ಮಡಿಕೇರಿ, ಜೂ. 5: ಸಂತ್ರಸ್ತರಿಗೆ ಮನೆ ಹಂಚಿಕೆ ವಿಚಾರದಲ್ಲಿ ಸಂತ್ರಸ್ತರಿಂದ ಲಂಚ ಪಡೆದ ನಗರಸಭೆ ಸಿಬ್ಬಂದಿಯೋರ್ವನನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ಸೆರೆ ಹಿಡಿದಿದ್ದಾರೆ. ನಗರಸಭೆಯಲ್ಲಿ ಬಿಲ್ ಕಲೆಕ್ಟರ್ ಆಗಿರುವ ಎ.ಜಿ. ಲೋಹಿತ್‍ಕುಮಾರ್ ಎಂಬಾತನೇ ಲಂಚ ಪಡೆದು ಸೆರೆಸಿಕ್ಕ ಸಿಬ್ಬಂದಿ ಕಳೆದ 2018ರಲ್ಲಿ ಪ್ರಕೃತಿ ವಿಕೋಪದಲ್ಲಿ ಮಡಿಕೇರಿಯ ಇಂದಿರಾನಗರ ನಿವಾಸಿ ಹೆಚ್.ಜಿ. ಗಣೇಶ್ ತಮ್ಮ ಮನೆ ಕಳೆದುಕೊಂಡಿದ್ದರು. ನಂತರದಲ್ಲಿ ಮನೆ ಹಂಚಿಕೆ ಸಂದರ್ಭ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಾಟರಿ ಮೂಲಕ ಗಣೇಶ್‍ಗೆ ಮದೆ ಗ್ರಾ.ಪಂ. ವ್ಯಾಪ್ತಿಯ ಗೋಳಿಕಟ್ಟೆಯಲ್ಲಿ ಮನೆ ಸಿಕ್ಕಿತ್ತು. ಈ ಮನೆಯನ್ನು ನಿನ್ನೆ ಉಸ್ತುವಾರಿ ಸಚಿವ ಸೋಮಣ್ಣ ಅವರು ಹಸ್ತಾಂತರ ಮಾಡಿದ್ದರು. ಗಣೇಶ್‍ಗೆ ಅಧಿಕಾರಿಗಳು, ಸಂತ್ರಸ್ತರ ಸಮ್ಮುಖದಲ್ಲಿ ತೆಗೆದ ಲಾಟರಿಯಲ್ಲಿ ಗೋಳಿಕಟ್ಟೆಯಲ್ಲಿ ಮನೆ ಲಭಿಸಿದ್ದರೂ ಲೋಹಿತ್‍ಕುಮಾರ್ ತಾನು ಮನೆ ಒದಗಿಸಿಕೊಟ್ಟಿದ್ದು, ನಗರಸಭೆ ಅಧಿಕಾರಿಗಳಿಗೆ ಈ ಸಂಬಂಧ ಹಣ ನೀಡಬೇಕಾಗಿದೆ. ಹಾಗಾಗಿ ರೂ. 50 ಸಾವಿರ ನೀಡಬೇಕೆಂದು ಗಣೇಶ್‍ನನ್ನು ಆಗಾಗ್ಗೆ ಪೀಡಿಸುತ್ತಿದ್ದನೆನ್ನಲಾಗಿದೆ. ಜೊತೆಗೆ ರೂ. 25 ಸಾವಿರ ನೀಡಬೇಕೆಂದು ಒತ್ತಾಯಿಸುತ್ತಿದ್ದ.

ಆಟೋ ಚಾಲಕನಾಗಿರುವ ಗಣೇಶ್, ಅಷ್ಟೊಂದು ಹಣ ಇಲ್ಲದರಿಂದ ರೂ. 5 ಸಾವಿರ ನೀಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಲೋಹಿತ್ ಉಳಿದ 20 ಸಾವಿರ ಬೇಕೆಂದು ಪದೇ ಪದೇ ಕರೆ ಮಾಡಿ ಪೀಡಿಸಿದ್ದಾರೆ. ಮನನೊಂದ ಗಣೇಶ್ ಈ ಬಗ್ಗೆ ಎಸಿಬಿಗೆ ದೂರು ನೀಡಿದ್ದಾನೆ. ಎಸಿಬಿ ಅಧಿಕಾರಿಗಳ ಮಾರ್ಗ ದರ್ಶನದಂತೆ ಉಳಿದ ಹಣ ನೀಡುವದಾಗಿ, ಇಂದು ಎಪಿಎಂಸಿ ಆವರಣಕ್ಕೆ ಬರುವಂತೆ ಗಣೇಶ್, ಲೋಹಿತ್‍ಗೆ ತಿಳಿಸಿದ್ದು, ಅದರಂತೆ ಲೋಹಿತ್ ಆಗಮಿಸಿ ಲಂಚ ಸ್ವೀಕರಿಸುತ್ತಿರುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಸೆರೆ ಹಿಡಿದಿದ್ದಾರೆ. ಲೋಹಿತ್‍ನನ್ನು ಬಂಧಿಸಿ ಲಂಚ ಪಡೆದ ರೂ. 20 ಸಾವಿರ ಹಣವನ್ನು ವಶಪಡಿಸಿಕೊಂಡು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಲೋಹಿತ್ ವಿರುದ್ಧ ಲಂಚ ಪಡೆದಿರುವ ಬಗ್ಗೆ ಹಾಗೂ ಮನೆ ಹಂಚಿಕೆ ಹಾಗೂ ಮಳೆಹಾನಿ ಪರಿಹಾರದಲ್ಲಿ ವಂಚಿಸಿರುವ ಬಗ್ಗೆಯೂ ಆರೋಪಗಳಿದ್ದು, ಈ ಬಗ್ಗೆ ಸಂಘಟನೆಗಳು ನಗರಸಭೆ ಎದುರು ಪ್ರತಿಭಟನೆ ಕೂಡ ನಡೆಸಿದ್ದರು.

ಮೈಸೂರು ವಲಯ ಪೊಲೀಸ್ ಅಧೀಕ್ಷಕಿ ರಶ್ಮಿ ಅವರ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲೆಯ ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆಯ ಉಪಾಧೀಕ್ಷಕ ಸದಾನಂದ ತಿಪ್ಪಣ್ಣ ಅವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಶ್ರೀಧರ್, ಮಹೇಶ್, ಸಿಬ್ಬಂದಿಗಳಾದ ದಿನೇಶ್, ಸಜನ್, ಪ್ರವೀಣ್, ಲೋಹಿತ್, ದೀಪಿಕಾ, ಚಾಲಕ ಸುರೇಶ್, ಮಹಾದೇವ ಮತ್ತು ನರೂಣ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.