ಮಡಿಕೇರಿ, ಜೂ. 4: ಜಂಬೂರಿನಲ್ಲಿ ಮನೆ ಹಸ್ತಾಂತರದ ವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಆಹ್ವಾನಿಸಲಿಲ್ಲ. ಕುಮಾರಸ್ವಾಮಿಯವರ ಕಾಳಜಿಯಿಂದ ಸಂತ್ರಸ್ತರಿಗೆ ಮನೆಗಳು ನಿರ್ಮಾಣವಾಗಿದ್ದು, ಅದನ್ನು ಬಿಜೆಪಿ ತನ್ನ ಸಾಧನೆ ಎಂದು ಹೇಳಿಕೊಳ್ಳುತ್ತಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಜೆಡಿಎಸ್ ವತಿಯಿಂದ ಅಧ್ಯಕ್ಷ ಕೆ.ಎಂ. ಗಣೇಶ್ ನೇತೃತ್ವದಲ್ಲಿ ಕಾರ್ಯಕರ್ತರಿಂದ ಜಂಬೂರಿನಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.

ಬಳಿಕ ಜೆಡಿಎಸ್‍ನ ಪ್ರತಿಭಟನೆ ಕುರಿತು ತಮ್ಮ ಭಾಷಣದಲ್ಲಿ ಹರಿಹಾಯ್ದ ಶಾಸಕ ರಂಜನ್, ಕುಮಾರಸ್ವಾಮಿಯವರ ಸರಕಾರ ಇದ್ದಾಗ ಮನೆ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಇದೀಗ ಬಿಜೆಪಿ ಅಧಿಕಾರಾವಧಿಯಲ್ಲಿ ಉದ್ಘಾಟನೆಗೊಳ್ಳುತ್ತಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಹಲವಷ್ಟು ಅಭಿವೃದ್ಧಿ ಕಾರ್ಯಗಳಲ್ಲಿ ಈ ರೀತಿಯ ಬದಲಾವಣೆಗಳು ಆಗುತ್ತಿರುತ್ತದೆ. ಹೀಗಿರುವಾಗ ಕುಮಾರಸ್ವಾಮಿಯವರನ್ನು ಆಹ್ವಾನಿಸಬೇಕೆಂದು ಪ್ರತಿಭಟಿಸುವುದು ಎಷ್ಟು ಸರಿ? ಜೆಡಿಎಸ್ ಅಧ್ಯಕ್ಷರಿಗೆ ಸಾಮಾನ್ಯ ಜ್ಞಾನವೆಂಬುದೇ ಇಲ್ಲವೇ ಎಂದು ಟೀಕಿಸಿದರು. ಇಂತಹ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದರು.