ಮಡಿಕೇರಿ, ಜೂ. 4: ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ, ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ರಾಜ್ಯದ ಅಲ್ಪಸಂಖ್ಯಾತ ಸಮುದಾಯದವರು ತಮ್ಮ ಮಸೀದಿಗಳಲ್ಲಿ ದೈನಂದಿನ ಪ್ರಾರ್ಥನೆಗಳು, ಶುಕ್ರವಾರದ ವಿಶೇಷ ಪ್ರಾರ್ಥನೆಗಳು, ರಂಜಾನ್ ಮಾಹೆಯ ತರಾವಿಹ್ (ರಾತ್ರಿಯ ವಿಶೇಷ ಪ್ರಾರ್ಥನೆಗಳು) ಹಾಗೂ ರಂಜಾನ್ ಹಬ್ಬದ ಪ್ರಾರ್ಥನೆಗಳನ್ನು ತಮ್ಮ ತಮ್ಮ ಮನೆಗಳಲ್ಲಿಯೇ ಆಚರಿಸಿಕೊಂಡು, ಸರ್ಕಾರದ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಪರಿಪಾಲನೆ ಮಾಡಲಾಗಿದೆ.

ಪ್ರಾರ್ಥನಾ ಮಂದಿರಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀóಮ್ ಅವರು ಪ್ರಾರ್ಥನಾ ಮಂದಿರಗಳು ಪ್ರಾರ್ಥನೆಗೆ ಆವಕಾಶ ನೀಡುವ ನಿಟ್ಟಿನಲ್ಲಿ, ಪಾಲಿಸಬೇಕಾದ ಮಾರ್ಗಸೂಚಿಗಳ ಕುರಿತು ಗಣ್ಯ ಧಾರ್ಮಿಕ ಗುರುಗಳು, ಸಮಾಜ ಸೇವಕರು, ಮಸೀದಿಯ ಮುಖ್ಯಸ್ಥರು, ದರ್ಗಾ ಮತ್ತು ಪ್ರಾರ್ಥನ ಮಂದಿರಗಳ ಮುಖ್ಯಸ್ಥರೊಂದಿಗೆ ಸರ್ಕಾರದ ಮಾರ್ಗಸೂಚಿಗಳ ಬಗ್ಗೆ ಚರ್ಚಿಸಿದ್ದಾರೆ.

ಚರ್ಚಿಸಿದ ಬಳಿಕ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಮಸೀದಿಗಳು ಮತ್ತು ದರ್ಗಾಗಳು ಸಾರ್ವಜನಿಕರಿಗೆ ತೆರೆಯುವಾಗ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಅನುಸರಿಸಬೇಕಿದೆ. ಎಲ್ಲಾ ಮುಸಲ್ಲಿಗಳು (ಪ್ರಾರ್ಥಾರ್ತಿಗಳು) ತಮ್ಮ ಮನೆಗಳಿಂದಲೇ ವಜುವನ್ನು (ಶುದ್ಧಿತ್ವ) ಮಾಡಿಕೊಂಡು ಮಸೀದಿಗೆ ಬರುವುದು. ವಜುó ಕೊಳ (ಹೌಜ್ó) ಮಸೀದಿಯ ಆವರಣದಲ್ಲಿ ಇದ್ದಲ್ಲಿ, ಇದನ್ನು ಉಪಯೋಗಿಸದಂತೆ ಕ್ರಮ ಕೈಗೊಳ್ಳುವುದು ಹಾಗೂ ನಲ್ಲಿಗಳನ್ನು ಉಪಯೋಗಿಸುವುದು. ಶೌಚಾಲಯಗಳನ್ನು ಶುಚಿಯಾಗಿ ಇಡುವುದು ಹಾಗೂ ಅನಿವಾರ್ಯತೆ ಉಂಟಾದಲ್ಲಿ ಮಾತ್ರ ಬಳಸುವುದು. ಮಸೀದಿಯ ಒಳಗೆ ಮತ್ತು ಹೊರಗೆ ಪ್ರವೇಶಿಸಲು ಒಂದೇ ದ್ವಾರವನ್ನು ಇಡುವುದು. ಪ್ರತಿಯೊಂದು ಪ್ರಾರ್ಥನೆಯ ಮುನ್ನ ಪ್ರಾರ್ಥನ ಸಭಾಂಗಣಕ್ಕೆಲ್ಲಾ ಔಷಧಿಯನ್ನು ಸಿಂಪಡಿಸುವುದು.

ಎಲ್ಲಾ ಮುಸಲ್ಲಿಗಳು (ಪ್ರಾರ್ಥಾರ್ತಿಗಳು) ಪ್ರಾರ್ಥನೆ ಸಭಾಂಗಣಕ್ಕೆ ಪ್ರವೇಶಿಸುವ ಮೊದಲು ಥರ್ಮಲ್ ಸ್ಕ್ಯಾನರ್ ಮೂಲಕ ದೇಹದ ತಾಪಮಾನವನ್ನು ಪರೀಕ್ಷಿಸುವುದು. ಮಸೀದಿಗಳ ಒಳಗೆ ಪ್ರಾರ್ಥನಾ ಸಮಯದಲ್ಲಿ ಕನಿಷ್ಟ 1 ರಿಂದ 2 ಮೀಟರ್‍ನಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.

ಪ್ರತಿಯೊಬ್ಬ ಪ್ರಾರ್ಥಾರ್ಥಿಗಳು ಪ್ರಾರ್ಥನಾ ಚಾಪೆಯನ್ನು ತರುವುದು. 10 ರಿಂದ 15 ನಿಮಿಷದ ಒಳಗೆ ಕಡ್ಡಾಯ ಪ್ರಾರ್ಥನೆಯನ್ನು ಪೂರ್ಣಗೊಳಿಸು ವುದು (ಫರ್ಜಾ ನಮಾಜ್). ಮಸೀದಿಯಲ್ಲಿ ಎಲ್ಲಾ ಮುಸಲ್ಲಿಗಳು ಅಧಿಕ ಸಂಖ್ಯೆಯಲ್ಲಿ ಇದ್ದಲ್ಲಿ 2 ಜಮಾತ್‍ಗಳನ್ನು (ಎರಡು ಪ್ರಾರ್ಥನಾ ಸಭೆಗಳನ್ನು) ಆಯೋಜಿಸುವುದು.

ಎಲ್ಲಾ ಮುಸಲ್ಲಿಗಳು ತಮ್ಮ ಸುನ್ನತ್ ಹಾಗೂ ನಫೀಲ್ ಪ್ರಾರ್ಥನೆಗಳನ್ನು ತಮ್ಮ ಮನೆಗಳಲ್ಲಿಯೇ ಸಲ್ಲಿಸುವುದು. ಪ್ರಾರ್ಥನೆಯ ನಂತರ ಎಲ್ಲಾ ಮುಸಲ್ಲಿಗಳು ತಕ್ಷಣ ಮಸೀದಿಯಿಂದ ನಿರ್ಗಮಿಸುವುದು ಹಾಗೂ ಮಸೀದಿಯ ಆವರಣದಲ್ಲಿ ಯಾವುದೇ ತರಹದ ಚರ್ಚೆಗಳನ್ನು ನಿಷೇಧಿಸಿದೆ.

ಶುಕ್ರವಾರದ ವಿಶೇಷ ಪ್ರಾರ್ಥನೆಯ ಖುದ್ಬಾ (ಸೆರ್ಮಾನ್) ಆದಷ್ಟು ಸಂಕ್ಷಿಪ್ತವಾಗಿ ಮುಗಿಸಿ, ಪ್ರಾರ್ಥನೆಯನ್ನು 15 ರಿಂದ 20 ನಿಮಿಷಗಳಲ್ಲಿ ಪೂರ್ಣಗೊಳಿಸುವುದು. ಮಸೀದಿಗಳು ಹಾಗೂ ದರ್ಗಾ ಆವರಣದಲ್ಲಿ ಭಿಕ್ಷಾಟನೆಯಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಇರುವುದರಿಂದ ಭಿಕ್ಷಾಟನೆಯನ್ನು ನಿಷೇಧಿಸುವುದು.

ದರ್ಗಾಗಳಲ್ಲಿ ಪ್ರಸಾದ ನೀಡುವುದು ಹಾಗೂ ಸ್ವೀಕರಿಸುವುದನ್ನು ನಿಷೇಧಿಸಿದೆ. ಗೋರಿಗಳ ಮೇಲೆ ನಮಸ್ಕರಿಸುವುದರಿಂದ ಬೇರೊಬ್ಬರು ನಮಸ್ಕರಿಸಿದರೆ ಕೋವಿಡ್-19 ವೈರಾಣುಗಳು ವರ್ಗಾಯಿಸುವ ಭಯವಿದ್ದು ಇದನ್ನು ನಿಷೇಧಿಸುವುದು. ಅಪ್ಪಿಗೆ ಮತ್ತು ಕೈ ಕುಲುಕುವುದನ್ನು ಆದಷ್ಟು ತಪ್ಪಿಸುವುದು. ಈ ಮಾರ್ಗಸೂಚಿಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಸಾರ್ವಜನಿಕರ ಆರೋಗ್ಯ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊರಡಿಸಿದ್ದು ಇದರಲ್ಲಿ ಯಾವುದೇ ಧಾರ್ಮಿಕ ಹಾಗೂ ವೈಯಕ್ತಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಇರುವುದಿಲ್ಲ. ಈ ಮಾರ್ಗಸೂಚಿಯನ್ನು ಪರಿಸ್ಥಿತಿ ಉತ್ತಮಗೊಳ್ಳುವವರೆಗೆ ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುವಂತೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ತಿಳಿಸಿದ್ದಾರೆ.