ಸಿದ್ದಾಪುರ, ಜೂ 5: ಅಮ್ಮತ್ತಿ ಹೋಬಳಿ ನಾಡು ಕಚೇರಿಯಲ್ಲಿ ಯು.ಪಿ.ಎಸ್ ಸೌಲಭ್ಯವಿಲ್ಲದೇ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ. ಅಮ್ಮತ್ತಿ ಹೋಬಳಿ ನಾಡಕಚೇರಿ ವ್ಯಾಪ್ತಿಗೆ ಹಲವಾರು ಗ್ರಾಮಗಳು ಸೇರ್ಪಡೆಗೊಂಡಿದ್ದು, ಈ ಭಾಗದ ಗ್ರಾಮಸ್ಥರು ತಮ್ಮ ಕೆಲಸ ಕಾರ್ಯಗಳಿಗೆ ಕಂದಾಯ ಇಲಾಖೆಗೆ ಸೇರಿದ ಅಟಲ್‍ಜೀ ಸೇವಾ ಕೇಂದ್ರಕ್ಕೆ ತೆರಳುತ್ತಾರೆ. ಆದರೆ ಇಲ್ಲಿನ ಗಣಕಯಂತ್ರಗಳಿಗೆ ವಿದ್ಯುತ್ ಸ್ಥಗಿತಗೊಂಡಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಯು.ಪಿ.ಎಸ್ ಸೌಲಭ್ಯ ಇಲ್ಲವಾಗಿ ಒಂದು ವರ್ಷ ಕಳೆದರೂ ಈವರೆಗೂ ಸೌಲಭ್ಯವನ್ನು ಒದಗಿಸಿಕೊಡದ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಂದಾಯ ಇಲಾಖೆಯ ಮೂಲಕ ಪಡೆದುಕೊಳ್ಳಬೇಕಾದ ಜಾಗದ ದಾಖಲಾತಿ ಮತ್ತು ಶಾಲಾ ಮಕ್ಕಳಿಗೆ ಅಗತ್ಯವಿರುವ ಜಾತಿ ಹಾಗೂ ಆದಾಯ ದೃಢೀಕರಣ ಪತ್ರ ಸೇರಿದಂತೆ ಇನ್ನಿತರ ದಾಖಲಾತಿಗಳನ್ನು ಪಡೆಯಲು ಕಷ್ಟವಾಗುತ್ತಿದೆ.
ಭರವಸೆ ಈಡೇರಿಲ್ಲ
ಕಳೆದ ಒಂದು ವರ್ಷದಿಂದ ಅಮ್ಮತ್ತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಅಮ್ಮತ್ತಿ ಹೋಬಳಿ ವ್ಯಾಪ್ತಿಯ ಸಾರ್ವಜನಿಕ ಕುಂದುಕೊರತೆಯ ಬಗ್ಗೆ ಸಾರ್ವಜನಿಕ ಸಭೆ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಗ್ರಾಮಸ್ಥರು ಮಾತನಾಡಿ ಅಮ್ಮತ್ತಿ ನಾಡು ಕಚೇರಿಯಲ್ಲಿರುವ ಯು.ಪಿ.ಎಸ್ ಸಮಸ್ಯೆ ಬಗ್ಗೆ ವಿವರಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಮುಂದಿನ ಒಂದು ತಿಂಗಳ ಒಳಗೆ ಹೊಸ ಯು.ಪಿ.ಎಸ್‍ಗಳನ್ನು ಕಲ್ಪಿಸಿಕೊಡಲಾಗುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೂ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿರುವುದಿಲ್ಲ. ಕೂಡಲೇ ಜಿಲ್ಲಾಧಿಕಾರಿಯವರು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.