ಮಡಿಕೇರಿ, ಜೂ. 5: ಕೆಲವು ಸಮಯದ ಹಿಂದೆ ಅನಾರೋಗ್ಯ ದಿಂದ ತನ್ನ ಒಡಹುಟ್ಟಿದ ತಮ್ಮನ ಮನೆಗೆ ಬಂದಿದ್ದ ಅಣ್ಣನೊಬ್ಬ ಸಮಯ ಸಾಧಿಸಿ ಮನೆಯೊಳಗೆ ಯಾರೂ ಇಲ್ಲದ ಸಂದರ್ಭ ನಗದು ಸೇರಿದಂತೆ ವಿಧವೆ ತಾಯಿಯ ಮಾಂಗಲ್ಯವನ್ನೇ ಕದ್ದೊಯ್ದು ಇದೀಗ ಪೊಲೀಸ್ ಅತಿಥಿಯಾಗಿರುವ ಪ್ರಸಂಗವೊಂದು ಬೆಳಕಿಗೆ ಬಂದಿದೆ. ಈ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಮಾಹಿತಿ ನೀಡಿದರು.ಆ ಪ್ರಕಾರ ಇಲ್ಲಿನ ಸಿದ್ದಾಪುರ ರಸ್ತೆ ಬಳಿಯ ಲೋಕೋಪಯೋಗಿ ಇಲಾಖೆಯ ವಸತಿಗೃಹದಲ್ಲಿ ಈ ಕೃತ್ಯ ನಡೆದಿದೆ. ಇಲಾಖೆಯ ಉದ್ಯೋಗಿ ಎನ್. ಅರುಣ್ ಕುಮಾರ್ ಅವರ ಮನೆಯಲ್ಲಿ ನಿನ್ನೆ ಮುಸ್ಸಂಜೆಯ ನಡುವೆ ಕಳ್ಳತನ ನಡೆದಿದ್ದು; ಚಾಕಚ ಕ್ಯತೆಯಿಂದ ಸಕಾಲದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾಗಿ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದರು.ಪಿರ್ಯಾದಿಯ ಸೋದರ ಎನ್. ಸಂತೋಷ್ ಕುಮಾರ್ (36) ಆರೋಪಿಯಾಗಿದ್ದು, ಮೂಲತಃ ಶಿವಮೊಗ್ಗ

(ಮೊದಲ ಪುಟದಿಂದ) ಜಿಲ್ಲೆಯ ನಿವಾಸಿಯಾಗಿರುವ ಈತ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಾರಂಗಿ ಗ್ರಾಮದ ನಿವಾಸಿಯಾಗಿದ್ದಾನೆ. ಕೆಲವು ಸಮಯದ ಹಿಂದೆ ಅನಾರೋಗ್ಯದಿಂದ ತಮ್ಮ ಅರುಣ್ ಕುಮಾರ್ ಮನೆಗೆ ಬಂದಿದ್ದಾಗ; ತಮ್ಮನ ವ್ಯವಹಾರವನ್ನು ಗಮನಿಸಿಕೊಂಡು ಊರಿಗೆ ಹೋಗಿದ್ದಾನೆ.

ನಿನ್ನೆ ಸಂಜೆ ಆರೋಪಿ ಇಲ್ಲಿಗೆ ಬಂದಿದ್ದು, ಅರುಣ್ ಕುಮಾರ್ ಈ ವೇಳೆ ಕರ್ತವ್ಯಕ್ಕೆ ತೆರಳಿದ್ದರೆ, ಅವರ ತಾಯಿ ಸಂಜೆ ಪಕ್ಕದ ಮನೆಗೆ ಔಪಚಾರಿಕ ಮಾತುಕತೆಗೆ ಹೋಗಿದ್ದಾರೆ. ಇದೇ ಸಮಯ ಸಾಧಿಸಿರುವ ಸಂತೋಷ್ ಕುಮಾರ್ ಮನೆಯೊಳಗೆ ನುಗ್ಗಿ, ಮಲಗುವ ಕೋಣೆಯ ಬೀರುವಿನಿಂದ ನಗದು ರೂ. 4.50 ಲಕ್ಷ ನೋಟಿನ ಕಂತೆಗಳೊಂದಿಗೆ ತಾಯಿಯ ಮಾಂಗಲ್ಯ ಸರ ಹಾಗೂ ಉಂಗುರ ರೂ. 2.70 ಲಕ್ಷ ಮೌಲ್ಯದ್ದನ್ನು ದೋಚಿಕೊಂಡು ಪರಾರಿಯಾಗಿ ದ್ದಾನೆ.

ಕರ್ತವ್ಯ ಮುಗಿಸಿ ಮನೆಗೆ ಬಂದಿರುವÀ ಅರುಣ್ ಕುಮಾರ್, ತಾಯಿ ಮನೆಯೊಳಗೆ ಇಲ್ಲದೆ ಇರುವುದು ಕಂಡು ಬಾಗಿಲು ತೆರೆದುಕೊಂಡಿದ್ದಲ್ಲದೆ; ಮಲಗುವ ಕೋಣೆಯಲ್ಲಿ ಕಳ್ಳತನದ ಸುಳಿವಿನ ಮೇರೆಗೆ ನಗರಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಪೊಲೀಸ್ ತನಿಖೆ : ಕೂಡಲೇ ತನಿಖೆ ಆರಂಭಿಸಿರುವ ಪೊಲೀಸರು, ಸಿ.ಸಿ. ಕ್ಯಾಮರಾ ಮಾಹಿತಿಯೊಂದಿಗೆ, ಅಕ್ಕಪಕ್ಕ ನಿವಾಸಿಗಳಿಂದ ಆರೋಪಿಯ ಬಗ್ಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಕಾರಿನ ಸುಳಿವು: ಈ ಸಂದರ್ಭ ನಗರದಿಂದ ಕಾರೊಂದನ್ನು ಬಾಡಿಗೆಗೆ ಪಡೆದಿರುವ ವ್ಯಕ್ತಿಯೋರ್ವ ಶಿವಮೊಗ್ಗಕ್ಕೆ ತೆರಳಿದ ಮಾಹಿತಿ ಪೊಲೀಸರಿಗೆ ಲಭಿಸಿದೆ. ಕೂಡಲೇ ಕಾರು ಚಾಲಕನ ಮೊಬೈಲ್ ಸಂಖ್ಯೆ ಪಡೆದು, ಆತನಿಗೆ ರಹಸ್ಯ ಮಾಹಿತಿ ಮೂಲಕ ಕಳ್ಳನ ಬಂಧನಕ್ಕೆ ಬಲೆ ಬೀಸಿದರಲ್ಲದೆ; ಹಾಸನ ಪೊಲೀಸರ ನೆರವಿನಿಂದ ಸಂತೋಷ್ ಕುಮಾರ್ ತಪ್ಪಿಸಿಕೊಳ್ಳದಂತೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಪರಿಣಾಮ ಆರೋಪಿಯು ದೋಚಿದ್ದ ನಗದು ಮತ್ತು ಆಭರಣವನ್ನು ಸಂಪೂರ್ಣ ವಶಕ್ಕೆ ಪಡೆಯಲು ಸಾಧ್ಯವಾಗಿದ್ದು, ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್, ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಠಾಣಾಧಿಕಾರಿ ಅಂತಿಮ ಹಾಗೂ ಸಿಬ್ಬಂದಿಗಳಾದ ಕಿರಣ್, ಚರ್ಮಣ್ಣ, ಶ್ರೀನಿವಾಸ್, ಪ್ರವೀಣ್, ನಾಗರಾಜ್ ಕಡಗನ್ನವರ್, ಅರುಣ್ ಕುಮಾರ್, ಪ್ರಸನ್ನ ಕುಮಾರ್, ಮಹದೇವ ಸ್ವಾಮಿ, ಸುನಿಲ್, ಶಶಿಕುಮಾರ್, ಭವಾನಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇವರ ಕ್ಷಿಪ್ರ ಕಾರ್ಯಾಚರಣೆ ಪ್ರಶಂಸನೀಯ ಎಂದು ಎಸ್ಪಿ ಗೋಷ್ಠಿಯಲ್ಲಿ ಶ್ಲಾಘಿಸಿದರು.