ಸದÀ್ಯಕ್ಕೆ ಶಾಲೆಗಳು ಆರಂಭವಾಗಲ್ಲ

ಬೆಂಗಳೂರು, ಜೂ. 4: ಸದ್ಯಕ್ಕೆ ಶಾಲೆ ಆರಂಭಿಸುವುದಿಲ್ಲ, ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರ ಮೇ 30 ರಂದು ಶಾಲೆಗಳನ್ನು ಆರಂಭಿಸುವ ಬಗ್ಗೆ ಪೋಷಕರ ಅಭಿಪ್ರಾಯವನ್ನು ಕೇಳಿ ಎಂದು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಈ ನಿಟ್ಟಿನಲ್ಲಿ ನಾವು ರಾಜ್ಯದಲ್ಲಿರುವ ಶಾಲೆಗಳಿಗೆ ಸುತ್ತೋಲೆ ಕಳುಹಿಸಿ ಪೋಷಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದೇವೆ ಎಂದು ಫೇಸ್‍ಬುಕ್‍ನಲ್ಲಿ ಅವರು ತಿಳಿಸಿದ್ದಾರೆ. ಇದೇ ಜೂನ್ 10, 11, 12 ರಂದು ಎಲ್ಲ ಶಾಲೆಗಳಲ್ಲಿ ಪೋಷಕರ ಸಭೆ ನಡೆಯಲಿದೆ. ಪೋಷಕರ ಅಭಿಪ್ರಾಯಗಳು ಕ್ರೋಢಿಕರಣವಾಗಿ ಜೂನ್ 15ಕ್ಕೆ ಸರ್ಕಾರವನ್ನು ತಲುಪಬಹುದು. ನಂತರ ಶಾಲೆ ಆರಂಭಿಸಬೇಕೋ? ಬೇಡವೋ ಎಂಬದನ್ನು ನಿರ್ಧಾರ ಮಾಡಲಾಗುವುದು. ಜುಲೈ 1 ರಿಂದ ಶಾಲೆಯನ್ನು ತೆರೆಯುವುದಿಲ್ಲ. ಅಭಿಪ್ರಾಯ ಸಂಗ್ರಹವಷ್ಟೇ ಎಂದು ಸ್ಪಷ್ಟ ಪಡಿಸಿದರು. ಈ ಸಂದರ್ಭದಲ್ಲಿ ಎರಡು ಅಭಿಪ್ರಾಯಗಳು ವ್ಯಕ್ತವಾಗಿದೆ. ಕೊರೊನಾ ದೀರ್ಘ ಕಾಲ ಇದ್ದರೆ ಅಲ್ಲಿಯವರೆಗೆ ಶಾಲೆಯನ್ನು ಮುಂದೂಡಬೇಕೇ ಅಥವಾ ಕೊರೊನಾದ ಜೊತೆಗೆ ನಾವು ಬದುಕಬೇಕೇ ಎಂಬ ಪ್ರಶ್ನೆ ಎದ್ದಿದೆ. ಈಗಾಗಲೇ ಚಿಕನ್ ಗುನ್ಯಾ ರೀತಿಯ ಕಾಯಿಲೆ ಜೊತೆ ಬದುಕುತ್ತಿದ್ದೇವೆ. ಇದೇ ರೀತಿಯಾಗಿ ಕೊರೊನಾ ಜೊತೆ ಬದುಕಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆಯೂ ಎದ್ದಿದೆ. ಇದರ ಜೊತೆಯಲ್ಲಿ ಶಾಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವುದು ಹೇಗೆ ಎಂಬ ಬಗ್ಗೆ ನಾವು ಚರ್ಚಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ಒಂದೇ ದಿನ ನಾಲ್ವರು ಬಲಿ

ಬೆಂಗಳೂರು, ಜೂ.4 : ರಾಜ್ಯದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಮುಂದುವರೆಸಿದ್ದು, ಮಹಾಮಾರಿಗೆ ಗುರುವಾರ ಒಂದೇ ದಿನ ನಾಲ್ವರು ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆ 57ಕ್ಕೆ ಏರಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ ಇಬ್ಬರು ಹಾಗೂ ದಾವಣಗೆರೆ ಮತ್ತು ಗದಗದಲ್ಲಿ ತಲಾ ಒಬ್ಬರು ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದಾರೆ. ಇನ್ನು ಸೋಂಕಿತರ ಸಂಖ್ಯೆಯೂ ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇಂದು ಒಂದೇ ದಿನ ಬರೋಬ್ಬರಿ 257 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4320ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 2651 ಸಕ್ರಿಯ ಪ್ರಕರಣಗಳಿದ್ದು, 13 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಉಡುಪಿಯಲ್ಲಿ 92 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಬೆಂಗಳೂರು ನಗರದಲ್ಲಿ 9, ರಾಯಚೂರಿನಲ್ಲಿ 88, ಮಂಡ್ಯದಲ್ಲಿ 15, ಬೆಳಗಾವಿಯಲ್ಲಿ 12, ಹಾಸನದಲ್ಲಿ 15, ದಾವಣಗೆರೆಯಲ್ಲಿ 13, ಚಿಕ್ಕಬಳ್ಳಾಪುರದಲ್ಲಿ 2, ದಕ್ಷಿಣ ಕನ್ನಡದಲ್ಲಿ 4, ವಿಜಯಪುರ, ಮೈಸೂರು, ಬಳ್ಳಾರಿಯಲ್ಲಿ ತಲಾ 1, ಗದಗದಲ್ಲಿ 2, ತುಮಕೂರಿನಲ್ಲಿ 1, ಹಾವೇರಿಯಲ್ಲಿ 1 ಪ್ರಕರಣ ದೃಢಪಟ್ಟಿದೆ.

ಕ್ವಾರಂಟೈನ್ ನಿಯಮ ಮತ್ತಷ್ಟು ಕಠಿಣ

ಬೆಂಗಳೂರು, ಜೂ. 4 : ರಾಜ್ಯದಲ್ಲಿ ಹೊರ ರಾಜ್ಯದವರಿಂದಲೇ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಕ್ವಾರಂಟೈನ್ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದೆ. ಮಹಾರಾಷ್ಟ್ರದಿಂದ ಬಂದವರಿಗೆ ಏಳು ದಿನಗಳ ಸಾಂಸ್ಥಿಕ ಮತ್ತು 7 ದಿನಗಳ ಗೃಹ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಬಳಿಕ ಇವರಿಗೆ ಸೋಂಕು ಕಂಡು ಬಂದಲ್ಲಿ 21 ದಿನಗಳ ಕಾಲ ಕ್ವಾರಂಟೈನ್‍ನಲ್ಲಿ ಇರಬೇಕು ಎನ್ನುವ ನಿಯಮ ಜಾರಿಗೆ ತರಲಾಗಿದೆ. ಕ್ವಾರಂಟೈನ್ ಕುರಿತ ಪರಿಷ್ಕೃತ ನಿಯಮಗಳ ಮಾರ್ಗಸೂಚಿಯನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಹೊರಡಿಸಿದ್ದು, ಎಲ್ಲೆಡೆ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ನಿರ್ದೇಶನ ನೀಡಿದ್ದಾರೆ. ಹೊರ ರಾಜ್ಯದಿಂದ ಬಂದವರ ಮುಂಗೈಗೆ ಕಡ್ಡಾಯವಾಗಿ ಕ್ವಾರಂಟೈನ್ ಮುದ್ರೆ ಹಾಕಬೇಕು. ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು, ಎಲ್ಲಾ ಅಂಗಡಿಗಳು, ವಾಣಿಜ್ಯ ಮಳಿಗೆಗಳು, ಕಚೇರಿಗಳು, ಮಾಲ್‍ಗಳು, ಧಾರ್ಮಿಕ ಪ್ರದೇಶಗಳು, ಹೊಟೇಲ್‍ಗಳಲ್ಲಿ ಯಾವುದೇ ವ್ಯಕ್ತಿ ಪ್ರವೇಶಿಸುವ ಮುನ್ನ ಮುಂಗೈಗೆ ಕ್ವಾರಂಟೈನ್ ಮುದ್ರೆ ಹಾಕಲಾಗಿದೆಯೇ ಎನ್ನುವುದನ್ನು ಪ್ರವೇಶ ದ್ವಾರದಲ್ಲೇ ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು. ನಿಯಮಗಳನ್ನು ಮೀರಿ ಹೊರ ರಾಜ್ಯದ ವ್ಯಕ್ತಿಗಳು ಅಂಗಡಿ ಮುಂಗಟ್ಟುಗಳನ್ನು ಪ್ರವೇಶಿಸಿದರೆ ತಕ್ಷಣವೇ ಪೊಲೀಸ್ ಸಹಾಯವಾಣಿ 100 ಕ್ಕೆ ಕರೆ ಮಾಡಬೇಕು ಎಂದು ಹೇಳಿದೆ. ಇನ್ನು ಸಾಮಾನ್ಯ ನಾಗರಿಕರು, ವಸತಿ ಸಂಕಿರ್ಣಗಳ ವಸತಿ ಕಲ್ಯಾಣ ಸಮಿತಿ ಸದಸ್ಯರು ಸಹ ಈ ರೀತಿಯ ಉಲ್ಲಂಘನೆಗಳು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ಕ್ವಾರಂಟೈನ್ ಅವಧಿಯಲ್ಲಿ ಹೊರ ರಾಜ್ಯದವರು ಮನೆಗಳಲ್ಲಿಯೇ ಇರಬೇಕು ಎಂದು ಸೂಚಿಸಲಾಗಿದೆ.

960 ವಿದೇಶಿಗರಿಗೆ 10 ವರ್ಷ ನಿಷೇಧ

ನವದೆಹಲಿ, ಜೂ.4 : ತಬ್ಲಿಘಿ ಜಮಾತ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ 960 ವಿದೇಶಿ ಪ್ರಜೆಗಳಿಗೆ ಭಾರತ ಪ್ರವೇಶಕ್ಕೆ 10 ವರ್ಷಗಳ ಕಾಲ ನಿಷೇಧ ಹೇರಿ ಕೇಂದ್ರ ಸರ್ಕಾರ ಆದೇಶಿಸಿದೆ. ಈ ವಿದೇಶಿ ಪ್ರಜೆಗಳು ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹೊರಡಿಸಲಾದ ವೀಸಾ ಷರತ್ತುಗಳನ್ನು ಉಲ್ಲಂಘಿಸಿ, ಮಿಷನರಿ ಚಟುವಟಿಕೆಗಳಲ್ಲಿ ಅಕ್ರಮವಾಗಿ ಭಾಗವಹಿಸಿದ್ದು ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಏಪ್ರಿಲ್ ನಲ್ಲಿ ನಿಜಾಮುದ್ದೀನ್ ಮರ್ಕಜ್ ಧಾರ್ನಿಕ ಸಭೆಯಲ್ಲಿ ಪಾಲ್ಗೊಂಡಿದ್ದ ನೂರಾರು ತಬ್ಲಿಘಿ ಜಮಾತ್ ಸದಸ್ಯರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿತ್ತು. ಆ ನಂತರ ಅವರ ದೇಶಾದ್ಯಂತದ ಸಂಚಾರದ ಪರಿಣಾಮ ದೇಶದ ನಾನಾ ಭಾಗಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿದ್ದವು. ನಿಜಾಮುದ್ದೀನ್‍ನಲ್ಲಿನ ಧಾರ್ಮಿಕ ಸಭೆಯಲ್ಲಿ ವಿದೇಶಿ ಪ್ರಜೆಗಳು ಸೇರಿದಂತೆ ಕನಿಷ್ಟ 9,000 ಜನರು ಭಾಗವಹಿಸಿದ್ದರು. ಆ ನಂತರದ ದಿನಗಳಲ್ಲಿ ದೇಶದಲ್ಲಿ ಹಾಜರಿದ್ದ ಅನೇಕರು ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸಿದರು.ಪೊಲೀಸರ ಪ್ರಕಾರ, ಈ ವಿದೇಶಿ ಪ್ರಜೆಗಳು ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಪ್ರವೇಶಿಸಿದ್ದರು ಮತ್ತು ಮರ್ಕಜ್ ನಲ್ಲಿ ನಡೆದ ಕೂಟದಲ್ಲಿ ಅಕ್ರಮವಾಗಿ ಭಾಗವಹಿಸಿದ್ದರು.

ಗಣಿಗಾರಿಕೆಗೆ ಪರವಾನಗಿ ಕಡ್ಡಾಯ

ಬೆಂಗಳೂರು, ಜೂ.4 : ಪಟ್ಟಾ ಜಮೀನಿನಲ್ಲಿ ಗಣಿಗಾರಿಕೆ ನಡೆಸಲು ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ತಿದ್ದುಪಡಿಯನ್ನು ಹೈಕೋರ್ಟ್ ಗುರುವಾರ ಎತ್ತಿ ಹಿಡಿದಿದೆ. ‘ಕರ್ನಾಟಕ ಕಿರು ಗಣಿಗಾರಿಕೆ ರಿಯಾಯ್ತಿ ಕಾಯ್ದೆ'ಗೆ ನಿಯಮ 32ರ ಅಡಿ ತಿದ್ದುಪಡಿ ತಂದು ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಪ್ರಶ್ನಿಸಿ ಖಾಲಿದ್ ಪಾಷಾ ಸೇರಿ 250ಕ್ಕೂ ಜನರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಲಾಗಿತ್ತು. ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ಪೀಠ ತೀರ್ಪು ಪ್ರಕಟಿಸಿದೆ. ಜಮೀನಿನ ಒಡೆತನ ಹೊಂದಿರುವ ವ್ಯಕ್ತಿಗಳಿಗೆ ಅದರೊಳಗಿನ ಖನಿಜಗಳ ಮೇಲೂ ಹಕ್ಕಿದೆ. ಅದಕ್ಕಾಗಿ ಸರ್ಕಾರದಿಂದ ಪರವಾನಗಿ ಪಡೆಯಬೇಕಾಗಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.