ಶನಿವಾರಸಂತೆ, ಜೂ. 5: ಕೋವಿಡ್-19 ಲಾಕ್‍ಡೌನ್ ಸಡಿಲಿಕೆ ನಂತರ ಮದ್ಯದಂಗಡಿಗಳು ತೆರೆದ ಪರಿಣಾಮ ಮದ್ಯಪ್ರಿಯರು ಪಾರ್ಸೆಲ್ ತಂದು ಸುತ್ತಮುತ್ತಲ ಹಳ್ಳಿಗಳ ತೋಟ-ಗದ್ದೆ ಬದಿಯಲ್ಲಿ ಕುಳಿತು ಮೋಜು ಮಸ್ತಿ ಮಾಡಿ ಖಾಲಿ ಬಾಟಲಿಗಳನ್ನು ಎಸೆದು ಹೋಗುತ್ತಿದ್ದು, ರೈತರ ಅಸಮಾಧಾನಕ್ಕೆ ಗುರಿಯಾಗಿದ್ದಾರೆ.

ಸಮೀಪದ ಕಾಜೂರು-ಕೂಜಗೇರಿ ಗ್ರಾಮಗಳ ರಸ್ತೆ ಬದಿ ರೈತ ಚಂದ್ರಣ್ಣ ಅವರ ಶುಂಠಿ ಗದ್ದೆಗೆ ತೆರಳುವ ಹಾದಿಯಲ್ಲಿ ಪಾರ್ಟಿ ಮಾಡಿ ಮದ್ಯದ ಬಾಟಲಿಗಳನ್ನು ಎಸೆದು ಹೋಗಿದ್ದಾರೆ. ಎಸೆದು ಹೋದರೆ ಪರವಾಗಿಲ್ಲ ಬಾಟಲಿ ಗಳನ್ನು ಒಡೆದು ಹಾಕಿ ಹೋಗುತ್ತಾರೆ. ಗಾಜಿನ ಚೂರುಗಳು ಗದ್ದೆಗೆ ಹೋಗು ವಾಗ ಕಾಲಿಗೆ ಚುಚ್ಚಿ ಗಾಯವಾಗು ತ್ತದೆ. ಮನೆಯ ದನಕರುಗಳ ಕಾಲಿಗೆ ಚುಚ್ಚಿ ಗಾಯವಾಗಿ ಮೂಕಪ್ರಾಣಿಗಳು ಬಾಧೆ ಪಡುವಂತಾಗಿದೆ.

ಕೆಲವು ಮದ್ಯವೆಸನಿಗಳು ಪರಿಸರ ಮಲಿನಗೊಳಿಸುವುದರ ಜೊತೆಗೆ ಇತರರಿಗೆ ನೋವು ಕೊಡುತ್ತಿದ್ದಾರೆ ಎಂದು ಚಂದ್ರಣ್ಣ ಬೇಸ ವ್ಯಕ್ತಪಡಿಸಿದರು.

ಲಾಕ್‍ಡೌನ್ ಹಿನ್ನೆಲೆ ಬಾರ್-ರೆಸ್ಟೋರೆಂಟ್, ಮನೆಗಳಲ್ಲಿ ಕುಳಿತು ಪಾರ್ಟಿ ಮಾಡಲಾಗದ ಕಾರಣಕ್ಕೆ ಕೆಲವರು ಹಳ್ಳಿಗಳಲ್ಲಿ ಅನ್ಯರ ತೋಟ-ಗದ್ದೆಗಳತ್ತ ಹೆಜ್ಜೆ ಹಾಕುತ್ತಿದ್ದರು. ಇದೀಗ ತಾ.8ರ ಬಳಿಕ ಲಾಕ್‍ಡೌನ್ ಕಫ್ರ್ಯೂ ತೆರವುಗೊಳಿಸಲಾಗಿದ್ದು, ಮದ್ಯದಂಗಡಿ, ಬಾರ್-ರೆಸ್ಟೋರೆಂಟ್, ಹೊಟೇಲ್ ಎಲ್ಲವೂ ತೆರೆಯಲ್ಪಡುತ್ತವೆ. ಮದ್ಯಪ್ರಿಯರ ವರ್ತನೆ ಪರಿಣಾಮ ಹೇಗಿರುತ್ತದೆಯೋ ಎಂದು ರೈತರಾದ ದೊಡ್ಡಪ್ಪ, ಮೋಹನ್, ಪ್ರಕಾಶ್, ಪ್ರಣೀತ್ ಪ್ರಶ್ನಿಸಿದ್ದಾರೆ. -ನರೇಶ್