ಮಡಿಕೇರಿ, ಜೂ. 7: ಕೊಡಗು ಜಿಲ್ಲೆಯಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿರುವ ರಾಜ್ಯದ ಮತ್ತೊಂದು ಪೊಲೀಸ್ ತರಬೇತಿ ಶಾಲೆಯ ನಿರ್ಮಾಣಕ್ಕೆ ಸಂಬಂಧಿಸಿ ದಂತೆ ಗುರುತು ಮಾಡಿದ ಸ್ಥಳವನ್ನು ಇದೀಗ ಅಧಿಕೃತವಾದ ದಾಖಲೆ ಸಹಿತವಾಗಿ ಸಂರಕ್ಷಿಸಲಾಗಿದೆ.ಎಲ್ಲಾ 86.13 ಎಕರೆ ಜಮೀನಿಗೂ ತಂತಿ ಕಂಬದ ಬೇಲಿಯನ್ನು ಅಳವಡಿಸಲಾಗಿದ್ದು, ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೇಲ್ಮಟ್ಟಕ್ಕೆ ಮಾಹಿತಿಯನ್ನು ಒದಗಿಸಿದ್ದಾರೆ.ಸೋಮವಾರಪೇಟೆ ತಾಲೂಕಿನ ಕುಶಾಲನಗರ ಹೋಬಳಿಯ ಅಂದಾನಿಪುರ ಮತ್ತು 6ನೇ ಹೊಸಕೋಟೆ ಗ್ರಾಮದಲ್ಲಿ ಸರಕಾರದಿಂದ ಪೊಲೀಸ್ ಇಲಾಖೆಗೆ ಪೊಲೀಸ್ ತರಬೇತಿ ಕೇಂದ್ರವನ್ನು ಪ್ರಾರಂಭಿಸುವ ಉದ್ದೇಶಕ್ಕಾಗಿ 2016ನೇ ಸಾಲಿನಲ್ಲಿ 86.13 ಎಕರೆ ಜಮೀನನ್ನು ಗುರುತಿಸಿ ಕಾಯ್ದಿರಿಸಲಾಗಿತ್ತು. ಆದರೆ ಸದರಿ ಜಮೀನನ್ನು ಪೊಲೀಸ್ ಇಲಾಖೆಯ ಸ್ವಾಧೀನಕ್ಕೆ ಪಡೆದುಕೊಳ್ಳದ್ದರಿಂದ ಅಕ್ಕಪಕ್ಕದ ಗ್ರಾಮಸ್ಥರುಗಳು ಹಾಗೂ ಸಾರ್ವಜನಿಕರಿಂದ ಜಾಗ ಅತಿಕ್ರಮಣಗೊಂಡಿತ್ತು.

ಇದೀಗ ಸರಕಾರದ ಹೆಸರಿನಲ್ಲಿದ್ದ ಈ ಜಾಗವನ್ನು ಪೊಲೀಸ್ ಇಲಾಖೆಯ ಅಧೀಕ್ಷಕರು, ಪೊಲೀಸ್ ತರಬೇತಿ ಶಾಲೆ (ಮೊದಲ ಪುಟದಿಂದ) ಕೊಡಗು ಜಿಲ್ಲೆ ಎಂಬ ಹೆಸರಿಗೆ ಅಧಿಕೃತವಾಗಿ ಖಾತೆ ಬದಲಾವಣೆ ಮಾಡಿ ಆರ್‍ಟಿಸಿಯನ್ನು ಪಡೆಯಲಾಗಿದೆ. ಒಟ್ಟು 22 ಸರ್ವೆ ನಂಬರ್‍ಗಳ 86.13 ಎಕರೆ ಜಾಗವನ್ನು ಸಂಪೂರ್ಣವಾಗಿ ಸರ್ವೆ ಮಾಡಿಸಿ ಪೊಲೀಸ್ ಇಲಾಖೆಯ ವಶಕ್ಕೆ ಪಡೆಯಲಾಗಿದ್ದು, ರೂ. 32 ಲಕ್ಷ ವೆಚ್ಚದಲ್ಲಿ ಕೆಆರ್‍ಐಡಿಎಲ್ ಮೂಲಕ ತಂತಿ ಕಂಬದ ಬೇಲಿ ಸಹಿತವಾಗಿ ಸಂರಕ್ಷಿಸಲಾಗಿದೆ.ಭವಿಷ್ಯದಲ್ಲಿ ಉತ್ತಮ ಕೇಂದ್ರ ನಿರೀಕ್ಷೆ

ಪೊಲೀಸ್ ಇಲಾಖೆಗೆ ಮಂಜೂರಾಗಿರುವ ಜಾಗವು ಪೊಲೀಸ್ ತರಬೇತಿ ಶಾಲೆಗೆ ಪ್ರಶಸ್ತ ಸ್ಥಳವಾಗಿದೆ ಎನ್ನಲಾಗುತ್ತಿದೆ. ಹಾಸನದ ಶಾಂತಿ ಗ್ರಾಮ ಹಾಗೂ ಮೈಸೂರಿನಲ್ಲಿ ಸ್ಥಾಪನೆಯಾಗಿರುವ ಪೊಲೀಸ್ ತರಬೇತಿ ಶಾಲೆಗಳಿಗಿಂತಲೂ ವಿಶಾಲವಾದ ಸ್ಥಳಾವಕಾಶ ಇಲ್ಲಿದೆ. ಅಲ್ಲದೆ ಈ ಜಾಗವು ಹಾಸನ ಮತ್ತು ಮೈಸೂರು ಜಿಲ್ಲೆಗಳ ಗಡಿ ಭಾಗದಲ್ಲಿದ್ದು, ಮೂರು ಜಿಲ್ಲೆಗಳಿಗೂ ಸಂಪರ್ಕಿಸುವ ವ್ಯವಸ್ಥೆಯಿದೆ.

ಈ ಹಿನ್ನೆಲೆಯಲ್ಲಿ ಎಲ್ಲಾ ಆಧುನಿಕ ಮೂಲಭೂತ ಸೌಲಭ್ಯಗಳನ್ನು ಒಳಗೊಂಡ ಪೊಲೀಸ್ ತರಬೇತಿ ಶಾಲೆ ನಿರ್ಮಾಣವಾದರೆ ದಕ್ಷಿಣ ವಲಯ ವ್ಯಾಪ್ತಿಯ ಅತ್ಯಂತ ದೊಡ್ಡ ಹಾಗೂ ಸುಸಜ್ಜಿತ ಮಾದರಿ ಪೊಲೀಸ್ ತರಬೇತಿ ಶಾಲೆ ಇದಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ತರಬೇತಿ ಕೇಂದ್ರಕ್ಕೂ ಅವಕಾಶ

ಪ್ರಸ್ತುತ ರಾಜ್ಯದಲ್ಲಿ ಮೈಸೂರು ಹಾಗೂ ಗುಲ್ಬರ್ಗದಲ್ಲಿ ಮಾತ್ರ ಪೊಲೀಸ್ ಅಧಿಕಾರಿಗಳ ತರಬೇತಿಗೆ ಸಂಬಂಧಿಸಿದ ಕೇಂದ್ರವಿದೆ. ಈ ಜಾಗ ಹೆಚ್ಚು ವಿಸ್ತೀರ್ಣ ಇರುವ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಇದು ಅಧಿಕಾರಿಗಳ ತರಬೇತಿ ಕೇಂದ್ರವೂ ಆಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಉಳಿದಂತೆ ಕಾನ್ಸ್‍ಟೇಬಲ್ ತರಬೇತಿ ಶಾಲೆಗಳಾಗಿ ಹಾಸನ, ಚೆನ್ನಪಟ್ಟಣ, ಬೆಳಗಾಂನ ಖಾನಾಪುರ, ಗುಲ್ಬರ್ಗ, ಚಿಕ್ಕಮಗಳೂರು, ಬೆಂಗಳೂರು, ಮೈಸೂರಿನಲ್ಲಿ ತರಬೇತಿ ಶಾಲೆಗಳಿವೆ.

ಕೊಡಗು ಜಿಲ್ಲೆಯಿಂದ ಪೊಲೀಸ್ ಹುದ್ದೆಗಳಿಗೆ ಆಯ್ಕೆಯಾಗುವ ಮಹಿಳಾ ಸಿಬ್ಬಂದಿಗಳಿಗೆ ಪ್ರಸ್ತುತ ಮೈಸೂರಿನಲ್ಲಿ ತರಬೇತಿ ನೀಡಲಾಗುತ್ತಿದೆ. ಪುರುಷ ಸಿಬ್ಬಂದಿಗಳಿಗೆ ಇತರ ಶಾಲೆಗಳಲ್ಲಿ ಸ್ಥಳಾವಕಾಶ ನೋಡಿಕೊಂಡು ತರಬೇತಿ ನೀಡಲಾಗುತ್ತಿದೆ. ಕೊಡಗಿನಲ್ಲಿ ಮುಂದಿನ ದಿನದಲ್ಲಿ ಆಧುನಿಕ ಮಾದರಿಯ ತರಬೇತಿ ಶಾಲೆ ನಿರ್ಮಾಣಗೊಂಡಲ್ಲಿ ಇಲ್ಲಿಯೇ ಅಧಿಕಾರಿಗಳು, ಕಾನ್ಸ್‍ಟೇಬಲ್‍ಗಳಿಗೂ ತರಬೇತಿ ದೊರೆಯಲಿದೆ.