ಕಣಿವೆ, ಜೂ. 5: ಜಿಲ್ಲೆಯಲ್ಲಿನ ಎರಡನೇ ಜಲಾಶಯವಾದ ಚಿಕ್ಲಿಹೊಳೆ ಜಲಾಶಯ ಕೃಷಿಕರ ಪಾಲಿಗೆ ಶಾಪಗ್ರಸ್ತವಾದರೂ ನೀರಾವರಿ ನಿಗಮದ ಅಧಿಕಾರಿಗಳ ಪಾಲಿನ ಕಾಮಧೇನು ಆಗಿದೆ ಎಂಬುದು ರೈತರ ಆಕ್ರೋಶವಾಗಿದೆ. ಏಕೆಂದರೆ ರೈತರ ಕೃಷಿ ಜಮೀನುಗಳಿಗೆ ಸರಾಗವಾಗಿ ನೀರು ಹರಿಸಿ ರೈತಾಪಿ ವರ್ಗಕ್ಕೆ ಕಾಯಕಲ್ಪವಾಗಬೇಕಾದ ಈ ಯೋಜನೆ ಆ ಭಾಗದ ಹತ್ತಾರು ಗ್ರಾಮಗಳ ನೂರಾರು ರೈತರಿಗೆ ಶಾಪವಾಗಿ ಮಾರ್ಪಟ್ಟಿರುವುದು ಮಾತ್ರ ವಿಪರ್ಯಾಸ.

ಕಳೆದ 35 ವರ್ಷಗಳ ಹಿಂದೆ ಕೋಟ್ಯಾಂತರ ರೂಗಳನ್ನು ವ್ಯಯಿಸಿ ನಿರ್ಮಿಸಿದ ಈ ಜಲಾಗಾರದಿಂದ 2500 ಎಕರೆ ಕೃಷಿ ಭೂಮಿಗೆ ನೀರು ಹರಿಸಲು 29 ಕಿಮೀ ದೂರದಷ್ಟು ಕಾಲುವೆಯನ್ನು ನಿರ್ಮಿಸಲಾಗಿತ್ತು. ಈ ವ್ಯಾಪ್ತಿಯ 13 ಹಳ್ಳಿಗಳ 300 ಕ್ಕೂ ಹೆಚ್ಚು ರೈತ ಕುಟುಂಬಗಳ ಸಂಜೀವಿನಿಯಾಗಬೇಕಿದ್ದ ಈ ನೀರಾವರಿ ಯೋಜನೆಯನ್ನು ದೂರಾಲೋಚನೆಯಿಂದಲೇ ನಿರ್ಮಿಸಲಾಗಿತ್ತಾದರೂ, ಜಲಾನಯನ ವ್ಯಾಪ್ತಿಯ ಪ್ರಭಾವಿ ವ್ಯಕ್ತಿಯೊಬ್ಬರ ದುರಾಲೋಚನೆಗೆ ಈ ಯೋಜನೆ ಬಲಿಯಾಗಿದ್ದು ಮಾತ್ರ ದುರಂತ.

ಇದೀಗ ಕಳೆದ ಎರಡೂವರೆ ದಶಕಗಳಿಂದಲೂ ಕಳೆಗುಂದಿದ ಈ ಚಿಕ್ಲಿಹೊಳೆ ಯೋಜನೆಯ ಹೆಸರಿನಲ್ಲಿ ಸರ್ಕಾರದಿಂದ ಹಣ ತಂದು ಕಾಲುವೆ ನಿರ್ಮಿಸಿ, ತೂಬುಗಳನ್ನು ಸರಿಪಡಿಸಿ ಕೃಷಿ ಜಮೀನಿಗೆ ನೀರು ಹರಿಸುತ್ತೇವೆ. ಆ ಮೂಲಕ ರೈತರನ್ನು ಉದ್ಧಾರ ಮಾಡುತ್ತೇವೆ ಎಂದು ರೈತರ ಹೆಸರು ಹೇಳಿಕೊಂಡು ನೀರಾವರಿ ನಿಗಮದ ಅಧಿಕಾರಿಗಳು, ಕೆಲವು ಗುತ್ತಿಗೆದಾರರು ಹಾಗೂ ಕೆಲವು ರಾಜಕಾರಣಿಗಳು ಉದ್ಧಾರವಾಗಿದ್ದಾರೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಆರ್.ಕೆ. ಚಂದ್ರು ನೇರವಾಗಿ ಆರೋಪ ಮಾಡುತ್ತಾರೆ. ಸುತ್ತಲೂ ಅರಣ್ಯ ಪ್ರದೇಶವನ್ನು ಒಳಗೊಂಡ ಭೂರಮೆಯ ಮಡಿಲಲ್ಲಿ ನಿರ್ಮಾಣವಾಗಿರುವ ಈ ಜಲಾಗಾರ ಮಳೆಗಾಲದಲ್ಲಿ ತುಂಬಿ ಸುರುಳಿಯಾಕಾರದಲ್ಲಿ ಹರಿವಾಗ ನಯಾಗರ ಫಾಲ್ಸ್ ಮಾದರಿಯಲ್ಲಿ ಕಾಣುವ ಸೊಬಗು ನೋಡುಗರ ಕಣ್ಮನ ಸೂರೆಗೊಳ್ಳುವುದು ಒಂದನ್ನು ಬಿಟ್ಟರೆ ಈ ಜಲಾಗಾರದ ಮೂಲ ಉದ್ದೇಶ ಮರೆಯಾಗಿರುವುದು ಮಾತ್ರ ವ್ಯವಸ್ಥೆಯನ್ನು ಅಣಕಿಸುವಂತಿದೆ.

ನಿರ್ವಹಣೆ ಇಲ್ಲದ ಕಾಲುವೆಗಳು: ಜಲಾಶಯದ ಎದುರೇ ಇರುವ ಮುಖ್ಯ ನಾಲೆಯಲ್ಲಿ ಆರಂಭದಲ್ಲಿ ಕಟ್ಟಿದ ಕಲ್ಲು ಹಾಸುಗಳು ಕಿತ್ತು ಕಾಲುವೆ ಮೂಲ ಸ್ವರೂಪ ಕಳೆದುಕೊಂಡಿದ್ದರೂ ಕೂಡ ಮುಖ್ಯ ಕಾಲುವೆಯ ದುರಸ್ಥಿಗೆ ಅಧಿಕಾರಿಗಳು ಮುಂದಾಗಿಲ್ಲ. ಹಾಗೆಯೆ ಮುಂದೆ ಸಾಗಿದಂತೆ ಮುಖ್ಯ ಕಾಲುವೆ ಹಾಗೂ ಉಪಕಾಲುವೆಗಳಲ್ಲಿ ಭಯಾನಕವಾದ ಕಾಡು ಗಿಡಗಳು ಹುಟ್ಟಿ ಬೆಳೆದು ಮರವಾಗಿದ್ದರೂ ಕೂಡ ಅವುಗಳನ್ನು ತೆರವು ಗೊಳಿಸಿಲ್ಲ. ಇನ್ನು ಮಳೆಗಾಲದಲ್ಲಿ ಹರಿವ ನೀರಿನಿಂದ ಕಾಲುವೆಗಳಲ್ಲಿ ಹೂಳು ತುಂಬಿದ್ದರೂ ಕೂಡ ಅದನ್ನು ತೆಗೆದು ಜಲಾಶಯದ ನೀರು ಸರಾಗವಾಗಿ ಹರಿವ ವ್ಯವಸ್ಥೆ ಕಲ್ಪಿಸಿಲ್ಲ. ಇನ್ನು ತೂಬುಗಳ ಸ್ಥಿತಿಯಂತೂ ಹೇಳತೀರದ್ದು.

ಪುಂಡರ ತಾಣವಾಗುತ್ತಿರುವ ಜಲಾಶಯ: ಪ್ರವಾಸಿಗರನ್ನು ತನ್ನತ್ತ ಆಕರ್ಷಿಸಿ ಒಂದಷ್ಟು ಮನವನ್ನು ಸೂರೆಗೊಂಡು ಕಣ್ಣಿಗೆ ಇಂಪು ನೀಡುವ ಈ ಜಲಾಶಯ ಇತ್ತೀಚಿನ ವರ್ಷಗಳಿಂದ ಪುಂಡರ ತಾಣವಾಗುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಜಲಾಶಯ ನೋಡಲು ಬಂದು ಅಲ್ಲೇ ರಸ್ತೆ ಬದಿಯಲ್ಲಿ ಕುಳಿತು ಮದ್ಯ ಸೇವಿಸುವ, ಗುಟ್ಕಾ, ಗಾಂಜಾ ಸೇವಿಸುವ ಕೆಲಸ ಎಗ್ಗಿಲ್ಲದೇ ನಡೆಯುತ್ತಿದೆ. ನಿಗಮದ ಅಧಿಕಾರಿಗಳು ಲಾಕ್ ಡೌನ್ ಹಿನ್ನೆಲೆಯಲ್ಲಿ ಜಲಾಶಯದ ಕಟ್ಟೆಯ ಮೇಲೆ ಹೋಗುವ ರಸ್ತೆಯನ್ನು ಬಂದ್ ಮಾಡಿ ಗೇಟಿಗೆ ಬೀಗ ಜಡಿದಿದ್ದರೂ ಕೂಡ ಸುರುಳಿಯಾಕಾರದಲ್ಲಿ ನೀರು ಸುರಿವ ಸ್ಥಳದ ಆಸುಪಾಸಿನಲ್ಲಿ ನಿರ್ಮಿಸಿರುವ ತಂತಿ ಬೇಲಿ ಹಾಳಾಗಿದ್ದು ಅಲ್ಲಿಯೇ ನಿರಾಯಾಸವಾಗಿ ಪುಂಡರು ಜಲಾಗಾರದೊಳಗೆ ದಾವಿಸುತ್ತಾ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಒಟ್ಟಾರೆ ನೀರಾವರಿ ನಿಗಮದ ಅಧಿಕಾರಿಗಳು ಇನ್ನಾದರು ಈ ಜಲಾಶಯದ ಬಗೆಗಿನ ಕರ್ತವ್ಯ ಪರತೆಯನ್ನು ಪ್ರದರ್ಶಿಸಿ ತಮ್ಮ ಜವಾಬ್ದಾರಿ ತೋರುವ ಮೂಲಕ ನಿಜವಾದ ಫಲಾನುಭವಿಗಳಾದ ರೈತರ ಬಾಳು ಬೆಳಗುವ ಕೆಲಸವನ್ನು ಮಾಡಬೇಕಿದೆ ಅಷ್ಟೆ. ಅತ್ತ ಹಾರಂಗಿ ಜಲಾಶಯ ಇದ್ದೂ ಕೂಡ ಕೊಡಗಿನ ರೈತರಿಗೆ ಯಾವುದೇ ಪ್ರಯೋಜನ ವಾಗುತ್ತಿಲ್ಲ. ಇತ್ತ ಚಿಕ್ಲಿಹೊಳೆ ಸ್ಥಳೀಯ ರೈತರ ಉದ್ದೇಶಕ್ಕಾಗಿಯೇ ನಿರ್ಮಿತಗೊಂಡರೂ ಕೂಡ ಅದೂ ಕೂಡ ವರದಾನವಾಗಲಿಲ್ಲ. ಇನ್ನು ಲೋಕಪಾವನೆ ಕಾವೇರಿ ಜಿಲ್ಲೆಯಲ್ಲಿ ಹುಟ್ಟಿ ಹರಿಯುತ್ತಿರುವುದಷ್ಟೆ ನಮ್ಮ ಜಿಲ್ಲೆಯ ಜನರ ಪಾಲಿನ ಸೌಭಾಗ್ಯ ಅಷ್ಟೆ.ಈ ಯೋಜನೆ ಜನತೆಗೊಂದು ಶಾಪವೆಂದು ಕೃಷಿಕ ಬಿ.ಎಸ್. ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರೆ, ಪ್ರಭಾವಿಯೊಬ್ಬರ ಕೃಪೆಯಿಂದ ಈ ಯೋಜನೆ ಬಲಿಪಶು ಆಗಿದೆ ಎನ್ನುತ್ತಾರೆ ಎ.ವಿ. ಶಾಂತಕುಮಾರ್.

-ಕೆ.ಎಸ್. ಮೂರ್ತಿ