ಮಡಿಕೇರಿ, ಜೂ. 6: ಕೊಡಗು ಜಿಲ್ಲೆಯಲ್ಲಿ ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಮೂರು ತಾಲೂಕುಗಳಲ್ಲೂ ಒಂದೊಂದು ಬಹೃತ್ ಕಸ ವಿಲೇವಾರಿ ಘಟಕವನ್ನು ಆರಂಭಿಸಲು ಜಿಲ್ಲಾ ಪಂಚಾಯತ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿ.ಪಂ. ಸದಸ್ಯ ಶಿವು ಮಾದಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ತೆರೆಯಲಾಗಿರುವ ಕಸವಿಲೇವಾರಿ ಘಟಕಗಳಲ್ಲಿ ಬಹುತೇಕ ಕಡೆ ಸರಿಯಾಗಿ ಕಸ ವಿಂಗಡಣೆ ಹಾಗೂ ವಿಲೇವಾರಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ಮಾತನಾಡಿ, ಮುಳ್ಳುಸೋಗೆ ವ್ಯಾಪ್ತಿಯಲ್ಲೂ ಕಸವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದರು. ಸದಸ್ಯೆ ಚಂದ್ರಕಲಾ ಮಾತನಾಡಿ, ಮಾದಾಪುರ ರಸ್ತೆ ಬದಿಗಳಲ್ಲಿ ಕಸದ ರಾಶಿ ಸುರಿಯಲ್ಪಟ್ಟಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸಿಇಒ ಲಕ್ಷ್ಮಿಪ್ರಿಯ ಅವರು, ಜಿಲ್ಲೆಯಲ್ಲಿ 104 ಪಂಚಾಯಿತಿಗಳ ಪೈಕಿ ಹತ್ತು ಪಂಚಾಯಿತಿಯನ್ನು ಹೊರತುಪಡಿಸಿ ಉಳಿದ 94 ಪಂಚಾಯಿತಿಗಳಲ್ಲಿ ಕಸವಿಲೇವಾರಿ ಘಟಕ ಸ್ಥಾಪನೆಗೆ ಕ್ರಿಯಾಯೋಜನೆ ಸಿದ್ಧವಾಗಿದೆ. ಬಹುತೇಕ ಕಡೆ ಘಟಕವನ್ನು ಆರಂಭಿಸಲಾಗಿದೆ. ಇನ್ನೂ ಹಲವೆಡೆ ನಾನಾ ಕಾರಣಗಳಿಂದ ಅನುಷ್ಠಾನ ವಿಳಂಬವಾಗುತ್ತಿದೆ ಎಂದರು.

ಈ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಪ್ರಭಾಕರ್ ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಕಸವಿಲೇವಾರಿ ಘಟಕ ಆರಂಭವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯ ಮುರಳಿ ಕರುಂಬಮಯ್ಯ ಮಾತನಾಡಿ, ನಾಪೋಕ್ಲು ವ್ಯಾಪ್ತಿಯಲ್ಲೂ ಕಸದ ರಾಶಿಯನ್ನು ಹೊಳೆ ಬದಿ ಹಾಕಲಾಗುತ್ತಿದೆ ಎಂದರು. ಸದಸ್ಯರುಗಳಾದ ಸಿ.ಕೆ. ಬೋಪಣ್ಣ, ಪ್ರತ್ಯು ಇವರುಗಳು

(ಮೊದಲ ಪುಟದಿಂದ) ಕಸವಿಲೇವಾರಿ ಘಟಕಗಳ ಕಾಮಗಾರಿ ವಿಳಂಬದ ಬಗ್ಗೆ ಗಮನ ಸೆಳೆದರು.

ಮತ್ತೋರ್ವ ಸದಸ್ಯ ವಿಜು ಸುಬ್ರಮಣಿ ಮಾತನಾಡಿ, ಜಿಲ್ಲೆಯಲ್ಲಿ ಕಸದ ಸಮಸ್ಯೆ ಗಂಭೀರವಾಗಿದ್ದು, ಈ ಹಿನ್ನೆಲೆಯಲ್ಲಿ ತಾಲೂಕುವಾರು ಒಂದೊಂದು ಬೃಹತ್ ಕಸವಿಲೇವಾರಿ ಘಟಕವನ್ನು ನಿರ್ಮಿಸುವುದೊಳಿತು ಎಂದು ಸಲಹೆಯಿತ್ತರು. ಇದಕ್ಕೆ ಧ್ವನಿಗೂಡಿಸಿದ ಕೆಲ ಸದಸ್ಯರು ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಂಗ್ರಹಿಸಿದ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ವಿಂಗಡಿಸಲು ಇದರಿಂದ ಅನುಕೂಲವಾಗಲಿದೆ ಎಂದು ಅಭಿಪ್ರಾಯಿಸಿದರು.

ಈ ಬಗ್ಗೆ ಕೆಲಕಾಲ ಚರ್ಚೆ ನಡೆದು ಕೊನೆಗೆ ಮೂರು ತಾಲೂಕುಗಳಲ್ಲಿ ಒಂದೊಂದು ಬೃಹತ್ ಕಸವಿಲೇವಾರಿ ಘಟಕ ಸ್ಥಾಪನೆಗೆ ನಿರ್ಧರಿಸಲಾಯಿತಲ್ಲದೆ ಇದಕ್ಕಾಗಿ ತಾ.ಪಂ. ಇಓಗಳು ಒಂದುವಾರದೊಳಗೆ ಜಾಗ ಗುರುತು ಮಾಡುವಂತೆ ಅಧ್ಯಕ್ಷ ಹರೀಶ್ ಸೂಚಿಸಿದರು. ಕಸವಿಲೇವಾರಿ ಘಟಕ ಸ್ಥಾಪನೆ ಸಂಬಂಧ ಸ್ವಚ್ಛ ಭಾರತ್ ಮಿಷನ್‍ನ ಇಂಜಿನಿಯರ್ ರಾಜೇಶ್ ಹಲವು ಮಾಹಿತಿಗಳನ್ನು ಸಭೆಗೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಸದಸ್ಯೆ ಸುನಿತಾ ಮಂಜುನಾಥ್, ನದಿ ದಡದಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಮಳೆಗಾಲದ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತಗೊಳ್ಳುವಂತೆ ನೋಟೀಸ್ ನೀಡಲಾಗಿದೆ. ಆದರೆ ಸುರಕ್ಷಿತ ಸ್ಥಳ ಯಾವುದು ಎಂಬದನ್ನು ಇನ್ನೂ ತೋರಿಸಿಲ್ಲ. ಹೀಗಿರುವಾಗ ಆ ಬಡ ಕುಟುಂಬಗಳು ಎಲ್ಲಿಗೆ ಹೋಗುವುದು ಎಂದು ಪ್ರಶ್ನಿಸಿದರಲ್ಲದೆ, ಸೂಕ್ತ ವ್ಯವಸ್ಥೆ ಕಲ್ಪಿಸಿದ ಬಳಿಕ ಆ ಕುಟುಂಬಗಳನ್ನು ಅಲ್ಲಿಂದ ಸ್ಥಳಾಂತಗೊಳಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕೆಂದರು.

ಜಿ.ಪಂ. ಸದಸ್ಯರುಗಳು ಗ್ರಾಮೀಣ ಭಾಗದ ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಇನ್ನೂ ಕೂಡ ಕಲ್ಪಿಸಲಾಗಿರುವುದಿಲ್ಲ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸಿಇಒ ಅವರು 2010ನೇ ಸಾಲಿನಿಂದ ಬಾಕಿಯಿದ್ದ 10 ಕೋಟಿ ವಿದ್ಯುತ್ ಶುಲ್ಕದಲ್ಲಿ ಇದುವರೆಗೂ 5 ಕೋಟಿಯನ್ನು ಪಾವತಿಸಲಾಗಿದ್ದು, ಬಾಕಿ ಇರುವ ಮೊತ್ತವನ್ನು ಪಾವತಿ ಮಾಡಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.