ಮಡಿಕೇರಿ, ಜೂ. 6: ತಾ. 8 ರ ಸೋಮವಾರದಿಂದ ರಾಜ್ಯದ ಧಾರ್ಮಿಕ ದತ್ತಿ ಇಲಾಖಾ ಸೂಚನೆಯನ್ವಯ ಮುಜರಾಯಿ ಆಡಳಿತದ ದೇವಾಲಯಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಇಲಾಖೆಯಿಂದ ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಭಾಗಮಂಡಲ-ತಲಕಾವೇರಿ ಹಾಗೂ ಮಡಿಕೇರಿ ಓಂಕಾರೇಶ್ವರ ದೇವಾಲಯಗಳ ಆಡಳಿತ ಸಮಿತಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಗದೀಶ್ ಕುಮಾರ್ ‘ಶಕ್ತಿ’ಗೆ ವಿವರ ಮಾಹಿತಿಯಿತ್ತಿದ್ದಾರೆ. ಆ ಪ್ರಕಾರ ದರ್ಶನಾವಕಾಶದ ಮಾರ್ಗಸೂಚಿ ಈ ಕೆಳಗಿನಂತಿದೆ.ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ಶ್ರೀ ಆಂಜನೇಯ ದೇವಾಲಯದ ಆವರಣದಿಂದ ಪ್ರವೇಶ ಕಲ್ಪಿಸಲಾಗುವದು. ಏಕೆಂದರೆ ಒಂದೇ ಕಡೆ ಸ್ಯಾನಿಟೈಸರ್ ಬಳಸಿ ಥರ್ಮಲ್ ಸ್ಕ್ಯಾನಿಂಗ್ ಮಾಡಲಾ ಗುತ್ತದೆ. ದೇವರ ದರ್ಶನದ ಬಳಿಕ ಭಕ್ತಾದಿಗಳು ಹೊರಗಡೆ ಬರಲು ದೇವಾಲಯದ ಮತ್ತೊಂದು ದ್ವಾರದಿಂದ ಅವಕಾಶವಿದೆ. ದೇವಾಲಯದ ಪ್ರವೇಶದಲ್ಲಿಯೇ ಪ್ರತಿಯೋರ್ವರನ್ನೂ ಥರ್ಮಲ್ ಸ್ಕ್ಯಾನಿಂಗ್ ಮಾಡಿ, ಸ್ಯಾನಿಟೈಸರ್ನಿಂದ ಕೈಗಳನ್ನು ಶುಚಿಗೊಳಿಸ ಲಾಗುತ್ತದೆ. ದೇವಾಲಯ ಪ್ರವೇಶಿಸುವವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡಿರಬೇಕು. ಪಾದರಕ್ಷೆಗಳನ್ನು ದೇವಾಲಯದ ಆವರಣದೊಳಗೆ ಹಾಕುವಂತಿಲ್ಲ. ಪಾದರಕ್ಷೆಗಳನ್ನು ವಾಹನದಲ್ಲಿಯೇ ಇರಿಸಬೇಕು ಅಥವಾ ದೇವಾಲಯದ ಆವರಣದಿಂದ ದೂರವಿಡಬೇಕು. ಸ್ಯಾನಿಟೈಸರ್ ಬಳಕೆ ಮಾಡುವುದರಿಂದ ಬೆಂಕಿ ತಗಲಬಾರದೆನ್ನುವದಕ್ಕಾಗಿ ಆರತಿ ನೀಡಲಾಗುವದಿಲ್ಲ. ಆದರೆ, ಅರ್ಚಕರು ಮಾತ್ರ ನಿತ್ಯ ಪೂಜೆಯನ್ನು ಎಂದಿನಂತೆ ಮಾಡುತ್ತಾರೆ. ಗಂಧ ತೀರ್ಥ, ಪ್ರಸಾದಗಳ್ಯಾವದೂ ಇರುವದಿಲ್ಲ. ತೀರ್ಥ ಪ್ರೋಕ್ಷಣೆ ಕೂಡ ಇರುವುದಿಲ್ಲ.
(ಮೊದಲ ಪುಟದಿಂದ) ಸಾಮಾಜಿಕ ಅಂತರ ಕಾಪಾಡಿ ಕೊಳ್ಳಬೇಕು. ದೇವಾಲಯದಲ್ಲಿ ಈಗಾಗಲೇ ಹಾಕಲಾಗಿರುವ ಮಾರ್ಕ್ನಲ್ಲಿಯೇ ನಿಲ್ಲಬೇಕು. ಹೂ, ಅಗರಬತ್ತಿ, ತೆಂಗಿನಕಾಯಿ ಸೇರಿದಂತೆ ಪೂಜಾ ಸಾಮಗ್ರಿಗಳನ್ನು ದೇವಾಲ ಯಕ್ಕೆ ತರುವಂತಿಲ್ಲ. ದೇವಾಲಯದ ಗೋಡೆ ಮೂರ್ತಿಗಳನ್ನು ಮುಟ್ಟುವಂತಿಲ್ಲ.
ಇದೇ ರೀತಿಯ ವ್ಯವಸ್ಥೆ ಭಾಗಮಂಡಲ ಮತ್ತು ತಲಕಾವೇರಿ ದೇವಾಲಯಗಳಲ್ಲಿಯೂ ಇರುತ್ತದೆ. ಅಲ್ಲದೆ, ಭಾಗಮಂಡಲದಲ್ಲಿ ಪಿಂಡ ಪ್ರದಾನವಾಗಲಿ, ಮುಡಿ ಅರ್ಪಣೆ ಯಾಗಲಿ ಇರುವದಿಲ್ಲ. ಅಲ್ಲಿಯೂ ಕೂಡ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದೆ. ನಿತ್ಯ ಪೂಜೆ ಮಾತ್ರ ಎಂದಿನಂತೆ ನಡೆಯುತ್ತದೆ” ಎಂದು ಜಗದೀಶ್ ಕುಮಾರ್ ವಿವರಿಸಿದ್ದಾರೆ. 10 ವರ್ಷದ ಒಳಗಿನವರು ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟವರು ದೇವಾಲಯಕ್ಕೆ ಬಾರದಿದ್ದರೆ ಒಳಿತು ಎಂದು ಸಲಹೆ ನೀಡಲಾಗಿದೆ.