ಮಡಿಕೇರಿ, ಜೂ. 5: ದೇಶದಾದ್ಯಂತ ತಾ. 8ರಿಂದ ಹೊಟೇಲ್, ಲಾಡ್ಜ್, ರೆಸಾರ್ಟ್, ಹೋಂ ಸ್ಟೇಗಳು ಹಾಗೂ ಅತಿಥಿ ಗೃಹಗಳನ್ನು ತೆರೆಯಲು ಸರಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ತಾ. 8ರಂದು ಅಪರಾಹ್ನ 4 ಗಂಟೆಗೆ ಜಿಲ್ಲಾಧಿಕಾರಿಗಳು ಸಭೆ ಕರೆದಿದ್ದಾರೆ.ಜಿಲ್ಲೆಯಲ್ಲಿ ಪ್ರವಾಸೋದ್ಯಮ ಪುನರಾರಂಭಗೊಳ್ಳುವ ಬಗ್ಗೆ ಹಲವು ಮಾರ್ಗಸೂಚಿಗಳನ್ನು ಅಂದು ಜಿಲ್ಲಾಧಿಕಾರಿಗಳು ಪ್ರಕಟಿಸಲಿದ್ದಾರೆ. ಮಹಾರಾಷ್ಟ್ರ ಹಾಗೂ ಕೊರೊನಾ ಪೀಡಿತ ಪ್ರದೇಶಗಳಿಂದ ಬರುವ ಪ್ರವಾಸಿಗರು 21 ದಿನದ ಕ್ವಾರಂಟೈನ್ ಮುಗಿಸಿದ್ದಲ್ಲಿ ಮಾತ್ರ ಅವರುಗಳಿಗೆ ಜಿಲ್ಲೆಯಲ್ಲಿ ಅತಿಥಿ ಕೊಠಡಿಗಳನ್ನು ನೀಡಬೇಕು, ಕೈಗೆ ಸೀಲು ಹಾಕಿಸಿಕೊಂಡವರಿಗೆ ಕೊಠಡಿ ನೀಡುವಂತಿಲ್ಲ- ಇಂತಹ ವಿಚಾರಗಳ ಬಗ್ಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಲಿದ್ದಾರೆ ಎನ್ನಲಾಗಿದೆ. ಪ್ರವಾಸಿ ಕೇಂದ್ರಗಳು ತಾ. 8ರಂದು ಆರಂಭಗೊಂಡರೂ ಜುಲೈ ಅಂತ್ಯದವರೆಗೆ ಜಿಲ್ಲೆಯ ಪ್ರವಾಸಿ ತಾಣವನ್ನು ತೆರೆಯದಿರಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ.