ಖ್ಯಾತ ನಟ ಚಿರಂಜೀವಿ ಸರ್ಜಾ ಸಾವು

ಬೆಂಗಳೂರು, ಜೂ. 7: ಸ್ಯಾಂಡಲ್‍ವುಡ್‍ನಲ್ಲಿ ಹೆಸರು ಮಾಡಿದ್ದ ಕನ್ನಡದ ಖ್ಯಾತ ನಟ ಚಿರಂಜೀವಿ ಸರ್ಜಾ (39) ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಿರಂಜೀವಿ ಸರ್ಜಾ ಅವರಿಗೆ ನಿನ್ನೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ವಯಸ್ಸು ಚಿಕ್ಕದಾದ್ದರಿಂದ ಹೃದಯ ಸಂಬಂಧಿ ಕಾಯಿಲೆ ಎಂದು ಕುಟುಂಬದವರು ಭಾವಿಸಿರಲಿಲ್ಲ. ಆದರೆ, ತೀವ್ರ ಎದೆನೋವು ಕಾಣಿಸಿಕೊಂಡಿತಂತೆ. ಆಗಲೇ ಅವರಿಗೆ ಹೃದಯಾಘಾತವಾಗಿತ್ತು. ಮೃತರ ಅಗಲಿಕೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಇಮ್ರಾನ್ ಪಾಷಾಗೆ ಪೊಲೀಸ್ ಎಚ್ಚರಿಕೆ

ಬೆಂಗಳೂರು, ಜೂ. 7: ಮಹಾಮಾರಿ ಕೊರೊನಾ ವೈರಸ್‍ನಿಂದ ಗುಣಮುಖರಾಗಿ ಮನೆಗೆ ಹಿಂದಿರುಗುವಾಗ ಕಾರ್ಪೋರೇಟರ್ ಇಮ್ರಾನ್ ಪಾಷಾಗೆ ಆಸ್ಪತ್ರೆಯಿಂದ ಮನೆಯವರೆಗೂ ಅಭಿಮಾನಿಗಳು ಅದ್ಧೂರಿ ಮೆರವಣಿಗೆ, ರೋಡ್ ಶೋ ನಡೆಸಿದ್ದಕ್ಕೆ ಬೆಂಗಳೂರು ಪೊಲೀಸರು ತಡೆದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇಮ್ರಾನ್ ಪಾಷಾ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅವರ ಅಭಿಮಾನಿಗಳು ರಸ್ತೆಯಲ್ಲಿ ಶಾಲೂ ಹೊದಿಸಿ ಹೂವಿನ ಹಾರ ಹಾಕಿ ಸ್ವಾಗತಿಸುತ್ತಿದ್ದರು. ಇನ್ನು ಇಮ್ರಾನ್ ಪಾಷಾ ಮೇಲೆ ಹೂವನ್ನು ಎಸೆದು ಅಭಿಮಾನ ತೋರಿಸುತ್ತಿದ್ದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಇಮ್ರಾನ್ ಪಾಷಾ ಅಭಿಮಾನಿಗಳು ಆತನಿಗೆ ಜೈಕಾರ ಕೂಗುತ್ತಾ ಬರುತ್ತಿದ್ದರು. ಅನುಮತಿ ಇಲ್ಲದೆ ರೋಡ್ ಶೋ ನಡೆಸಿದ್ದಕ್ಕೆ ಪೊಲೀಸರು ಇಮ್ರಾನ್ ಪಾಷಾರನ್ನು ತರಾಟೆಗೆ ತೆಗೆದುಕೊಂಡು ರೋಡ್ ಶೋಗೆ ಬ್ರೇಕ್ ಹಾಕಿದರು. ಇದೇ ವೇಳೆ ಅವರ ಹಿಂದೆ 150ಕ್ಕೂ ಹೆಚ್ಚು ಬೈಕ್‍ಗಳಲ್ಲಿ ತೆರಳುತ್ತಿದ್ದ ಅಭಿಮಾನಿಗಳನ್ನು ರಸ್ತೆಯಲ್ಲೇ ತಡೆದ ಜೆಜೆ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಸತೀಶ್ ಯಾರಾದರೂ ಒಂದು ಹೆಜ್ಜೆ ಮುಂದಕ್ಕೆ ಇಟ್ರೆ ಪರಿಮಾಮ ಸರಿ ಇರಲ್ಲ ಎಂದು ಎಚ್ಚರಿಕೆ ನೀಡಿದರು.

ಈ ವಾರ ರಾಜ್ಯದಲ್ಲಿ ಭಾರೀ ಮಳೆ

ಬೆಂಗಳೂರು, ಜೂ. 7: ರಾಜ್ಯಾದ್ಯಂತ ಈ ವಾರ ಹೆಚ್ಚಿನ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ಉಸ್ತುವಾರಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, ಮುಂಗಾರು ಎಂದಿನಂತೆ, ವಾಡಿಕೆಯಂತೆ ಜೂನ್ 1 ರಂದು ಕೇರಳ ರಾಜ್ಯವನ್ನು ಪ್ರವೇಶ ಮಾಡಿದೆ. ಆದರೆ ಮುಂಗಾರು ದುರ್ಬಲವಾದ ಕಾರಣ ರಾಜ್ಯಕ್ಕೆ ಬರುವುದು ಸ್ವಲ್ಪ ವಿಳಂಬವಾಗಿತ್ತು ಎಂದಿದ್ದಾರೆ. ಕರಾವಳಿ, ದಕ್ಷಿಣ ಒಳನಾಡು, ಮಲೆನಾಡು ಪ್ರದೇಶಕ್ಕೆ ಇದೇ 4 ಮತ್ತು 5 ರಂದು ಮುಂಗಾರು ಆಗಮನವಾಗಿದ್ದು ಅನೇಕ ಕಡೆ ಮಳೆಯಾಗಿದೆ. ರಾಜ್ಯಾದ್ಯಂತ ಈ ವಾರ ಹೆಚ್ಚಿನ ಮಳೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಡಾ. ವೀರೇಂದ್ರ ಹೆಗ್ಗಡೆ ಸ್ಟಷ್ಟೀಕರಣ

ಬೆಂಗಳೂರು, ಜೂ. 7: ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದಿರುವವರಿಂದ ಕೊರೊನಾ ಪ್ರಕರಣ ಜಾಸ್ತಿಯಾಗುತ್ತಿದೆ ಎಂಬ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ ಹಾಗೂ ವಿರೋಧ ಚರ್ಚೆಗೆ ಕಾರಣವಾಗಿದೆ. ಕೆಲವರು ಹೆಗ್ಗಡೆ ಅವರ ಪರವಾಗಿ ವಾದಿಸುತ್ತಿದ್ದರೆ, ಮತ್ತೆ ಕೆಲವರು ವಿರುದ್ಧವಾಗಿ ವಾದಿಸುತ್ತಿದ್ದಾರೆ. ಈ ಮಧ್ಯೆ ತಮ್ಮ ಹೇಳಿಕೆ ಕುರಿತಂತೆ ವೀರೇಂದ್ರ ಹೆಗ್ಗಡೆ ಅವರೇ ಸ್ಪಷ್ಟೀಕರಣ ನೀಡಿದ್ದಾರೆ. ಸುದ್ದಿವಾಹಿನಿಯೊಂದರಲ್ಲಿ ದೇವಸ್ಥಾನಗಳನ್ನು ದೇವರ ದರ್ಶನಕ್ಕೆ ಮುಕ್ತ ಗೊಳಿಸುವ ವಿಚಾರದಲ್ಲಿ ಮಾತನಾಡುವಾಗ ಮಹಾರಾಷ್ಟ್ರದ ಜನರ ಸಂಪರ್ಕದಿಂದ ಕರ್ನಾಟಕದಲ್ಲಿ ಕೊರೊನಾ ಹೆಚ್ಚಾಗುತ್ತಿದೆ ಎಂಬ ಭಯವನ್ನು ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದಿರುವವರಿಂದ ಇಲ್ಲಿ ಕೊರೊನಾ ಪ್ರಕರಣ ಜಾಸ್ತಿಯಾಗುತ್ತಿದೆ, ಅವರು ಅಲ್ಲೇ ಇದ್ದರೆ ಉತ್ತಮ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ಕೇಳಿಬರುತಿತ್ತು. ನಾನೂ ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ. ಇದರ ಹಿಂದಿರುವ ಉದ್ದೇಶವನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು, ದುರುದ್ದೇಶಕ್ಕೆ ಬಳಸಬಾರದು ಎಂದಿದ್ದಾರೆ.

ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು, ಜೂ. 7: ರಾಜ್ಯ ಸರ್ಕಾರ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ. ಕಾರ್ಮಿಕ ಇಲಾಖೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ರಾಜ್ ಕುಮಾರ್ ಖತ್ರಿ ಕೃಷಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಗಂಗಾ ರಾಮ್ ಬಡೇರಿಯಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಮತ್ತು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ, ಭೂಮಿ ಮತ್ತು ಯುಪಿಒಆರ್)ನ ಪ್ರಧಾನ ಕಾರ್ಯದರ್ಶಿಯಾಗಿ ಎನ್ ಮಂಜುನಾಥ್‍ಪ್ರಸಾದ್ ಅಧಿಕಾರ ವಹಿಸಿಕೊಂಡರೆ, ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಟಿ.ಕೆ. ಅನಿಲ್ ಕುಮಾರ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಿಂದುಳಿದ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ಮೊಹಮ್ಮದ್ ಮೊಹ್ಸಿನ್ ಕರ್ನಾಟಕ ಸರ್ಕಾರದ ಪುನರ್ವಸತಿ ಇಲಾಖೆಯ ಆಯುಕ್ತ ಮತ್ತು ಕಾರ್ಯದರ್ಶಿ ಹುದ್ದೆ ವಹಿಸಿಕೊಳ್ಳಲಿದ್ದಾರೆ. ಕೃಷಿ ಇಲಾಖೆಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ತೋಟಗಾರಿಕಾ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಕೊರೊನಾದಲ್ಲಿ ಭಾರತಕ್ಕೆ 5ನೇ ಸ್ಥಾನ

ಬೆಂಗಳೂರು, ಜೂ. 7: ದೇಶದಲ್ಲಿ ಗಗನ ಮುಖಿ ಏರುತ್ತಿರುವ ಸೋಂಕು ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಪ್ರತಿ ನಿತ್ಯ ಭಾರತದಲ್ಲಿ 8-10 ಸಾವಿರ ಕೇಸ್‍ಗಳು ಪತ್ತೆಯಾಗುತ್ತಿದ್ದು, ಇಂದಿನ ಹೆಲ್ತ್ ಬುಲೆಟಿನ್ ಬಳಿಕ ಭಾರತ ಮತ್ತೊಂದು ಕೆಟ್ಟ ದಾಖಲೆ ಬರೆದಿದೆ. ಇಂದು ವಿಶ್ವದಲ್ಲಿ ಅತಿ ಹೆಚ್ಚು ಕೊರೊನಾ ಪೀಡಿತ ರಾಷ್ಟ್ರಗಳ ಟಾಪ್ 5 ಸ್ಥಾನಕ್ಕೆ ಸೇರ್ಪಡೆಯಾಗಲಿದ್ದು, ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಸೋಂಕಿತರಿರುವ ದೇಶ ಎನ್ನುವ ಕುಖ್ಯಾತಿಗೆ ಒಳಗಾಗಲಿದೆ ಎಂದು ಹೇಳಲಾಗುತ್ತಿದೆ.

ಸಿಎಂ ನಿರ್ಧಾರಕ್ಕೆ ಹೆಚ್‍ಡಿಕೆ ಅಸಮಾಧಾನ

ಬೆಂಗಳೂರು, ಜೂ. 7: ಟ್ರ್ಯಾಕ್ಟರ್, ವಾಹನ ಇರುವ ರೈತರು ಬಿಪಿಎಲ್ ಕಾರ್ಡ್‍ಗಳನ್ನು ಹಿಂದಿರುಗಿಸಬೇಕು, ಇಲ್ಲವಾದರೆ ಕಾನೂನು ಕ್ರಮ ಜರುಗಿ ಸಲಾಗುತ್ತದೆ ಎನ್ನುವ ಸಿಎಂ ಯಡಿಯೂರಪ್ಪ ಅವರ ಸೂಚನೆ ಮೂರ್ಖತನದಿಂದ ಕೂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.