ಮಡಿಕೇರಿ, ಜೂ. 5: ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಕೃಷಿ ಜಮೀನು ಗಳಿಗೆ ಕಂದಾಯ ನಿಗದಿ ಆಗದ ಕಾರಣ ಕೃಷಿಕರು ಸರಕಾರದ ಸೌಲಭ್ಯ ಗಳಿಂದ ವಂಚಿತರಾಗಿದ್ದು, ದಶಕಗಳ ಕಾಲದ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವಂತೆ ಜಿಲ್ಲೆಯ ಎಲ್ಲ ಬೆಳೆಗಾರರ ಸಂಘ ಒತ್ತಾಯಿಸಿದೆ.ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರಿಗೆ ಇಂದು ಮನವಿ ಸಲ್ಲಿಸಿದ ಪದಾಧಿಕಾರಿಗಳು ಸಚಿವರೊಂದಿಗೆ ಚರ್ಚೆ ನಡೆಸಿದರು.ದಶಕಗಳ ಕಾಲದ ಈ ಸಮಸ್ಯೆಗೆ ಕೂಡಲೇ ಸರಕಾರ ಸ್ಪಂದಿಸಬೇಕಿದ್ದು, ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಹೆಚ್ಚುವರಿ ಸಿಬ್ಬಂದಿಯನ್ನು ಈ ಕೆಲಸಕ್ಕಾಗಿ ನೇಮಕಗೊಳಿಸಬೇಕು ಅಥವಾ ಕೊಡಗಿನ ಕಂದಾಯ ಹಾಗೂ ಸರ್ವೆ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿರುವ ಅಧಿಕಾರಿ, ಸಿಬ್ಬಂದಿಯನ್ನು ಬಳಸಿಕೊಂಡು ಶಾಶ್ವತ ಪರಿಹಾರ ಕಲ್ಪಿಸುವಂತೆ ಪದಾಧಿಕಾರಿಗಳು ಒತ್ತಾಯಿಸಿದರು.ಜಮೀನುಗಳಿಗೆ ಕಂದಾಯ ನಿಗದಿಯಾಗದ ಕಾರಣ ಕೃಷಿಕರು ಸರಕಾರದ ಎಲ್ಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ; ಮಳೆ ಪರಿಹಾರದ ನೆರವು ಕೂಡ ಇವರುಗಳಿಗೆ ಲಭಿಸಿಲ್ಲವೆಂದು ಸಚಿವರ ಗಮನ ಸೆಳೆದರು. ಸಮಸ್ಯೆಯನ್ನು ಆಲಿಸಿದ ಸಚಿವ ಸೋಮಣ್ಣ ಈ ಬಗ್ಗೆ ಉಪ ವಿಭಾಗಾಧಿಕಾರಿ
(ಮೊದಲ ಪುಟದಿಂದ) ಜವರೇಗೌಡ ಅವರಿಗೆ ಜವಾಬ್ದಾರಿ ವಹಿಸಿ ವಿಶೇಷ ಗಮನ ಹರಿಸಿ ಸಂಬಂಧಿಸಿದ ದಾಖಲಾತಿಗಳನ್ನು ಸಂಗ್ರಹಿಸುವಂತೆ ನಿರ್ದೇಶನ ನೀಡಿದರು.
ಇದು ಅತ್ಯಂತ ಕಠಿಣ ಕೆಲಸವಾಗಿದ್ದರೂ ಜಿಲ್ಲೆಯ ಜನತೆಗೆ ಆಗಿರುವ ತೊಂದರೆ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಪಂದಿಸಬೇಕೆಂದು ಅಭಿಪ್ರಾಯಪಟ್ಟರು. ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಕೂಡ ಆಗ್ಗಿಂದಾಗ್ಗೆ ಸಭೆ ಕರೆದು ಪ್ರಗತಿ ಪರಿಶೀಲಿಸುವಂತೆ ಸಚಿವರು ಮನವಿ ಮಾಡಿದರು.
ಕೊಡಗು ಬೆಳೆಗಾರರ ಫೆಡರೇಷನ್, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್, ಕೊಡಗು ಕಾಫಿ ಗ್ರೋವರ್ಸ್ ಫೆಡರೇಷನ್, ಸೋಮವಾರಪೇಟೆ ಗ್ರೋವರ್ಸ್ ಅಸೋಷಿಯೇಷನ್, ಶನಿವಾರಸಂತೆ ಗ್ರೋವರ್ಸ್ ಅಸೋಸಿಯೇಷನ್ ಹಾಗೂ ಅಮ್ಮತ್ತಿ ನಾಡು ರೈತ ಸಂಘ ಇವರುಗಳು ಜಂಟಿಯಾಗಿ ರಚಿಸಿಕೊಂಡ ಆಲ್ ಗ್ರೋವರ್ಸ್ ಅಸೋಸಿಯೇಷನ್ ಆಫ್ ಕೊಡಗು ಇದರ ಪದಾಧಿಕಾರಿಗಳಾದ ಎ. ನಂದಾ ಬೆಳ್ಯಪ್ಪ, ನಂದಿನೆರವಂಡ ದಿನೇಶ್, ಟಿ.ಎಂ. ಪ್ರದೀಪ್ ಪೂವಯ್ಯ ಈ ಹಿಂದೆ ಕಂದಾಯ ಸಚಿವ ಆರ್. ಅಶೋಕ್ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇವರುಗಳಿಗೂ ಮನವಿ ಸಲ್ಲಿಸಿದ್ದನ್ನು ನಿಯೋಗ ಸಚಿವರ ಗಮನಕ್ಕೆ ತಂದರು.