ಮಡಿಕೇರಿ, ಜೂ. 5: ಕೊರೊನಾ ಪರಿಸ್ಥಿತಿಯಿಂದಾಗಿ ಕೊಡವ ಸಾಹಿತ್ಯ ಅಕಾಡೆಮಿಗೆ ಸಂಬಂಧಿಸಿದಂತೆ ಹಲವು ಉದ್ದೇಶಿತ ಕಾರ್ಯಕ್ರಮಗಳು, ಇತರ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ ಲಾಕ್‍ಡೌನ್ ಅವಧಿಯನ್ನು ಅಕಾಡೆಮಿಗೆ ನೂತನ ಬೈಲಾ ರಚನೆ ಮಾಡುವ ನಿಟ್ಟಿನಲ್ಲಿ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರ ಅಧ್ಯಕ್ಷತೆಯ ತಂಡ ಬಳಸಿಕೊಂಡಿದೆ. ಈ ತನಕ ಕೊಡವ ಅಕಾಡೆಮಿಗೆ ನಿರ್ದಿಷ್ಟವಾದ ಬೈಲಾ ಇರಲಿಲ್ಲ.

ಇದೀಗ ತುಳು ಅಕಾಡೆಮಿ ಸೇರಿದಂತೆ ನಿರ್ದಿಷ್ಟ ಬೈಲಾ ಹೊಂದಿರುವ ಇತರ ಅಕಾಡೆಮಿಗಳ ಬೈಲಾವನ್ನು ತುಲನೆ ಮಾಡಿಕೊಂಡು ನೂತನವಾಗಿ ಕರಡು ಪ್ರತಿಯೊಂದನ್ನು ತಯಾರಿಸಲಾಗಿದೆ. ಈ ಕರಡು ಪ್ರತಿಯನ್ನು ಪ್ರಸಕ್ತ ಇರುವ ನಿಬಂಧನೆಗಳು ಮುಗಿದ ಬಳಿಕ ಸರ್ವ ಸದಸ್ಯರ ಸಭೆಯಲ್ಲಿಟ್ಟು ಅನುಮೋದನೆ ಯೊಂದಿಗೆ ಇಲಾಖೆಯ ಅನುಮತಿಗೆ ಕೋರಿ ಕಳುಹಿಸಿಕೊಡಲಾಗುವದು ಎಂದು ಅಕಾಡೆಮಿ ಅಧ್ಯಕ್ಷೆ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ. ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು ಅಕಾಡೆಮಿಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದರು.

ಲಾಕ್‍ಡೌನ್ ಪರಿಸ್ಥಿತಿಯಿಂದಾಗಿ ‘ಐನ್‍ಮನೆ ಅಂದು - ಇಂದು - ಮುಂದು’ ಎಂಬ ಅಂತರರಾಷ್ಟ್ರೀಯ ಸಮ್ಮೇಳನ ಸೇರಿಸಂತೆ ಕೆಲವಾರು ಉದ್ದೇಶಿತ ಕಾರ್ಯಕ್ರಮಗಳನ್ನು ಮುಂದೂಡಬೇಕಾಯಿತು. ಆದರೆ ಈ ಅವಧಿಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿಯ ವ್ಯಾಪ್ತಿಗೆ ಬರುವ ಬಡ ಹಾಗೂ ನಿರ್ಗತಿಕ ಕಲಾವಿದರು ಸಾಹಿತಿಗಳ ವಿವರವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಕಳುಹಿಸಿಕೊಡ ಲಾಗಿದೆ. ಬಡತನದಲ್ಲಿರುವ 78 ಕಲಾವಿದರ ಪಟ್ಟಿಯನ್ನು ಇಲಾಖೆಯ ಧನಸಹಾಯಕ್ಕಾಗಿ ರವಾನಿಸಲಾಗಿದೆ ಎಂದು ಅವರು ಮಾಹಿತಿಯಿತ್ತರು.

ಪ್ರಸ್ತುತ ಅಕಾಡೆಮಿಯ ವೆಬ್‍ಸೈಟ್ ಅನ್ನು ನವೀಕರಣಗೊಳಿಸಲು ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಸದ್ಯದಲ್ಲಿ ಅಕಾಡೆಮಿಯ ಆಡಿಟ್ ನಡೆಸಲು ಸಿದ್ಧತೆ ನಡೆದಿದೆ. ದುಡಿಪರಿ ಕರಗಳನ್ನು ವಿತರಿಸಲು ತಯಾರಿ ನಡೆದಿದೆ. ‘ಪೊಂಗುರಿ’ ತ್ರೈಮಾಸಿಕ ಪತ್ರಿಕೆಯನ್ನು ಸದ್ಯದಲ್ಲಿ ಹೊರತರಲಾ ಗುವುದು. ಇತರ ಕೆಲವು ಪುಸ್ತಕಗಳು ಪ್ರಕಟಣೆಗೆ ತಯಾರಾ ಗುತ್ತಿವೆ. ಅಕಾಡೆ ಮಿಯ ಗ್ರಂಥಾಲಯಕ್ಕೆ ಖರೀದಿಸಲು ಪುಸ್ತಕಗಳ ಪಟ್ಟಿ ತಯಾರು ಮಾಡಲಾ ಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಅಕಾಡೆಮಿಯಿಂದ ಹೊರತರಲಾ ಗುತ್ತಿರುವ ಶಬ್ದಕೋಶ ಕೂಡ ಕೊನೆಯ ಹಂತದಲ್ಲಿದೆ. ತಾ. 6 ರಂದು (ಇಂದು) ಪ್ರಕಟಣಾ ಸಮಿತಿಯ ಸಭೆಯನ್ನು ಕರೆಯಲಾಗಿದೆ. ಹೊಸ ಯೋಜನೆಗಳ ಬಗ್ಗೆ ಸರ್ವ ಸದಸ್ಯರ ಸಭೆ ಬಳಿಕ ಇಲಾಖಾ ಅನುಮತಿ ಪಡೆದು ಮುಂದೆ ಕಾರ್ಯಚಟುವಟಿಕೆ ಹಮ್ಮಿಕೊಳ್ಳಲಾಗು ವದು ಎಂದು ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.