ಮಡಿಕೇರಿ, ಜೂ. 5.: ಮಡಿಕೇರಿ ನಗರಸಭೆ, ವೀರಾಜಪೇಟೆ ಸೋಮವಾರಪೇಟೆ ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿ ಗಳಲ್ಲಿ ಈ ವರ್ಷ ಶೇಕಡ 15 ರಿಂದ 25ರವರೆಗೆ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವ ಬಗ್ಗೆ ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಭರವಸೆ ನೀಡಿದ್ದಾರೆ. ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಈ ಕುರಿತಂತೆ ಸಚಿವರಿಗೆ ಕೆಲ ದಿನಗಳ ಹಿಂದೆ ಮನವಿ ಮಾಡಲಾಗಿತ್ತು. ಅದಕ್ಕೆ ಪೂರಕವಾಗಿ ಆಸ್ತಿ ತೆರಿಗೆ ಪಾವತಿಗೆ ರಿಯಾಯಿತಿ ಪಡೆಯಲು ನಿಗದಿಯಾಗಿದ್ದ ಮೇ 31ರ ಅವಧಿಯನ್ನು ಜುಲೈ 31ಕ್ಕೆ ವಿಸ್ತರಿಸಿ ಸರಕಾರ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಆದರೆ ಹೆಚ್ಚಿಗೆ ಮಾಡಿದ್ದ ಆಸ್ತಿ ತೆರಿಗೆಯನ್ನು ಸರಕಾರ ಕಡಿಮೆ ಮಾಡಿರಲಿಲ್ಲ. ಈ ವಿಷಯವನ್ನು ಇಂದು ಮತ್ತೆ ಚೇಂಬರ್ ಪದಾಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಇದು ರಾಜ್ಯ ವ್ಯಾಪ್ತಿಯ ಸಮಸ್ಯೆಯಾಗಿದ್ದು ಈ ಬಗ್ಗೆ ಜಿಲ್ಲೆಯಲ್ಲಿ ಯಾವುದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ; ಹಾಗಾಗಿ ಮುಖ್ಯಮಂತ್ರಿ ಗಳೊಂದಿಗೆ ಕೂಡಲೇ ಚರ್ಚಿಸಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಜಿಲ್ಲೆಯಲ್ಲಿ ಖಾಸಗಿ ಬಸ್‍ಗಳು ಓಡಾಡುತ್ತಿಲ್ಲ.

(ಮೊದಲ ಪುಟದಿಂದ) ಆದ್ದರಿಂದ ಖಾಸಗಿ ಬಸ್ ಸಂಚಾರಕ್ಕೆ ಅವಕಾಶ ಮಾಡಬೇಕು. ಇಲ್ಲದಿದ್ದಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗಳು ಹೆಚ್ಚು ಓಡಾಟಕ್ಕೆ ಅವಕಾಶ ಮಾಡಬೇಕು ಎಂದು ಎಂ.ಬಿ. ದೇವಯ್ಯ ಮನವಿ ಮಾಡಿದರು.

ಈ ಸಂದರ್ಭ ಶಾಸಕರುಗಳಾದ ಎಂ.ಪಿ ಅಪ್ಪಚ್ಚುರಂಜನ್, ಎಂ.ಪಿ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಸಂಸದ ಪ್ರತಾಪ್ ಸಿಂಹ ಜಿಲ್ಲಾಧಿಕಾರಿ ಅನಿಸ್ ಕಣ್ಮನಿ ಜಾಯ್ ಹಾಗೂ ಇತರರು ಉಪಸ್ಥಿತರಿದ್ದರು. ಚೇಂಬರ್ ನಿಯೋಗದಲ್ಲಿ ಚೇಂಬರ್ ಜಿಲ್ಲಾಧ್ಯಕ್ಷ ಎಂ.ಬಿ. ದೇವಯ್ಯ, ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್, ಉಪಾಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಮಾಜಿ ಜಿಲ್ಲಾಧ್ಯಕ್ಷ ಜಿ. ಚಿದ್ವಿಲಾಸ್, ಪದಾಧಿಕಾರಿಗಳಾದ ಮೊಂತಿ ಗಣೇಶ್, ಭಾಸ್ಕರ್, ಧನಂಜಯ್, ಅಮೃತರಾಜ್ ಸಂತೋಷ್ ಹಾಗೂ ಇತರರು ಭಾಗವಹಿಸಿದ್ದರು.