ಕುಶಾಲನಗರ, ಜೂ. 5: ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಮಹಿಳೆ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದಿಂದ ಕುಶಾಲನಗರ ಡಿವೈಎಸ್ಪಿ ಕಛೇರಿ ಮುಂಭಾಗ ಪ್ರತಿಭಟನೆ ನಡೆಯಿತು.

ಕಾಂಗ್ರೆಸ್ ಮುಖಂಡ ವಿ.ಪಿ.ಶಶಿಧರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕುಶಾಲನಗರದ ವಿಂದ್ಯ ಪೂಣಚ್ಚ ಎಂಬ ಮಹಿಳೆ ಫೇಸ್ ಬುಕ್‍ನಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿಯ ಬಗ್ಗೆ ಅವಾಚ್ಯವಾಗಿ ನಿಂದಿಸಿದ್ದು ಆಕೆಯ ವಿರುದ್ಧ ಎಫ್‍ಐಆರ್ ದಾಖಲಿಸಿ ಗಡೀಪಾರು ಮಾಡುವಂತೆ ಒತ್ತಾಯಿಸಿ ಠಾಣೆ ಮುಂಭಾಗ ಧರಣಿ ನಡೆಸಲಾಯಿತು.

ದೂರು ನೀಡಿದರೂ ಕೂಡ ಪೆÇಲೀಸರು ಆಕೆಯ ವಿರುದ್ಧ ಇದುವರೆಗೆ ಮೊಕದ್ದಮೆ ದಾಖಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಕೂಡಲೇ ಎಫ್‍ಐಆರ್ ದಾಖಲಿಸುವಂತೆ ಡಿವೈಎಸ್ಪಿ ಎಚ್.ಎಂ.ಶೈಲೇಂದ್ರ, ವೃತ್ತ ನಿರೀಕ್ಷಕ ಎಂ.ಮಹೇಶ್ ಅವರನ್ನು ಒತ್ತಾಯಿಸಿದರು. ವ್ಯಕ್ತಿ ನಿಂದನೆ ಕುರಿತು ಎಫ್ ಐ ಆರ್ ದಾಖಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲು ಅವಕಾಶವಿದೆ ಎಂದು ತಿಳಿಸಿದರೂ ಪ್ರತಿಭಟನಾಕಾರರು ಧರಣಿ ಮುಂದುವರೆಸಿದರು. ಈ ಬಗ್ಗೆ ಉನ್ನತ ಅಧಿಕಾರಿಗಳ ಸಲಹೆ ಪಡೆದು ಕಾನೂನು ಕ್ರಮಕೈಗೊಳ್ಳಲಾಗುವುದಾಗಿ ಪೆÇಲೀಸ್ ಅಧಿಕಾರಿಗಳು ತಿಳಿಸಿದ ಬಳಿಕ ಪ್ರತಿಭಟನೆ ಮುಕ್ತಾಯಗೊಂಡಿತು.

ಪ್ರತಿಭಟನೆಯಲ್ಲಿ ಎಂಎಲ್ಸಿ ವೀಣಾ ಅಚ್ಚಯ್ಯ, ಪ್ರಮುಖರಾದ ಮಿಟ್ಟು ಚಂಗಪ್ಪ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಜಿಪಂ ಸದಸ್ಯರಾದ ಕೆ.ಪಿ.ಚಂದ್ರಕಲಾ, ಸುನಿತ, ಕುಮುದ ಧರ್ಮಪ್ಪ, ಲತೀಫ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಂತಕುಮಾರ್, ವಕ್ತಾರ ಸುರೇಶ್, ಪ.ಪಂ. ಸದಸ್ಯೆ ಜಯಲಕ್ಷ್ಮಿ ನಂಜುಂಡಸ್ವಾಮಿ ಸೇರಿದಂತೆ ಸ್ಥಳೀಯ ಸಮಿತಿ ಪ್ರಮುಖರು, ಕಾರ್ಯಕರ್ತರು ಇದ್ದರು.