ನಾಳೆಯಿಂದಲೇ ಮಳೆ ಜೋರು

ಬೆಂಗಳೂರು, ಜೂ.5 : ಅವಧಿಗೂ ಮುನ್ನವೇ ಮುಂಗಾರು ರಾಜ್ಯ ಪ್ರವೇಶಿಸಿದ್ದು, ಪರಿಣಾಮ ಭಾನುವಾರದಿಂದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಡಿಕೆಯಂತೆ ಜೂನ್ 1ರಂದು ನೈಋತ್ಯ ಮುಂಗಾರು ಕೇರಳವನ್ನು ಪ್ರವೇಶ ಮಾಡಿತ್ತು. ಕೇರಳ ಪ್ರವೇಶಿಸಿದ ಒಂದೆರಡು ದಿನಗಳಲ್ಲಿ ಮುಂಗಾರು ರಾಜ್ಯದ ಕರಾವಳಿಗೂ ಆಗಮಿಸುವುದು ವಾಡಿಕೆ. ಕೇರಳ ಪ್ರವೇಶಿಸಿದ ಮುಂಗಾರು ದುರ್ಬಲವಾಗಿದ್ದರಿಂದ ರಾಜ್ಯಕ್ಕೆ ಆಗಮಿಸುವುದರಲ್ಲಿ ವಿಳಂಬವಾಗಲಿದೆ ಎಂದು ಹೇಳಲಾಗಿತ್ತು, ಆದರೆ ಗುರುವಾರವೇ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಮುಂಗಾರು ಆಗಮನವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ನಗರಾಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನೆ

ಬೆಂಗಳೂರು, ಜೂ. 5: ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿಯಡಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು ನಿವೃತ್ತಿ, ಮರಣ ಅಥವಾ ಇತರ ಕಾರಣಗಳಿಂದ ತೆರವಾಗಿರುವಂತಹ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಅಧಿಕಾರಿಗಳಿಗೆ ಸೂಚಿಸಿದರು. ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನಗರಾಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಕೇಂದ್ರ ನೆರವಿನ ಅಮೃತ್ ಯೋಜನೆಯಡಿ ಕೇಂದ್ರದ ಪಾಲಿನ ಬಾಕಿ ಅನುದಾನ ಪಡೆಯಲು ರಾಜ್ಯದ ಪಾಲಿನ ಭಾಗವಾಗಿ 209 ಕೋಟಿ ರೂ. ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ತಿಳಿಸಿದರು.

ಒಂದೇ ದಿನ 515 ಪ್ರಕರಣ ಪತ್ತೆ

ಬೆಂಗಳೂರು, ಜೂ. 5 : ರಾಜ್ಯದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 515 ಪ್ರಕರಣಗಳು ವರದಿಯಾಗಿವೆ. ಇದು ಇಲ್ಲಿಯವರೆಗೂ ದಾಖಲಾಗಿರುವ ಅತಿ ಹೆಚ್ಚಿನ ಪ್ರಕರಣಗಳಾಗಿವೆ. ಈ ಪೈಕಿ 482 ಮಂದಿ ಅಂತರ್ ರಾಜ್ಯ ಪ್ರಯಾಣಿಕರಾಗಿದ್ದಾರೆ. ಈ ಪೈಕಿ 482 ಮಂದಿ ಅಂತಾರಾಜ್ಯ ಪ್ರಯಾಣದ ಇತಿಹಾಸ ಹೊಂದಿದ್ದು, 472 ಜನರು ಮಹಾರಾಷ್ಟ್ರದಿಂದ ಆಗಮಿಸಿದ್ದಾರೆ. ಓರ್ವ ವ್ಯಕ್ತಿ ಅಂತಾರಾಷ್ಟ್ರೀಯ ಪ್ರಯಾಣದಿಂದ ಹಿಂದಿರುಗಿದ್ದಾರೆ. ಇದರಿಂದ ರಾಜ್ಯದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 4835ಕ್ಕೇರಿಕೆಯಾಗಿದೆ. ಈ ನಡುವೆ, ಶುಕ್ರವಾರ ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

ಎಸ್‍ಬಿಐ ಗೆ 4 ಪಟ್ಟು ಆದಾಯ ಹೆಚ್ಚು

ಮುಂಬೈ, ಜೂ.5 : ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್ 2019-20ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಬರೊಬ್ಬರಿ ನಾಲ್ಕು ಪಟ್ಟು ಆದಾಯ ಹೆಚ್ಚಿಸಿಕೊಂಡಿದೆ. ಸಂಸ್ಥೆಯ ನಿವ್ವಳ ಲಾಭ ಈ ಅವಧಿಯಲ್ಲಿ 3,581 ಕೋಟಿ ರೂಪಾಯಿಯಷ್ಟಾಗಿದೆ. 2018-19 ರ ಅವಧಿಯಲ್ಲಿ ಬ್ಯಾಂಕ್ ನ ಲಾಭ 838.4 ಕೋಟಿಯಷ್ಟಿತ್ತು. ಕಳೆದ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಬ್ಯಾಂಕ್ ನ ಆದಾಯ 76,027.51 ಕೋಟಿ ರೂಪಾಯಿಗಳಷ್ಟಾಗಿದೆ. 2018-19ರಲ್ಲಿ 75,670.5 ಕೋಟಿ ರೂಪಾಯಿಯಷ್ಟಿತ್ತು ಎಂದು ಎಸ್ ಬಿಐ ತಿಳಿಸಿದೆ. ಇನ್ನು ಎನ್ ಪಿಎ ವಿಷಯದಲ್ಲೂ ಸ್ಟೇಟ್ ಬ್ಯಾಂಕ್ ಸುಧಾರಣೆ ಕಂಡಿದ್ದು, 2019 ರಲ್ಲಿ ಶೇ.7.53 ರಷ್ಟಿದ್ದ ಎನ್ ಪಿಎ 2020 ರ ಮಾರ್ಚ್ 31 ರ ವೇಳೆಗೆ ಶೇ.6.15 ಕ್ಕೆ ಇಳಿಕೆಯಾಗಿದ್ದು, ಶೇ.3.01 ರಿಂದ ಶೇ.2.23 ರಷ್ಟಾಗಿದೆ.

ಯುಪಿಎಸ್‍ಸಿ ವೇಳಾಪಟ್ಟಿ ಬಿಡುಗಡೆ

ನವದೆಹಲಿ, ಜೂ.5 : ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ 2020ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‍ಸಿ) ಶುಕ್ರವಾರ ಬಿಡುಗಡೆ ಮಾಡಿದೆ. ಅಕ್ಟೋಬರ್ 4 ರಂದು ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ ಹಾಗೂ 2021ರ ಜನವರಿ 8ರಂದು ಮುಖ್ಯ ಪರೀಕ್ಷೆ ನಡೆಯಲಿದೆ ಎಂದು ಯುಪಿಎಸ್ ಸಿ ತಿಳಿಸಿದೆ. ಮೇ 31ರಂದು ನಡೆಯಬೇಕಿದ್ದ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯನ್ನು ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. 2019ನೇ ಸಾಲಿನ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯ ಭಾಗವಾಗಿರುವ ವ್ಯಕ್ತಿತ್ವ ಪರೀಕ್ಷೆ 2020ರ ಜುಲೈ 20ರಿಂದ ಮುಂದುವರಿಯಲಿದೆ. 2020ನೇ ಸಾಲಿನ ಎನ್‍ಡಿಎ ಮತ್ತು ಎನ್‍ಎ ಪರೀಕ್ಷೆಗಳು ಸೆಪ್ಟೆಂಬರ್6ರಂದು ನಿಗದಿಯಾಗಿದೆ. ಐಇಎಸ್/ಐಎಸ್‍ಎಸ್ 2020 ಪರೀಕ್ಷೆ ಅಕ್ಟೋಬರ್ 16 ರಂದು ಹಾಗೂ ಎಂಜಿನಿಯರಿಂಗ್‍ಸರ್ವೀಸಸ್‍ಮುಖ್ಯ ಪರೀಕ್ಷೆ ಆಗಸ್ಟ್ 9 ರಂದು ನಡೆಯಲಿವೆ.

ಡಾ.ರಾಜಲಕ್ಷ್ಮಿಗೆ ಖಾದ್ರಿ ಶಾಮಣ್ಣ ಪ್ರಶಸ್ತಿ

ಬೆಂಗಳೂರು, ಜೂ.5 : ಪ್ರತಿಷ್ಠಿತ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟಗೊಂಡಿದ್ದು, 2020ನೇ ಸಾಲಿನ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ಡಾ. ಯು.ಬಿ.ರಾಜಲಕ್ಷ್ಮೀ ಆಯ್ಕೆಯಾಗಿದ್ದಾರೆ. ಡಾ. ಯು. ಬಿ. ರಾಜಲಕ್ಷ್ಮೀ ಕನ್ನಡದ ವಾರಪತ್ರಿಕೆ ‘ತರಂಗ’ದ ಸಂಪಾದಕಿಯಾಗಿದ್ದು, ಅವರು ಉಡುಪಿ ಜಿಲ್ಲೆಯ ಕಾರ್ಕಳ ಮೂಲದವರು. ಕಳೆದ 37 ವರ್ಷಗಳಿಂದ ಪತ್ರಿಕಾರಂಗದಲ್ಲಿ ಸಕ್ರಿಯರಾಗಿರುವ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಪತ್ರಕರ್ತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ‘ಹೊಸ ದಿಗಂತ’, ‘ಮುಂಗಾರು’, ‘ಟೈಮ್ಸ್ ಆಫ್ ಡೆಕ್ಕನ್’ ದಿನಪತ್ರಿಕೆಗಳಲ್ಲಿ 1983ರಲ್ಲಿ ಕಾರ್ಕಳದ ವರದಿಗಾರ್ತಿಯಾಗಿದ್ದರು. 1987 ರಲ್ಲಿ ‘ಮಣಿಪಾಲ ಮೀಡಿಯಾ ನೆಟ್‍ವರ್ಕ್’ನ ‘ತರಂಗ’ ವಾರಪತ್ರಿಕೆಯಲ್ಲಿ ಸೇವೆ ಆರಂಭಿಸಿ, ತಮ್ಮ ಕಾರ್ಯಕ್ಷಮತೆಯಿಂದ ಕಾರ್ಯನಿರ್ವಾಹಕ ಸಂಪಾದಕಿಯಾಗಿ, ಪ್ರಸ್ತುತ ಸಂಪಾದಕಿಯಾಗಿದ್ದಾರೆ. 2012-15ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯೆಯಾಗಿದ್ದ ಅವರ ಪತ್ರಿಕಾ ರಂಗದ ಸಾಧನೆಗಾಗಿ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಸೇರಿದಂತೆ ಡಾ.ಪಾಟೀಲ ಪುಟ್ಟಪ್ಪ ಪುರಸ್ಕಾರ, ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ಶ್ರೀ ಎಸ್.ಎಫ್.ಉಪ್ಪಿನ ಐಎಸ್‍ಎಫ್‍ಪ್ರಶಸ್ತಿ, ಮಂತ್ರಾಲಯ ಕ್ಷೇತ್ರದ ‘ಶ್ರೀ ಸುಜಯಶ್ರೀ’ ಮುಂತಾದ ಪ್ರಶಸ್ತಿಗಳು ಒಲಿದು ಬಂದಿವೆ.

ದಾವೂದ್‍ಗೆ ಕೊರೊನಾ ಸೋಂಕು

ಕರಾಚಿ, ಜೂ.5 : ಭಾರತಕ್ಕೆ ಮೋಸ್ಟ್ ವಾಂಟೆಡ್ ಭೂಗತ ಪಾತಕಿಯಾಗಿರುವ ದಾವೂದ್ ಇಬ್ರಾಹಿಂ ಹಾಗೂ ಆತನ ಪತ್ನಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎನ್ನುತ್ತಿವೆ ಸುದ್ದಿ ವಾಹಿನಿಗಳ ವರದಿಗಳು. ಆದರೆ ಈ ಬಗ್ಗೆ ಡಿ-ಕಂಪನಿ ನಿರ್ವಹಣೆ ಮಾಡುತ್ತಿರುವ ದಾವೂದ್ ಇಬ್ರಾಹಿಂನ ಸಹೋದರ ಅನೀಸ್ ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದು, ದಾವೂದ್ ಇಬ್ರಾಹಿಂಗೆ ಕೊರೊನಾ ಸೋಂಕು ತಗುಲಿಲ್ಲ ಎಂದು ಹೇಳುತ್ತಿದ್ದಾನೆ. ಸುದ್ದಿ ಸಂಸ್ಥೆ ಐಎಎನ್‍ಎಸ್ ಜೊತೆಗೆ ಮಾತನಾಡಿರುವ ಅನೀಸ್ ಇಬ್ರಾಹಿಂ, ತನ್ನ ಸಹೋದರನಿಗೆ ಕೊರೋನಾ ಸೋಂಕು ತಗುಲಿದೆ ಎಂಬ ವರದಿಗಳನ್ನು ನಿರಾಕರಿಸಿದ್ದಾನೆ. ಅಷ್ಟೇ ಅಲ್ಲದೇ ಪಾಕಿಸ್ತಾನ, ಯುಎಇಗಳಲ್ಲಿ ಡಿ-ಕಂಪನಿ ಉದ್ಯಮ ನಡೆಸುತ್ತಿರುವುದಾಗಿ ಹೇಳಿಕೆ ನೀಡಿದ್ದಾನೆ.