ಮಡಿಕೇರಿ ಜೂ.5 : ವಾಲ್ನೂರು, ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಪಾಳು ಬಿದ್ದಿದ್ದ ಅತ್ತಿಮಂಗಲ ಪೈಸಾರಿ ಕೆರೆಗೆ ಮರು ಜೀವ ನೀಡಲಾಗಿದೆ. ಸ್ಥಳೀಯ ವಾರ್ಡ್‍ನ ಸದಸ್ಯ ಅಂಚೆಮನೆ ಸುಧಿ ಅವರ ಕಾಳಜಿಯಿಂದ ಕೆರೆಯನ್ನು ಸ್ವಚ್ಛಗೊಳಿಸಲಾಗಿದ್ದು, ಮೀನು ಸಾಕಾಣಿಕೆ ಮತ್ತು ಪುಷ್ಪೋದ್ಯಾನ ಅಭಿವೃದ್ಧಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ.

ಕಳೆದ ಅನೇಕ ವರ್ಷಗಳಿಂದ ಕಾಡು ತುಂಬಿದ್ದ ಈ ಕೆರೆಗೆ ಅಕ್ಕಪಕ್ಕದ ಕೆಲವು ಗ್ರಾಮಗಳ ಮಂದಿ ತ್ಯಾಜ್ಯಗಳನ್ನು ಸುರಿಯುತ್ತಿದ್ದರು. ಅಲ್ಲದೆ ಕೆರೆ ತುಂಬಾ ಕಾಡು ತುಂಬಿದ್ದರಿಂದ ಕೆರೆ ಇದೆ ಎನ್ನುವ ಅರಿವಿಲ್ಲದೆ ಚಾಲಕರ ನಿಯಂತ್ರಣ ತಪ್ಪಿದ ವಾಹನಗಳು ಮಗುಚಿದ ಘಟನೆಗಳು ಕೂಡ ನಡೆದಿವೆ. ಈ ಕೆರೆಗೆ ಆನೆಗಳು ಕೂಡ ಬಂದು ನೀರು ಕುಡಿಯುತ್ತಿದ್ದವು. ಗ್ರಾಮಕ್ಕೆ ಅನುಕೂಲವಾಗಬೇಕಾಗಿದ್ದ ಕೆರೆಯು ಪಾಳು ಬಿದ್ದಿದ್ದನ್ನು ಗಮನಿಸಿದ ಸದಸ್ಯ ಸುಧಿ ಅವರು ಕೆರೆ ಸ್ವಚ್ಛತೆಗೆ ಚಾಲನೆ ನೀಡಿದರು. ಇದೀಗ ಕೆರೆ ಸಂಪೂರ್ಣವಾಗಿ ಕಸ ಮುಕ್ತವಾಗಿದ್ದು, ಮೀನು ಸಾಕಾಣಿಕೆಗೆ ಯೋಗ್ಯವಾಗಿದೆ. ಕೆರೆಯ ಸುತ್ತಲು ಪುಷ್ಪೋದ್ಯಾನ ಅಭಿವೃದ್ಧಿಗೂ ಚಿಂತಿಸಲಾಗಿದೆ ಎಂದು ಅಂಚೆಮನೆ ಸುಧಿ ತಿಳಿಸಿದ್ದಾರೆ.

ಮೀನು ಸಾಕಾಣಿಕೆ ಮತ್ತು ಕೆರೆ ನಿರ್ವಹಣೆಯ ಜವಾಬ್ದಾರಿಯನ್ನು ಮುಂದಿನ ಐದು ವರ್ಷಗಳವರೆಗೆ ನೆಲ್ಲಿಹುದಿಕೇರಿಯ ಮುತ್ತಪ್ಪ ಕಲಾ ಯುವ ವೇದಿಕೆಗೆ ನೀಡಲಾಗಿದೆ. ವೇದಿಕೆಯ ಅಧ್ಯಕ್ಷ ಅಭಿಲಾಷ್, ಪದಾಧಿಕಾರಿಗಳಾದ ಸತೀಶ್ ನಾರಾಯಣ, ಪ್ರಕಾಶ ಮತ್ತಿತರ ಸದಸ್ಯರುಗಳು ಕೆರೆ ಸ್ವಚ್ಛತೆ ಸಂದರ್ಭ ಶ್ರಮದಾನ ಮಾಡಿದ್ದರು. ಕೆರೆಗೆ ಮರು ಜೀವ ನೀಡಿದ ಬಗ್ಗೆ ಸ್ಥಳೀಯ ಗ್ರಾಮಸ್ಥರು ಹಾಗೂ ಬೆಳೆಗಾರರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.