ಕೂಡಿಗೆ, ಜೂ. 5: ಕುಶಾಲನಗರ ವಲಯ ಆನೆಕಾಡು ಅರಣ್ಯ ಇಲಾಖೆಯ ವತಿಯಿಂದ ತೊಂಡೂರು ನರ್ಸರಿಯಲ್ಲಿ ಬೆಳೆದಿರುವ ವಿವಿಧ ತಳಿಯ ಗಿಡಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲು ಈಗಾಗಲೇ ಗಿಡಗಳು ಸಿದ್ಧವಾಗಿವೆ.

ಈಗಾಗಲೆ 80 ಸಾವಿರ ಗಿಡಗಳು ವಿತರಣೆಗೆ ಸಿದ್ಧವಾಗಿದ್ದು, ಈ ಪೈಕಿ 40 ಸಾವಿರ ಸಿಲ್ವರ್ ಹಾಗೂ 40 ಸಾವಿರ ಕಾಡು ಜಾತಿಯ ಗಿಡಗಳು ಒಳಗೊಂಡಿದೆ.

ಸಿಲ್ವರ್ ಗಿಡವೊಂದಕ್ಕೆ ರೂ.1 ಹಾಗೂ ಕಾಡು ಜಾತಿಯ ಗಿಡಗಳಿಗೆ ರೂ3 ರಂತೆ ರೈತರಿಗೆ ವಿತರಣೆ ಮಾಡಲಾಗುವುದು. ನೇರಳೆ, ನಂದಿ, ಬೀಟೆ, ಹಲಸು, ಮಹಾಗನಿ, ಮತ್ತಿ, ತೇಗ, ಹೊನ್ನೆ, ಮಾವು, ಬಿಲ್ವರ, ಬಿದಿರು, ಬೇವು, ಕರಡಿ, ಜಂಬು ನೇರಳೆ, ಬಿಲ್ವಪತ್ರೆ, ಹೊಂಗೆ ಗಿಡಗಳು ಇಲ್ಲಿ ಲಭ್ಯವಿದೆ ಎಂದು ಆನೆಕಾಡು ಉಪ ವಲಯ ಅರಣ್ಯಾಧಿಕಾರಿ ಮಹದೇವ್ ನಾಯಕ್ ತಿಳಿಸಿದ್ದಾರೆ.

ಹುದುಗೂರು

ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಬೆಳೆಸಲಾದ ವಿವಿಧ ಜಾತಿ ಗಿಡಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ.

ರೈತರು ತಮ್ಮ ಜಮೀನಿನ ಆರ್‍ಟಿಸಿ ಮತ್ತು ಆಧಾರ ಕಾರ್ಡ್ ಅಯಾ ವ್ಯಾಪ್ತಿಯ ಜಿಲ್ಲಾ ಪಂಚಾಯತಿ ಸದಸ್ಯರ ಸಿಫಾರಸ್ ಪತ್ರವನ್ನು ಒದಗಿಸಿದಲ್ಲಿ ರೈತರ ಜಮೀನಿನ ಮಣ್ಣಿನ ಅನುಗುಣವಾಗಿ ಬೆಳೆಯುವ ವಿವಿಧ ಜಾತಿ ಉತ್ತಮವಾದ ಗಿಡಗಳನ್ನು ವಿತರಣೆ ಮಾಡಲಾಗುವುದು ಎಂದು ಸಾಮಾಜಿಕ ಅರಣ್ಯ ಇಲಾಖೆಯ ಉಪ ಅರಣ್ಯ ಅಧಿಕಾರಿ ಫಿರೋಜ್ ಖಾನ್ ತಿಳಿಸಿದ್ದಾರೆ.