ಮಡಿಕೇರಿ, ಜೂ. 5: ಎರಡು ವರ್ಷ ಹಿಂದಿನ ಮಳೆಗಾಲದಲ್ಲಿ ಬೆಳಗಿನ ಜಾವ ಜನತೆಯ ಕಣ್ಣೆದುರು ಭೂಕುಸಿತದೊಂದಿಗೆ, ನಗರದ ಹೃದಯ ಭಾಗದಲ್ಲಿ ಇರುವ ಹಳೆಯ ಬಸ್ ನಿಲ್ದಾಣ ಪ್ರದೇಶ ಪ್ರಸಕ್ತ ಮಳೆಗಾಲದಲ್ಲಿ ಇನ್ನಷ್ಟು ಅಪಾಯ ತಂದೊಡ್ಡುವ ಆತಂಕದಲ್ಲಿ ಜನತೆಯಿದ್ದಾರೆ.

ಒಂದೆಡೆ ನಿತ್ಯ ಸಂಚರಿಸುವ ವಾಹನಗಳು, ಪಾದಚಾರಿಗಳು, ವರ್ತಕ ಸಮೂಹದೊಂದಿಗೆ, ಶಾಲಾ - ಕಾಲೇಜು ವಿದ್ಯಾರ್ಥಿಗಳ ಸಹಿತ ಎಲ್ಲರೂ ಇಲ್ಲಿಗೆ ಆಗಮಿಸಿದೊಡನೆ ಆತಂಕದ ನೋಟ ಹರಿಸಲಿದ್ದಾರೆ. ನೂರು ಅಡಿಗಳಷ್ಟು ಎತ್ತರದಿಂದ ರಸ್ತೆ ಸಹಿತ ಕುಸಿದಿರುವ ಪ್ರದೇಶದಲ್ಲಿ, ಯಾವದೇ ಸುರಕ್ಷಾ ಕ್ರಮಕೈಗೊಳ್ಳದೆ ನಗರಸಭೆ ಕಡೆಗಣಿಸಿದೆ.

ಇನ್ನೊಂದೆಡೆ ಈ ಬೆಟ್ಟ ಕುಸಿತಕ್ಕೆ ತಡೆಯಾಗಿದ್ದ ಹಳೆಯ ಬಸ್ ನಿಲ್ದಾಣ ಕಟ್ಟಡವನ್ನು ನಗರಸಭೆಯೇ ತೆರವುಗೊಳಿಸಿದೆ. ಬದಲಾಗಿ ಒಂದಿಷ್ಟು ನಾಗರಿಕ ಪ್ರಮುಖರ ಪ್ರಯತ್ನದಿಂದ ಅಲ್ಲೊಂದು ಪ್ರವಾಸಿಗರ ವೀಕ್ಷಣಾ ತಾಣವಾಗಿ ರೂಪುಗೊಳಿಸಲು ಉದ್ದೇಶಿಸಿದ್ದ ‘ಮಡಿಕೇರಿ ಸ್ಕ್ವೇರ್’ ಕನಸಾಗಿಯೇ ಉಳಿದಿದೆ. ಹೀಗಾಗಿ ಯಾವದೇ ಸುರಕ್ಷಾ ಯೋಜನೆ ರೂಪಿಸದೆ, ಹತ್ತಾರು ಅಡಿ ಭೂಮಿಯ ಆಳಕ್ಕೆ ಕೊರೆದು ಕಲ್ಲು, ಸಿಮೆಂಟ್ ತುಂಬಿ ಅಡಿ ಪಾಯ ಹಾಕಿರುವದು, ರೂ. 1.6 ಕೋಟಿ ಹಣವನ್ನು ಮಣ್ಣುಪಾಲು ಮಾಡಿದಂತಾಗಿದೆ ಎಂದು ನಗರಸಭೆ ವಿರುದ್ಧ ಜನಾಕ್ರೋಶದ ಮಾತಾಗಿದೆ.

ಇಂತಹ ಸನ್ನಿವೇಶದಲ್ಲಿ ಭೂಕುಸಿತ ಪ್ರದೇಶದ ಒಂದು ಅಂಚಿನಲ್ಲಿ ಅಪಾಯಕಾರಿ ಹೊಂಡದ ರೀತಿ ಮಳೆ ನೀರು ನಿಂತಿರುವ ದೃಶ್ಯಗೋಚರಿಸುತ್ತಿದೆ. ಇನ್ನೊಂದೆಡೆ 2 ವರ್ಷ ಹಿಂದಿನ ಭೂಕುಸಿತದಿಂದ ಅಪೂರ್ಣಗೊಂಡಿರುವ ಬೆಟ್ಟಸಾಲು, ಮಳೆಯಲ್ಲಿ ಇನ್ನಷ್ಟು ಮಳಿಗೆಗಳಿಗೆ ಹಾನಿಯುಂಟು ಮಾಡುವ ದೃಶ್ಯವಿದೆ. ಈ ಬಗ್ಗೆ ಅಪಾಯಕ್ಕೆ ಮುನ್ನ ಜವಾಬ್ದಾರಿಯುತರು ಎಚ್ಚೆತ್ತುಕೊಳ್ಳಲೆಂದು ಇಲ್ಲಿನ ನಾಗರಿಕರ ಆಗ್ರಹವಾಗಿದೆ.