ಚೆಟ್ಟಳ್ಳಿ, ಜೂ. 7: ಸ್ತನಕ್ಯಾನ್ಸರ್ ಪೀಡಿತೆ ಸಾವು ಬದುಕಿನ ನರಳಾಟದಲ್ಲಿ ತನ್ನ ಹೆತ್ತ ಮಕ್ಕಳನ್ನು ಹಂಬಲಿಸುತ್ತಾ ಜೀವಕ್ಕೆ ಕೊನೆಯುಸಿರೆಳೆದ ನತದಷ್ಟೆ ಕಾರ್ಮಿಕ ಮಹಿಳೆ ಲಲಿತಾಳ ನೋವಿನ ಕಥೆಯಿದು...
ಚೆಟ್ಟಳ್ಳಿ ಪಂಚಾಯಿತಿಗೆ ಒಳಪಡುವ ಕೆ.ಚೆಟ್ಟಳ್ಳಿ ಕರ್ಣಯ್ಯನ ಸುರೇಶ ಮತ್ತು ಗೀತಾರ ಲೈನ್‍ಮನೆಯಲ್ಲೇ ಹಲವು ವರ್ಷಗಳಿಂದ ಆಶ್ರಯ ಪಡೆದಿದ್ದಳು ಈ ಲಲಿತಾ. ಪತಿಯನ್ನು ಕಳಕೊಂಡು ಸುಮಾರು 20 ವರ್ಷಗಳೇ ಕಳೆದಿದ್ದರೂ ತನ್ನೆರಡು ಹೆಣ್ಣು ಹಾಗೂ ಓರ್ವ ಗಂಡು ಮಗನ ಸಾಕಿ ಬೆಳೆಸಿ ಹೆಣ್ಣು ಮಕ್ಕಳನ್ನು ಕೇರಳದ ಕಾಸರಗೋಡಿಗೆ ವಿವಾಹ ಮಾಡಿ ಕೊಟ್ಟ ತಾಯಿ ಈಕೆ. ತನ್ನ ದುಡಿಮೆಯಿಂದ ಜೀವನ ಸಾಗಿಸುತ್ತಿದ್ದ ಲಲಿತಾ ತನ್ನ ಮನೆ ಯಜಮಾನರ ಸಹಕಾರದಿಂದ ಸಂಬಂಧಪಟ್ಟ ಇಲಾಖೆಗೆಲ್ಲಾ ಓಡಾಡಿ ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಿದ್ದರು. ಕೆಲವು ತಿಂಗಳ ವೇತನದಕ್ಕಿತ್ತಾದರೂ ಮತ್ತೆ ಬಾರದ ವಿಧವಾ ವೇತನಕ್ಕಾಗಿ ಅಲೆದಾಟ ಮುಂದುವರೆದಿತ್ತು.
ಇದರ ನಡುವೆ ವಿಧಿಯಾಟ ವೆಂಬಂತೆ ಅನಾರೋಗ್ಯ ಪೀಡಿತೆಯಾಗಿ ಪರೀಕ್ಷೆಯ ವೇಳೆ ಸ್ತನಕ್ಯಾನ್ಸರ್ ದೃಢಪಟ್ಟಿತ್ತು. ಪ್ರಧಾನಮಂತ್ರಿ ಆರೋಗ್ಯ ಯೋಜನೆಯಡಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯತೊಡಗಿದಳು. ತನ್ನ ಕ್ಯಾನ್ಸರ್ ಚಿಕ್ಸಿತೆಯ ನಡುವೆ ಬಿಡದ ವಿಧವಾ ವೇತನಾ ಅಲೆದಾಟ ಮುಂದುವರೆದಿತ್ತು. ಲಲಿತಾಳ ವಿಷಯದಲ್ಲಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಪತ್ರಿಕೆ ಹಾಗೂ ಮಾಧ್ಯಮಗಳಿಂದ ಬಹಿರಂಗ ಗೊಂಡಾಗ ಅಧಿಕಾರಿಗಳು ಓಡೋಡಿ ಬಂದು ಸಹಾಯ ಹಸ್ತದ ಪೊಳ್ಳು ಭರವಸೆ ಮಾತ್ರ ಸಿಕ್ಕಿತ್ತು.
ಜೀವ ಉಳಿಯಲು ಕೊರೊನಾ ಅಡ್ಡಿಯಾಯಿತೇ?
ಕ್ಯಾನ್ಸರ್ ಖಾಯಿಲೆಯಿಂದ ಇದ್ದರೂ ತನ್ನ ಬೆಂಗಾವಲಿಗೆ ನಿಂತ ಯಜಮಾನರಿಗೆ ನಿಯತ್ತಿನ ಕಾರ್ಮಿಕೆಯಾಗಿ ದುಡಿಯ ತೊಡಗಿದರು ಲಲಿತಾ. ಎರಡು ಮೂರು ತಿಂಗಳಿಗೊಮ್ಮೆ ಮಂಗಳೂರು ಆಸ್ಪತ್ರೆಯಲ್ಲಿ ಕೀಮೋ ಹಾಗೂ ರೇಡಿಯೋ ಥೆರಪಿ ಚಿಕ್ಸಿತೆಗೆ ತೆರಳುತ್ತಾ, ತನ್ನ ಆರೋಗ್ಯವನ್ನು ಸರಿದೂಗಿಸಿ ಜೀವನ ಸಾಗಿಸುತ್ತಿದ್ದಳು. ಈ ಬಾರಿ ಪರೀಕ್ಷೆಗೆ ತೆರಳಿ ಕೀಮೋಥೆರಪಿ ಬೇಕಿತ್ತಾದರೂ ಲಲಿತಾಳ ಆರೋಗ್ಯಕ್ಕೆ ಸಂಬಂಧಿಸಿದ ದಾಖಲೆಗಳು ಕಾಸರಗೋಡಿನಲ್ಲಿರುವ ಮಗಳ ಕೈಯಲ್ಲಿತ್ತು. ಮಗಳು ಅಮ್ಮನನ್ನು ಕರೆದುತರಲು ಕಾಸರಗೋಡಿನಿಂದ ಬರಲು ಅನುಮತಿ ಪತ್ರಕ್ಕಾಗಿ ಹಲವು ಬಾರಿ ಅಲೆದಾಡಿದರೂ ಸಿಗಲಿಲ್ಲ. ಲಲಿತಾಳಿಗೂ ಆಸ್ಪತ್ರೆಗೆ ತೆರಳಲು ಕೊರೊನಾ ಲಾಕ್‍ಡೌನ್ ಅಡ್ಡಿಯಾಯಿತು. ಸಮಯಕ್ಕೆ ಸರಿಯಾಗಿ ಕೀಮೋಥೆರಪಿ ಚಿಕ್ಸಿತೆ ಸಿಗದೆ ಕಾನ್ಸರ್ ಪೀಡಿತೆ ಲಲಿತಾ ದಿನೇದಿನೇ ಸೊರಗತೊಡಗಿದಳು. ಜನಪ್ರತಿನಿಧಿಗಳು, ಸ್ಥಳೀಯರು ಲಲಿತಾಳ ಸ್ಥಿತಿಯನ್ನು ಕಣ್ಣಾರೆ ಕಂಡು ಸಹಾಯ ಹಸ್ತ ನೀಡಿದರೂ ತಾ. 4ರಂದು ಮುಂಜಾನೆ ಕೊನೆಯುಸಿರೆಳೆದಳು.
ಮಾಧ್ಯಮಗಳು ಕ್ಯಾನ್ಸರ್‍ಪೀಡಿತೆ ಲಲಿತಾ ದುಸ್ಥಿತಿಯ ಬಗ್ಗೆ ಸುದ್ದಿ ಬಿತ್ತರಿಸಿದವು. ಪತ್ರಿಕೆಯ ಪ್ರತಿಯನ್ನು ಹಿಡಿದು ಇಲಾಖೆಯವರನ್ನು ಅಂಗಲಾಚಿದ ಹೆಣ್ಣುಮಕ್ಕಳನ್ನು ಕೇರಳದಲ್ಲಿ ಸೀಲ್ ಹಾಕಿ ಕಳುಹಿಸಿಕೊಡಲಾದರೂ ಆ ವೇಳೆಗೆ ಹೆತ್ತತಾಯಿ ಇಹಲೋಕ ತ್ಯಜಿಸಿಬಿಟ್ಟಿದ್ದಳು.
ಹೆತ್ತಮಕ್ಕಳನ್ನು ಹಂಬಲಿಸುತ್ತಾ ಕೊನೆಯಾದಳು...
ಕೊರೊನಾದ ನಡುವೆ ಆರೋಗ್ಯವನ್ನು ಚೇತರಿಸಿಕೊಳ್ಳಲಾಗದೆ ಕೊನೆಗಳಿಗೆಯಲ್ಲಾದರೂ ತನ್ನ ಮಕ್ಕಳನ್ನು ಕಣ್ಣುತುಂಬಿಕೊಳ್ಳುವ ಹಂಬಲ ಲಲಿತಾಳದ್ದಾಗಿತ್ತು. ತಾಯಿಗೆ ಆಶ್ರಯವಾಗಿದ್ದ ಮಗ ಮರದಿಂದ ಬಿದ್ದು ಕೈಕಾಲು ಮುರಿದು ನಾಟಿ ಔಷದಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ತಮಗೆ ನಿಯತ್ತಿನ ಕಾರ್ಮಿಕೆಯಾಗಿದ್ದ ಲಲಿತಾಳ ಪ್ರೀತಿಯ ಆಶ್ರಯದಾರರಾದ ಕರ್ಣಯ್ಯನ ಸುರೇಶ್ ಹಾಗೂ ಗೀತಾ ಅವರ ಸೇವೆಯನ್ನು ಬದುಕಿದ್ದಾಗ ನೆನೆಸಿಕೊಳ್ಳುತ್ತಿದ್ದಳು ಲಲಿತಾ ಎಂದು ಮಾಲೀಕರು ದುಃಖಿಸುತ್ತಾರೆ. ಗುರುವಾರದ ಮುಂಜಾನೆ ಆಶ್ರಯದಾತರಿಂದ ಮಾವಿನ ಜ್ಯೂಸ್ ಕೇಳಿ ಕುಡಿದು ಕೈ ಎತ್ತಿ ನಮಸ್ಕರಿಸಿ ಕೊನೆಯುಸಿರೆಳೆದಳಂತೆ ಈ ನತದೃಷ್ಟೆ. ಸಂಬಂಧಿಕರು ನೆರೆ ಊರಿನವರು ಸೇರಿ ಲಲಿತಾ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
-ಪುತ್ತರಿರ ಕರುಣ್ ಕಾಳಯ್ಯ