ಗೋಣಿಕೊಪ್ಪಲು, ಜೂ. 4: ಇತ್ತೀಚೆಗೆ ಸುರಿಯುತ್ತಿರುವ ಮಳೆಯ ಹಿನ್ನಲೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಪೌರ ಕಾರ್ಮಿಕರು ವಾಸಿಸುತ್ತಿರುವ ವಸತಿ ಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ಹಲವು ವರ್ಷಗಳಿಂದ ಪೌರ ಕಾರ್ಮಿಕರು ವಾಸಿಸುತ್ತಿರುವ ವಸತಿ ಗೃಹಗಳೊಳಗೆ ಮಳೆಗಾಲ ಸಂದರ್ಭ ನೀರು ನುಗ್ಗಿ ಕಷ್ಟ ಎದುರಿಸುತ್ತಿದ್ದರು. ಇದರಿಂದ ಎಚ್ಚೆತ್ತುಕೊಂಡ ಪಂಚಾಯಿತಿ ಈ ಬಾರಿ ಪರಿಶಿಷ್ಟ ಜಾತಿ, ವರ್ಗಗಳ ಮೀಸಲಾತಿಯ ಶೇ.20ರ ಅನುದಾನದಲ್ಲಿ ಪೌರ ಕಾರ್ಮಿಕರ ವಸತಿ ಗೃಹಗಳನ್ನು ದುರಸ್ತಿ ಗೊಳಿಸಲು ಪಂಚಾಯಿತಿ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಂಡಿದ್ದರು.

ಮುಂದಿನ ದಿನಗಳಲ್ಲಿ ಮಳೆಯ ಮುನ್ಸೂಚನೆ ಹೆಚ್ಚಾಗಿ ಇರುವ ಕಾರಣ ಕೂಡಲೇ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಕೈಗೊಳ್ಳಬೇಕೆಂದು ಪಿಡಿಒ ಶ್ರೀನಿವಾಸ್ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.

ಭೇಟಿಯ ಸಂದರ್ಭ ಪಂಚಾಯಿತಿ ಸದಸ್ಯೆ ಮಂಜುಳ, ಪಂಚಾಯಿತಿ ಸಿಬ್ಬಂದಿಗಳಾದ ನವೀನ್, ಸತೀಶ್ ಮುಂತಾದವರು ಹಾಜರಿದ್ದರು.