಡಬೇಕಾಗಿತ್ತು. ತಾ. 7ರಂದು ಸಂಜೆ ಸೋಮಯ್ಯ ಪ್ರದೀಪ್ಗೆ ಕರೆ ಮಾಡಿ ಹಣ ಕೇಳಿದ್ದಾರೆ. ಈ ಸಂದರ್ಭ ಇಂದು ಬೆಳಿಗ್ಗೆಯಷ್ಟೇ ಹಣ ಸಿಕ್ಕಿದ್ದು, ಮಂಜು ಬಳಿ ಇದೆ. ಮಂಜು ಬಂದಕೂಡಲೇ ಕೇಳಿಕೊಡುವುದಾಗಿ ಪ್ರದೀಪ್ ಹೇಳಿದ್ದಾರೆ. ಈ ಸಂದರ್ಭ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ.
ಸಂಜೆ 5 ಗಂಟೆಗೆ ಹೊಟೇಲ್ ಕೆಲಸ ಮುಗಿಸಿ, ಹೊಟೇಲ್ನಲ್ಲಿ ಕೆಲಸ ಮಾಡುವ ಸರಿತಾ ಎಂಬವರನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ಸರಿತಾ ಅವರ ಮನೆ ಬಳಿ ಇಳಿಸಿದ್ದಾರೆ. ಈ ಸಂದರ್ಭ ಸೋಮಯ್ಯ ಪ್ರದೀಪ್ನನ್ನು ಕರೆದು ಹಣ ಕೊಡುವಂತೆ ಪರ್ಸ್ಗೆ ಕೈ ಹಾಕಿದ್ದಾರೆ. ಅದೇ ವೇಳೆ ಸೋಮಯ್ಯ ಅವರ ತಂದೆ ಬೆಳ್ಯಪ್ಪ ಹಿಂದಿನಿಂದ ಬಂದು ತಲೆಯ ಎಡಭಾಗಕ್ಕೆ ಕತ್ತಿಯಿಂದ ಕಡಿದಿದ್ದಾರೆ. ಪ್ರದೀಪ್ ಹಿಂದೆ ತಿರುಗಿದಾಗ ಬೆಳ್ಯಪ್ಪ ಹಿಡಿದುಕೊಂಡಿದ್ದಾರೆ. ಆಗ ಸೋಮಯ್ಯ ಮತ್ತು ಸಹೋದರ ಮೋಹನ್ ಈರ್ವರು ಸೇರಿ ಕತ್ತಿಯಿಂದ ಕಡಿದಿದ್ದಾರೆ. ನಂತರ ಕೆಳಗೆ ಬಿದ್ದ ಪ್ರದೀಪ್ನ ಮೇಲೆ ಕಾಲು ಹಾಗೂ ಕೈಗಳಿಗೆ ಕಬ್ಬಿಣದ ಸಲಾಕೆಯಿಂದ ಹೊಡೆದಿದ್ದಾರೆ. ಅಷ್ಟರಲ್ಲಿ ಪ್ರದೀಪ್ನ ಬೊಬ್ಬೆ ಕೇಳಿ ಸರಿತಾ ಓಡಿಬಂದು ಹರೀಶ್ ಎಂಬಾತನನ್ನು ಕರೆ ಮಾಡಿ ಕರೆದಿದ್ದಾರೆ. ಅಷ್ಟರಲ್ಲಿ ಈ ಮೂವರು ಓಡಿ ಹೋಗಿದ್ದಾರೆ. ನಂತರ ಹರೀಶ್ ಬಂದು ಪ್ರದೀಪ್ನನ್ನು ಕಾರಿನಲ್ಲಿ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಚಾರ ತಿಳಿದ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ (ಅಶ್ವಿನಿ) ದಾಖಲಾಗಿರುವ ಪ್ರದೀಪ್ನಿಂದ ಹೇಳಿಕೆ ಪಡೆದುಕೊಂಡು ಮೂವರ ವಿರುದ್ಧ ನಂ.86/2020 ಕಲಂ 506, 324 ಹಾಗೂ 307 ಖ/W34 ರನ್ವಯ ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.