ಮಡಿಕೇರಿ, ಜೂ. 5: 2020-21ನೇ ಸಾಲಿಗೆ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಸನ್ನದುಗಳ ನವೀಕರಣಕ್ಕೆ ಅಬಕಾರಿ ಇಲಾಖೆಯ ಮೂಲಕ ಹೊಸ ಆದೇಶ ಹೊರಡಿಸಲಾಗಿದೆ.

ಸನ್ನದು ಶುಲ್ಕ ಮತ್ತು ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಸಂಬಂಧ ಕೆಲವು ವಿನಾಯಿತಿ ನೀಡಲಾಗಿದೆ. ಈ ಸನ್ನದುಗಳ ಚಾಲ್ತಿ ಅವಧಿ 30.6.2020ಕ್ಕೆ ಮುಕ್ತಾಯಗೊಂಡಿದ್ದು, ಜುಲೈ 1ಕ್ಕೆ ನವೀಕರಣವಾಗಬೇಕಿದೆ. ಸನ್ನದು ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಅರ್ಜಿಯೊಂದಿಗೆ ನಿಯಮಾನುಸಾರ ಅನ್ವಯಿಸುವ ಸನ್ನದು ಶುಲ್ಕ (ಮೊದಲ ಪುಟದಿಂದ) ಮತ್ತು ಹೆಚ್ಚುವರಿ ಸನ್ನದು ಶುಲ್ಕಗಳಲ್ಲಿ ಶೇ. 50 ರಷ್ಟನ್ನು ಪಾವತಿಸಬೇಕಿದೆ. ಉಳಿದ ಶೇ. 50 ಶುಲ್ಕವನ್ನು ಡಿಸೆಂಬರ್ 31 ರೊಳಗೆ ಕಡ್ಡಾಯವಾಗಿ ಪಾವತಿ ಮಾಡುವಂತೆ ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಆಹಾರ ಸಹಿತ ಮದ್ಯ ಪೂರೈಕೆ ಇಲ್ಲಪ್ರಸ್ತುತ ಕೋವಿಡ್-19 ನಿರ್ಬಂಧ ಜಾರಿಯಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಹೊಸ ಮಾರ್ಗಸೂಚಿಯಂತೆ ನಿಯಮ ಪಾಲನೆಗೆ ಸೂಚಿಸಲಾಗಿದೆ. ಸಿಎಲ್-4, ಸಿಎಲ್-6 ಎ, ಸಿಎಲ್-7, ಸಿಎಲ್-7ಎ, ಸಿಎಲ್-7ಬಿ, ಸಿಎಲ್-9, ಸಿಎಲ್ 17, ಸಿಎಲ್-18 ಆರ್‍ವಿಬಿ ಸನ್ನದಿನಲ್ಲಿ ಬಾಟಲ್ಡ್ ಬೀರ್ ಹೊಂದಿರುವ ವೈನ್ ಚಾವರಿನ್ ಮತ್ತು ಮೈಕ್ರೋಬ್ರಿವರಿ ಸನ್ನದುಗಳಲ್ಲಿರುವ ರೆಸ್ಟೋರೆಂಟ್‍ಗಳಲ್ಲಿ ಆಹಾರವನ್ನು ಸೇವಿಸಲು ತಾ. 8 ರಿಂದ ಅನ್ವಯವಾಗುವಂತೆ ಅವಕಾಶ ನೀಡಿದೆ. ಆದರೆ ಯಾವುದೇ ಕಾರಣಕ್ಕೂ ಸನ್ನದು ಆವರಣದಲ್ಲಿ ಆಹಾರದೊಂದಿಗೆ ಮದ್ಯ, ಬಿಯರ್, ವೈನ್ ಸೇವನೆ ಅವಕಾಶ ಕಲ್ಪಿಸಬಾರದೆಂದು ಆದೇಶಿಸಲಾಗಿದೆ.