ಮಡಿಕೇರಿ, ಜೂ. 5: ಜೂನ್ 5ರ ಶುಕ್ರವಾರ ಎಲ್ಲೆಡೆ ಪ್ರಕೃತಿಯ ಆರಾಧನೆ. ಈ ದಿನ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪ್ರಾಕೃತಿಕತೆಯ ತಾಣವಾದ ಕೊಡಗು ಜಿಲ್ಲೆಯಲ್ಲಿಯೂ ಗಿಡಗಳನ್ನು ನೆಟ್ಟು ನೀರುಣಿಸುವದರೊಂದಿಗೆ ಸ್ವಚ್ಛ ಹಾಗೂ ಸಮೃದ್ಧ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು.ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ನ್ಯಾಯಾ ಧೀಶರುಗಳು ಸೇರಿದಂತೆ ವಿವಿಧ ಸಂಘಸಂಸ್ಥೆಗಳು, ಪರಿಸರ ಪ್ರೇಮಿಗಳು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿವಿಧ ಬಗೆಯ ಗಿಡಗಳನ್ನು ನೆಡುವದರೊಂದಿಗೆ, ಈ ಕಾರ್ಯಕ್ರಮವನ್ನು ಅರ್ಥಪೂರ್ಣ ಗೊಳಿಸಿದರು. ಜನತೆ ವೈಯಕ್ತಿಕ ವಾಗಿಯೂ ತೊಡಗಿಸಿಕೊಂಡರೆ ಜಿಲ್ಲಾಡಳಿತ, ಅರಣ್ಯ ಇಲಾಖೆಯ ಕಾರ್ಯಕ್ರಮಕ್ಕೆ ಸಹಕಾರ ನೀಡಿತ್ತು.

ಜಿಲ್ಲಾಕೇಂದ್ರ ಮಡಿಕೇರಿಯಲ್ಲಿ ಆಚರಣೆ‘ದೇವರ ಮನೆಯಲ್ಲಿ ನಾವೆಲ್ಲ ಬಾಡಿಗೆದಾರರು’ ದೇವರ ಮನೆಯೆಂಬ ಭೂಮಿ ಯಲ್ಲಿ ನಾವೆಲ್ಲ ಬಾಡಿಗೆದಾರರು. ಬಾಡಿಗೆ ಮನೆಯಲ್ಲಿರುವವನು ಶಿಸ್ತಿನಿಂದ ಮನೆಯ ಮಾಲೀಕ ವಿಧಿಸಿರುವ ಷರತ್ತುಗಳನ್ನು ಪಾಲಿಸಿದರೆ, (ಮೊದಲ ಪುಟದಿಂದ) ಮಾಲೀಕನಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ ಬಾಡಿಗೆದಾರನು ಮಾಲೀಕನಿಗೆ ಕಿರುಕುಳ ಕೊಟ್ಟರೆ, ಬಾಡಿಗೆದಾರನನ್ನು ಮನೆಯಿಂದ ಹೊರ ಹಾಕುವ ಅಧಿಕಾರ ಮಾಲೀಕನಿಗೆ ಇರುತ್ತದೆ. ಅದೇ ರೀತಿ ಈ ಭೂಮಿಯನ್ನು ನಾವು ಸಂರಕ್ಷಿಸದಿದ್ದರೆ ಬಾಡಿಗೆದಾರರಾದ ನಮಗೆ ಹಾನಿ ಉಂಟಾಗುವುದು ಖಚಿತ. ಈ ನಿಟ್ಟಿನಲ್ಲಿ ಪ್ರಕೃತಿ ಮಾತೆಯ ರಕ್ಷಣೆ ಎಲ್ಲರು ಮಾಡಬೇಕಾಗಿದೆ ಎಂದು ಮಲ್ಲಿಕಾರ್ಜುನ ಗೌಡರ್ ಅಭಿಪ್ರಾಯಪಟ್ಟರು. ಸಾಂಕೇತಿಕವಾಗಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂತ ಜೋಸೆಫರ ಶಾಲೆಯ ಬಳಿಯ ಸಾರ್ವಜನಿಕ ಮೈದಾನದಲ್ಲಿ ಜಿಲ್ಲಾಡಳಿತ, ಅರಣ್ಯ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್, ನ್ಯಾಯಾಲಯ, ಮಹಾಗಣಪತಿ ಸೇವಾ ಸಮಿತಿ ಹಾಗೂ ಸಂತ ಜೋಸೆಫರ ಶಾಲೆಯ ವತಿಯಿಂದ ವಿವಿಧ ತಳಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು. ಮೈದಾನದ 2 ಬದಿಗಳಲ್ಲಿ ಬಟರ್‍ಫ್ರೂಟ್, ಸಪೋಟ, ಹಲಸು, ನೇರಳೆ ಇತ್ಯಾದಿ ಸಸಿಗಳನ್ನು ನೆಡಲಾಯಿತು. ನೂರುನ್ನೀಸಾ ಮಾತನಾಡಿ ಕೊರೊನಾದಿಂದಾಗಿ ಈ ವರ್ಷದ ಪರಿಸರ ದಿನವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಪರಿಸರದ ರಕ್ಷಣೆಯಿಂದ ಮಾನವನಿಗೆ ಕಾಡುವ ಕಾಯಿಲೆಗಳೂ ನಿವಾರಣೆಯಾಗಬಲ್ಲವು ಎಂದರು.

ವೀರಾಜಪೇಟೆ

ಗಿಡಗಳನ್ನು ನೆಡುವ ಮೂಲಕ ಪ್ರತಿಯೊಬ್ಬರು ಕೊಡಗಿನ ಪ್ರಕೃತಿಯ ಸೌಂದರ್ಯವನ್ನು ಉಳಿಸಿ ಬೆಳೆಸಿ ಸಂರಕ್ಷಿಸುವಂತಾಗಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್.ವಿ.ಕೋನಪ್ಪ ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ ಹಾಗೂ ವೀರಾಜಪೇಟೆ ವಲಯ ಅರಣ್ಯ ವಿಭಾಗದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಮೀಪದ ಆರ್ಜಿ ಗ್ರಾಮದಲ್ಲಿರುವ ಭಗವತಿ ದೇವರಕಾಡುವಿನಲ್ಲಿ ಗಿಡ ನೆಡುವ ಮೂಲಕ ನ್ಯಾಯಾದೀಶ ಕೋನಪ್ಪ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ ಕಾಡುಗಳನ್ನು ಉಳಿಸಿ ಬೆಳೆಸಿದರೆ ಮಾತ್ರ ನೆಮ್ಮದಿಯ ಬದುಕು ಸಾಗಿಸಬಹುದು. ಪ್ರಾಣಿ ಪಕ್ಷಿ ಮತ್ತು ಜೀವರಾಶಿಗಳಿಗೆ ಆಶ್ರಯ ನೀಡಿದಂತಾಗುತ್ತದೆ. ಮುಂದಿನ ಪೀಳಿಗೆಗೆ ಅರಣ್ಯವನ್ನು ಉಳಿಸಿ ಬೆಳೆಸಲು ಎಲ್ಲರು ಮುಂದಾಗಬೇಕು ಎಂದರು. ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ರೋಶನಿ ಅತಿಥಿಯಾಗಿ ಭಾಗವಹಿಸಿ ಗಿಡ ನೆಡುವ ಮೂಲಕ ಅದನ್ನು ಸಂರಕ್ಷಿಸಬೇಕು. ಇತ್ತೀಚಿನ ದಿನಗಳಲ್ಲಿ ಅರಣ್ಯಗಳು ನಾಶವಾಗುತ್ತಿರುವುದರಿಂದ ಪ್ರತಿಯೊಬ್ಬರು ಗಿಡಗಳನ್ನು ನೆಡುವುದರೊಂದಿಗೆ ಕಾಡನ್ನು ಉಳಿಸಿ ಬೆಳೆÀಸಬೇಕು ಎಂದರು.

ಈ ಸಂದರ್ಭ ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಎಂ.ಕೆ.ದಿನೇಶ್, ವಲಯ ಅರಣ್ಯಾಧಿಕಾರಿ ದಿಲೀಪ್ ಕುಮಾರ್, ಆರ್ಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ.ರಮೇಶ್ ಗಿರಿ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸ್ಥಳೀಯರು ಭಾಗವಹಿಸಿದ್ದರು.