ಮಡಿಕೇರಿ, ಜೂ. 6: ಹೊರದೇಶ ಹಾಗೂ ಉತ್ತರ ಕರ್ನಾಟಕದ ಕೆಲವು ಮಿಡತೆಗಳ ಹಾವಳಿಯಿಂದ ತತ್ತರಿಸಿರುವ ಬೆನ್ನಲ್ಲೇ ಇದೀಗ ಜಿಲ್ಲೆಯಲ್ಲೂ ಅಲ್ಲಲ್ಲಿ ಮಿಡತೆಗಳು ಗುಂಪು ಗುಂಪಾಗಿ ಕಾಣಸಿಗುತ್ತಿವೆ.

ಉತ್ತರ ಕೊಡಗಿನ ಸೋಮವಾರಪೇಟೆ ತಾಲೂಕಿನ ಸಿಂಗನಳ್ಳಿಯ ಕಾಫಿ ತೋಟದಲ್ಲಿ ಮಿಡತೆಗಳು ಕಂಡು ಬಂದಿದ್ದವು. ಇದೀಗ ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದಲ್ಲೂ ಮಿಡತೆಗಳ ಗುಂಪು ಕಂಡುಬಂದಿವೆ.

ಅರ್ವತ್ತೊಕ್ಲು ಬಳಿಯ ಬಿಳಿಗೇರಿ ಗ್ರಾಮದ ಪೂಜಾರೀರ ಜಗದೀಶ್ ಅವರ ಮನೆಯ ಬಳಿ ಮಿಡತೆಗಳು ಪ್ರತ್ಯಕ್ಷವಾಗಿದ್ದು, ಸೀಬೆಗಿಡದ ತುಂಬೆಲ್ಲ ಮಿಡತೆಗಳು ತುಂಬಿಕೊಂಡಿದ್ದು, ಎಲೆಗಳನ್ನೆಲ್ಲ ತಿಂದು ಹಾಕಿವೆ. ದೊಡ್ಡ ಗಾತ್ರದ ಮಿಡತೆಗಳಲ್ಲದಿದ್ದರೂ ಗುಂಪು ಗುಂಪಾಗಿ ಎಲೆಗಳನ್ನು ತಿಂದು ಹಾಕುತ್ತಿರುವುದರಿಂದ ಸುತ್ತ ಮುತ್ತಲ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಸಂಬಂಧಿಸಿದ ಇಲಾಖೆಯವರು ಇತ್ತ ಗಮನ ಹರಿಸಿ ಮಿಡತೆಗಳ ಹತೋಟಿಗೆ ಸಲಹೆ ನೀಡುವಂತೆ ಕೋರಿದ್ದಾರೆ. -ಸಂತೋಷ್