ಮಡಿಕೇರಿ, ಜೂ. 4: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುವೆರ ಜನಪದ ಕೂಟದ ಸಹಕಾರದೊಂದಿಗೆ ಕೊಡಗು ಜಿಲ್ಲೆಯಲ್ಲಿ ತುಳು ಲಿಪಿ ಕಲಿಸುವ ಆನ್‍ಲೈನ್ ಪಾಠವನ್ನು ಆರಂಭಿಸಲಾಗುವುದು ಎಂದು ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಪಿ.ಎಂ. ರವಿ ತಿಳಿಸಿದ್ದಾರೆ.

ಕೆಲವು ವರ್ಷಗಳ ನಂತರ ಅನೇಕ ತುಳು ವಿದ್ವಾಂಸÀರ ಸಂಶೋಧನೆಯ ಶ್ರಮದ ಫಲವಾಗಿ ತುಳು ಲಿಪಿ ಚಾಲ್ತಿಯಲ್ಲಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸುಮಾರು 42 ಶಾಲೆಗಳಲ್ಲಿ ತುಳು ಭಾಷೆಯನ್ನು 3ನೇ ಭಾಷೆಯನ್ನಾಗಿ ಕಲಿಸಲಾಗುತ್ತಿದೆ. ತುಳು ಲಿಪಿ ಕಲಿಸಲು ಪರಿಣಿತ ಶಿಕ್ಷಕರಿದ್ದು, ವಿದ್ಯಾರ್ಥಿಗಳು ಅತೀ ಉತ್ಸಾಹದಿಂದ ತುಳು ಲಿಪಿಯನ್ನು ಕಲಿಯುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲು ತುಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ತುಳು ಭಾಷೆಯ ಬೆಳವಣಿಗೆಗೆ ಮತ್ತು ಸಂಸ್ಕøತಿಯ ಉಳಿವಿಗಾಗಿ ತುಳು ಲಿಪಿಯನ್ನು ಕಲಿಸುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಆನ್‍ಲೈನ್ ಮೂಲಕ ನುರಿತ ಶಿಕ್ಷಕರ ಸಹಕಾರದೊಂದಿಗೆ ತುಳು ಲಿಪಿಯನ್ನು ಕಲಿಸಿಕೊಡಲಾಗುವುದು. ಆಸಕ್ತ ತುಳು ಭಾಷಿಕರು ಯಾವುದೇ ವಯಸ್ಸಿನ ಮಿತಿ ಇಲ್ಲದೆ ತಮ್ಮ ಹೆಸರನ್ನು ನೋಂದಾಯಿಸಲು ಮೊ.ಸಂ. 99720 73295 ನ್ನು ಸಂಪರ್ಕಿಸಬಹುದಾಗಿದೆ.

ಕಲಾವಿದರಿಗೆ ಆರ್ಥಿಕ ನೆರವು : ಲಾಕ್‍ಡೌನ್‍ನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಅನೇಕ ತುಳು ಕಲಾವಿದರಿಗೆ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್ ಸಾರ್ ನೇತೃತ್ವದಲ್ಲಿ 600ಕ್ಕೂ ಹೆಚ್ಚು ಕಿಟ್‍ಗಳನ್ನು ವಿತರಿಸಲಾಗಿದೆ ಎಂದು ರವಿ ತಿಳಿಸಿದ್ದಾರೆ. ಕಲೆಯನ್ನೇ ನಂಬಿ ಜೀವನ ಸಾಗಿಸುತ್ತಾ ಸಂಕಷ್ಟಕ್ಕೆ ಸಿಲುಕಿದ ಜಿಲ್ಲೆಯ ಅನೇಕ ಬಡ ಕಲಾವಿದರ ಪಟ್ಟಿಯನ್ನು ಸರಕಾರದ ನಿರ್ದೇಶನದಂತೆ ಅಕಾಡೆಮಿಯ ಮೂಲಕ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.