ಭಾಗಮಂಡಲ, ಜೂ. 6 : ಆವಂದೂರು ಗ್ರಾಮದಲ್ಲಿ ಅಕ್ರಮವಾಗಿ ಮರ ಕಡಿದು ರೆಸಾರ್ಟ್‍ಗೆ ಪೀಠೋಪಕರಣ ಸಾಮಗ್ರಿಗಳನ್ನು ತಯಾರಿಸಲು ಸಿದ್ಧಪಡಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಭಾಗಮಂಡಲ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅವಂದೂರು ಗ್ರಾಮದ ಕಾವೇರಮ್ಮನ ಅನಂತಕುಮಾರ್ (ಸತೀಶ್) ಎಂಬಾತ ತನ್ನ ರೆಸಾರ್ಟ್‍ನ ಪೀಠೋಪಕರಣ ಸಾಮಗ್ರಿಗಳಿಗಾಗಿ ಹಲಸು ಮರ ಒಂದನ್ನು ಕುಯ್ಯಿಸಿ ದಾಸ್ತಾನು ಇಟ್ಟಿರುವ ಖಚಿತ ಮಾಹಿತಿ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಸ್. ಪ್ರಭಾಕರನ್ ಅವರ ಮಾರ್ಗದರ್ಶನದಲ್ಲಿ ಭಾಗಮಂಡಲ ವಲಯದ ಅರಣ್ಯ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿ ದಾಸ್ತಾನು ಇಟ್ಟಿರುವ ಸ್ಥಳಕ್ಕೆ ಧಾವಿಸಿ 22 ಹಲಸು ಸೈಜ್‍ಗಳು ಹಾಗೂ ಒಂದು ನಾಟಾ ಅನ್ನು ವಶಪಡಿಸಿಕೊಂಡಿದ್ದಾರೆ.

ತಂಡದಲ್ಲಿ ವಲಯ ಅರಣ್ಯಾಧಿಕಾರಿ ಎಚ್.ಜಿ. ದೇವರಾಜ್, ಉಪ ವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ ನಾಯಕ್ ಹಾಗೂ ಶ್ರೀಧರ್ ಜೆ.ಕೆ., ಅರಣ್ಯ ರಕ್ಷಕರುಗಳಾದ ನಾಗರಾಜ್, ವ್ಯಾಗೀಶಯ್ಯ ಹಾಗೂ ಅರಣ್ಯ ವೀಕ್ಷಕ ವಾಸುದೇವ್ ಹಾಗೂ ಇತರ ಆರ್‍ಆರ್‍ಟಿ ಸಿಬ್ಬಂದಿಗಳು ಇದ್ದರು.