ಗೋಣಿಕೊಪ್ಪಲು, ಜೂ.5: ಕಿರುಗೂರು ಪಂಚಾಯ್ತಿ ವ್ಯಾಪ್ತಿಯ ಸಿ.ತಿಮ್ಮಯ್ಯ ಅವರ ಹಸು ಹಾಗೂ ಕರು ಬಲಿಯಾಗಿರುವುದರ ಹಿಂದೆ ಗುಂಡೇಟು ತಗುಲಿರಬಹುದೇ ಎಂಬ ಸಂದೇಹ ಹಾಗೂ ಅನುಮಾನ ಇದೀಗ ಗ್ರಾಮದ ಜನತೆಯಲ್ಲಿ ಕಾಡತೊಡಗಿದೆ. ಈ ಬಗ್ಗೆ ಹಸುವಿನ ಮಾಲೀಕರಾದ ಸಿ.ತಿಮ್ಮಯ್ಯ ಅವರು ಸಮಗ್ರ ತನಿಖೆ ನಡೆಸುವಂತೆ ಪೊನ್ನಂಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ರಾಮರೆಡ್ಡಿ ಹಾಗೂ ಪೊನ್ನಂಪೇಟೆ ಠಾಣಾಧಿಕಾರಿ ಡಿ.ಕುಮಾರ್ ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದ್ದು ವಿವಿಧ ಕೋನಗಳಲ್ಲಿ ಹಸು,ಕರು ಸತ್ತಿರುವ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಮಂಗಳವಾರ ಮುಂಜಾನೆ 7 ಗಂಟೆ ಸುಮಾರಿಗೆ ತಮ್ಮ ಹಸು, ಕರುಗಳನ್ನು ತೋಟದಲ್ಲಿ ಮೇಯಲು ಬಿಟ್ಟಿದ್ದರು. ಪ್ರತಿನಿತ್ಯ ಹಸು ಹಾಗೂ ಕರು ತನ್ನ ಕೊಟ್ಟಿಗೆಗೆ ಸಂಜೆ 7 ಗಂಟೆಗೆ ತಾನಾಗಿಯೇ ವಾಪಸ್ಸಾಗುತ್ತಿತ್ತು. ಮಂಗಳವಾರ ಹಸುವು ಕೊಟ್ಟಿಗೆಗೆ ಬಂದಿರಲಿಲ್ಲ. ಇದರಿಂದ ಬುಧವಾರ ಮುಂಜಾನೆ ಕಾರ್ಮಿಕರು ತೋಟದಲ್ಲಿ ತೆರಳಿ ಪರಶೀಲಿಸಿದಾಗ ಹಸುವು ಮೃತ ಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಅನತಿ ದೂರದಲ್ಲಿ ಕರುವೂ ಕೂಡ ಮೃತಪಟ್ಟಿತ್ತು. ಈ ವಿಷಯವನ್ನು ಕಾರ್ಮಿಕರು ಮಾಲೀಕರ ಬಳಿ ತಿಳಿಸಿದ್ದರು.

ಮಾಲೀಕರು ತೋಟಕ್ಕೆ ತೆರಳಿ ಪರಿಶೀಲಿಸಿದಾಗ ಹಸು ಹಾಗೂ ಕರುವಿನ ಕುತ್ತಿಗೆ ಭಾಗದಲ್ಲಿ ವಿಚಿತ್ರ ರೀತಿಯಲ್ಲಿ ಗಾಯಗಳಾಗಿರುವುದು ಕಂಡು ಬಂದಿತ್ತಾದರೂ ವನ್ಯ ಪ್ರಾಣಿಗಳಿಂದ ಹಸು,ಕರು ಮೃತಪಟ್ಟ ಬಗ್ಗೆ ಯಾವುದೇ ಹೆಜ್ಜೆ ಗುರುತುಗಳು ಕಂಡು ಬರಲಿಲ್ಲ. ಅಲ್ಲದೆ ಮತ್ತೊಂದು ಕರುವು ಇನ್ನೂ ಕೂಡ ಕೊಟ್ಟಿಗೆಗೆ ಬಾರದಿರುವುದರಿಂದ ಇದರ ಬಗ್ಗೆ ಮಾಲೀಕರಿಗೆ ಸಂಶಯ ಮನೆ ಮಾಡಿದೆ.

ಪೊನ್ನಂಪೇಟೆ ಪಶುವೈದ್ಯಾಧಿಕಾರಿ ಗಳಾದ ಡಾ. ಚಂದ್ರಶೇಖರ್ ಮರಣೋತ್ತರ ಪರೀಕ್ಷೆ ನಡೆಸಿದರಾದರೂ ಹಸು, ಕರು ಮೃತ ಪಟ್ಟಿರುವ ಬಗ್ಗೆ ಇನ್ನೂ ವರದಿ ನೀಡಿಲ್ಲ. ಹಸುವಿನ ಮೇಲೆ ರಂದ್ರದ ಮಾದರಿಯಲ್ಲಿ ಗುರುತುಗಳಾಗಿದ್ದು ಹೊರತುಪಡಿಸಿದರೆ ಮತ್ಯಾವುದೇ ಗುರುತು ಕಂಡು ಬರುತ್ತಿಲ್ಲ. ಕರುವಿನ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹಾದು ಹೋದ ರಂದ್ರವು ಕಾಣಿಸಿಕೊಂಡಿವೆ. ಇದರಿಂದ ಇದು ಸಿಡಿಸಿದ ಗುಂಡೇಟು ಎಂದು ನಾಗರಿಕರು ಹಾಗೂ ಮಾಲೀಕರು ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.