ಮಡಿಕೇರಿ, ಜೂ, 4: ಯುಎಇಯ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಕೊಡಗಿನಲ್ಲಿ ಏಪ್ರಿಲ್‍ನಲ್ಲಿ ನಡೆಯಬೇಕಿದ್ದ ಏಳು ಮಂದಿ ಬಡ ಕನ್ಯೆಯರ ಸಾಮೂಹಿಕ ವಿವಾಹ ಲಾಕ್‍ಡೌನ್‍ನಿಂದ ಸ್ಥಗಿತವಾಗಿದ್ದು, ಈ ಹಿನ್ನೆಲೆಯಲ್ಲಿ ಸಂಘÀಟನೆಯ ವತಿಯಿಂದ ಅವರ ಸರಳ ವಿವಾಹಕ್ಕೆ ಅನುಕೂಲವಾಗುವಂತೆ ಚಿನ್ನಾಭರಣ ಸೇರಿದಂತೆ ಅಗತ್ಯ ನೆರವನ್ನು ಅವರವರ ಮನೆಗಳಿಗೆ ತಲುಪಿಸಲಾಗುವುದೆಂದು ಸಂಘÀಟನೆಯ ಉಪಾಧ್ಯಕ್ಷ ಎ.ಎಂ. ಹಂಸ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನೆಯ ವತಿಯಿಂದ ಕಳೆದ ವರ್ಷ 6 ಮಂದಿ ಬಡ ಕನ್ಯೆಯರ ಸಾಮೂಹಿಕ ವಿವಾಹವನ್ನು ಮೂರ್ನಾಡಿನಲ್ಲಿ ಆಯೋಜಿಸಲಾಗಿತ್ತು. ಈ ಬಾರಿ 7 ಮಂದಿಯ ವಿವಾಹವನ್ನು ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಏಪ್ರಿಲ್‍ನಲ್ಲಿ ನಡೆಯ ಬೇಕಿದ್ದ ಕಾರ್ಯಕ್ರಮ ಲಾಕ್‍ಡೌನ್ ಘೋಷಣೆ ಯಾದ ಹಾಗೂ ಮುಂದುವರೆದಿರುವ ಹಿನ್ನೆಲೆಯಲ್ಲಿ ರದ್ದುಗೊಂಡಿತೆಂದು ತಿಳಿಸಿದರು. ಈ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ಪ್ರತಿ ಜೋಡಿಗೆ ಚಿನ್ನಾಭರಣ, ವಸ್ತ್ರಗಳು, ವಾಚ್‍ನ್ನು ನೀಡಲು ದಾನಿಗಳು ನೆರವನ್ನು ನೀಡಿದ್ದಾರೆ. ಇದೀಗ ಈ ವಿವಾಹಗಳು ಪ್ರತ್ಯೇಕವಾಗಿ ಅವರವರ ಮನೆಗಳಲ್ಲೇ ಸರಳವಾಗಿ ನಡೆಯಲಿರುವುದರಿಂದ ಸಂಘಟನೆಯ ವತಿಯಿಂದ ಈ ಎಲ್ಲಾ ನೆರವನ್ನು ಅವರ ಮನೆಗಳಿಗೆ ತಲುಪಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಸಂಘÀಟನೆಯು ಕೊಡಗಿನಲ್ಲಿ ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಸಮಾಜ ಬಾಂಧವರನ್ನು ಗುರುತಿಸಿ ಸಹಾಯ ಹಸ್ತವನ್ನು ನೀಡುತ್ತಲೇ ಬಂದಿದೆ. ಕಳೆದ ಬಾರಿ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭದಲ್ಲೂ ಹಲವು ಕುಟುಂಬಗಳಿಗೆ ಆರ್ಥಿಕವಾಗಿ ಹಾಗೂ ಆಹಾರ ಧಾನ್ಯಗಳನ್ನು ನೀಡುವ ಮೂಲಕ ನೆರವು ನೀಡಲಾಗಿದೆ ಎಂದರು. ಸಂಘÀಟನೆಯ ನಿರ್ದೇಶಕ ಹಾಗೂ ಜಿ.ಪಂ. ಸದಸ್ಯ ಅಬ್ದುಲ್ ಲತೀಫ್ ಮಾತನಾಡಿ, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷÀನ್ ಅರ್ಪಿಸಿದ ಆಂಬ್ಯುಲೆನ್ಸ್ ಜಿಲ್ಲೆಯ ಹಲವು ಕಡೆ ಸೇವೆಗಳನ್ನು ನೀಡುತ್ತಿದೆ. ಬಡವರಿಗೆ ಉಚಿತವಾಗಿ ಹಾಗೂ ಉಳಿದವರಿಗೆ ಕೇವಲ ಡೀಸೆಲ್ ವೆಚ್ಚವನ್ನು ಪಡೆದು ಸೇವೆಯನ್ನು ಒದಗಿಸಲಾಗುತ್ತಿದ್ದು, ತುರ್ತು ಸಂದರ್ಭಗಳಲ್ಲಿ ಮೊ.9448505011 ನ್ನು ಸಂಪರ್ಕಿಸಬಹುದೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಸದಸ್ಯರಾದ ಅಬ್ದುಲ್ಲಾ ಬಲಮುರಿ, ಸಲಾಂ ಕೊಂಡಂಗೇರಿ, ಹಾರಿಸ್ ಕೊಟ್ಟಮುಡಿ, ಮುಜಾಮಿಲ್ ಚಾಮಿಯಾಲ ಉಪಸ್ಥಿತರಿದ್ದರು.