ಗೋಣಿಕೊಪ್ಪಲು, ಜೂ. 4: ಹುಲಿ, ಚಿರತೆಯ ಹಾವಳಿಯಿಂದ ರೈತರ ಜಾನುವಾರುಗಳು ಬಲಿಯಾಗುತ್ತಿರುವಂತೆಯೇ ಇದೀಗ ವಿಚಿತ್ರ ಪ್ರಾಣಿಯೊಂದು ಹಸು ಹಾಗೂ ಕರುವನ್ನು ಕೊಂದು ಹಾಕಿರುವ ಘಟನೆ ಪೊನ್ನಂಪೇಟೆ ಹೋಬಳಿ ಕಿರುಗೂರು ಪಂಚಾಯಿತಿ ವ್ಯಾಪ್ತಿಯ ಸಿ. ತಿಮ್ಮಯ್ಯ ಎಂಬವರ ಕಾಫಿ ತೋಟದಲ್ಲಿ ಸಂಭವಿಸಿದೆ. ಮಂಗಳವಾರ ಸಂಜೆ ವೇಳೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಹಸು ಹಾಗೂ ಕರುವು ಬಲಿಯಾಗಿರುವ ವಿಷಯ ತಿಳಿದ ಹಸುವಿನ ಮಾಲೀಕರು ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಎಂದಿನಂತೆ ಹಸುವನ್ನು ಮುಂಜಾನೆ 7 ಗಂಟೆ ಸುಮಾರಿಗೆ ತಮ್ಮ ತೋಟದಲ್ಲಿ ಮೇಯಲು ಬಿಟ್ಟಿದ್ದರು. ಸಹಜವಾಗಿ ಪ್ರತಿನಿತ್ಯ ಹಸು ಹಾಗೂ ಕರು ಕೊಟ್ಟಿಗೆಗೆ ತಾವಾÁಗಿಯೇ ವಾಪಸ್ಸಾಗುತ್ತಿದ್ದವು. ಮಂಗಳವಾರ ಹಸುವು ಕೊಟ್ಟಿಗೆಗೆ ಬಾರದಿರುವುದನ್ನು ಮನಗಂಡ ಕಾರ್ಮಿಕ ಹಸು ಹಾಗೂ ಕರುವನ್ನು ಹುಡುಕುತ್ತಾ ಕಾಫಿ ತೋಟಕ್ಕೆ ತೆರಳಿದ್ದಾನೆ. ಈ ಸಂದರ್ಭ ಹಸು ಸತ್ತು ಬಿದ್ದಿರುವುದನ್ನು ಕಂಡು ಕರುವನ್ನು ಹುಡುಕಿದ್ದಾನೆ. ಅನತಿ ದೂರದಲ್ಲಿ ಕರು ಕೂಡ ಸತ್ತು ಬಿದ್ದಿರುವುದು ಕಂಡು ಮಾಲೀಕರಿಗೆ ಮಾಹಿತಿ ನೀಡಿದ್ದಾನೆ. ಮಾಲೀಕರು ತೋಟಕ್ಕೆ ತೆರಳಿ ಪರಿಶೀಲಿಸಿದಾಗ ಹಸು ಹಾಗೂ ಕರುವಿನ ಕುತ್ತಿಗೆ ಭಾಗದಲ್ಲಿ ವಿಚಿತ್ರ ರೀತಿಯಲ್ಲಿ ಗಾಯಗಳಾಗಿರುವುದು ಕಂಡು ಬಂದಿದೆ. ಕೂಡಲೇ ಪೊನ್ನಂಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಪೊನ್ನಂಪೇಟೆ ಠಾಣಾಧಿಕಾರಿ ಡಿ. ಕುಮಾರ್, ಪೊನ್ನಂಪೇಟೆ ಪಶುವೈದ್ಯಾಧಿಕಾರಿ ಚಂದ್ರಶೇಖರ್ ಅವರಿಂದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಇದರೊಂದಿಗೆ ಮೇಯಲು ಬಿಟ್ಟಿದ್ದ ನಾಲ್ಕು ತಿಂಗಳ ಮತ್ತೊಂದು ಕರು ನಾಪತ್ತೆಯಾಗಿರು ವುದು ಅಚ್ಚರಿ ಮೂಡಿಸಿದೆ. ತೋಟದಲ್ಲಿ ಕರುವಿನ ಹುಡುಕಾಟ ನಡೆಸಿದರೂ ಎಲ್ಲಿಯೂ ಕೂಡ ಕರು ಕಂಡು ಬಂದಿಲ್ಲ.

ಮೇಲ್ನೋಟಕ್ಕೆ ಯಾವುದೋ ಕಾಡು ಪ್ರಾಣಿ ಹಸು ಹಾಗೂ ಕರುವಿನ ಮೇಲೆ ದಾಳಿ ನಡೆಸಿರುವ ಬಗ್ಗೆ ಕಂಡು ಬರುತ್ತಿದೆ. ಮರಣೋತ್ತರ ಪರೀಕ್ಷೆಯ ನಂತರ ಸ್ಪಷ್ಟ ವಿವರ ಲಭಿಸುವುದಾಗಿ ವೈದ್ಯರು ‘ಶಕ್ತಿ’ಗೆ ಮಾಹಿತಿ ನೀಡಿದರು.

-ಹೆಚ್.ಕೆ. ಜಗದೀಶ್