ಸುಂಟಿಕೊಪ್ಪ, ಜೂ. 3: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಗ್ರೇಡ್ 1 ಆಗಿದ್ದು ಅಭಿವೃದ್ಧಿ ಪಥದತ್ತ ಸಾಗಲು ಎಲ್ಲಾ ಅಭಿವೃದ್ಧಿ ಸಂಪನ್ಮೂಲಗಳು ಈ ಪಂಚಾಯಿತಿಗೆ ಇದೆ. ಕುಗ್ರಾಮ ಹಾಡಿಗಳು ಇಲ್ಲಿ ಕಂಡು ಬರುವುದಿಲ್ಲ, ಆದರೆ ಜನರಿಗೆ ಮೂಲಭೂತ ಸೌಲಭ್ಯ ಒದಗಿಸಬೇಕಾದ ಪಂಚಾಯಿತಿ ನಿರ್ಲಕ್ಷ್ಯದಿಂದ ಬೀದಿ ದೀಪ ಹಾಗೂ ಮನೆ ವಿದ್ಯುತ್ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದ ಬಡಜನತೆಯ ಪಾಡು ಅಯೋಮಯವಾಗಿದೆ. ಸದ್ಯಕ್ಕೆ ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಪಡೆದು ಮಾಸಿಕ ಸರಾಸರಿ ರೂ. 800ಕ್ಕೂ ಅಧಿಕ ಬಿಲ್ ಪಾವತಿಸುವ ದುಸ್ಥಿತಿ ಬಂದಿದೆ.

ಸುಂಟಿಕೊಪ್ಪ ಮಾದಾಪುರ ಸ್ವಸ್ಥ ಶಾಲೆಯ ಬಳಿಯಲ್ಲಿ 11 ಕ್ಕೂ ಮಿಕ್ಕಿ ವಾಸದ ಮನೆಗಳಿವೆ. ಅದರಲ್ಲಿ 4 ಮನೆಗಳು ಒಳಭಾಗದಲ್ಲಿದ್ದು, ಈ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯಬೇಕಾದರೆ ರಸ್ತೆಯ ಬದಿ ಬೀದಿದೀಪ ಸಂಪರ್ಕ ಬರಬೇಕು ಆದರೆ ಮಾತ್ರ ಮನೆಗಳಿಗೆ ಸಂಪರ್ಕ ಹೊಂದಲು ಸಾಧ್ಯ. ಈ ವಿದ್ಯುತ್ ದೀಪಕ್ಕಾಗಿ ಮನೆ ಮಂದಿ ಸಂಬಂಧಿಸಿದ ಇಲಾಖೆಗಳಲ್ಲಿ ಅರ್ಜಿ ಸಲ್ಲಿಸುತ್ತಾ ಬರುತ್ತಿದ್ದಾರೆ. ಸುಂಟಿಕೊಪ್ಪದ ಈ ಹಿಂದಿನ ಪಿಡಿಓ ಮೇದಪ್ಪ ಅವರು ಇವರ ಅರ್ಜಿಯನ್ನು ಪರಿಗಣಿಸಿ ಪಂಚಾಯಿತಿ ಆಡಳಿತ ಮಂಡಳಿಯಿಂದ ಅನುಮೋದನೆ ಪಡೆದು ವಿದ್ಯುತ್ ಗುತ್ತಿಗೆದಾರನಿಗೆ ಕಾಮಗಾರಿ ನಡೆಸಲು ಅನುಮತಿ ಪತ್ರವನ್ನು ನೀಡಿದ್ದರು.

ಆನಂತರ ಬಂದ ಪಿಡಿಓ ವೇಣುಗೋಪಾಲ್ ಸದ್ಯಕ್ಕೆ ಬೀದಿ ದೀಪ ಹಾಗೂ ವಿದ್ಯುತ್ ಕಾಮಗಾರಿ ನಡೆಸಬೇಡಿ, ಸರಕಾರದ ಕೋಟಾದಡಿಯಲ್ಲಿ ವಿದ್ಯುತ್ ಕಂಬ ಬರಲಿದೆ ಎಂದು ತಿಳಿಸಿದ ಮೇರೆ ಕಾಮಗಾರಿ ನೆನೆಗುದಿಗೆ ಬಿತ್ತು. ಬೀದಿದೀಪ ಹಾಗೂ ವಿದ್ಯುತ್ ಸಂಪರ್ಕಕ್ಕೆ ಕಾದುಕುಳಿತ 4 ಕುಟುಂಬಸ್ಥರು ಅಲೆದು ಸುಸ್ತಾದರು. ಸರಕಾರದ ವಿದ್ಯುತ್ ಸಂಪರ್ಕ ಬರಲೇ ಇಲ್ಲ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇದರ ಬಗ್ಗೆ ತಲೆಕೆಡಿಸಿಕೊಳ್ಳಲೂ ಇಲ್ಲ.

ಶಾಸಕರ ಆದೇಶಕ್ಕೂ ಬೆಲೆ ಇಲ್ಲ: ವಿದ್ಯುತ್ ಬಳಕೆದಾರ ಫಲಾನುಭವಿಗಳು ಶಾಸಕ ಅಪ್ಪಚ್ಚು ರಂಜನ್ ಅವರ ಮೊರೆಹೋದ ಮೇರೆಗೆ, ಶಾಸಕರು ತಾ. 20.12.2019 ರಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಪತ್ರ ಬರೆದು ಈ ಭಾಗಕ್ಕೆ ವಿದ್ಯುತ್ ಕಂಬ ಹಾಗೂ ವಿದ್ಯುತ್ ಸಂಪರ್ಕ ಕೂಡಲೇ ಕಲ್ಪಿಸಿಕೊಡಬೇಕೆಂದೂ ಆದೇಶಿಸಿದ್ದರು. ಆದರೆ ಪಿಡಿಓ ಶಾಸಕರ ಪತ್ರಕ್ಕೂ ಕಿಮ್ಮತ್ತೂ ನೀಡದೆ ಇಂದಿನವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟಿಲ್ಲ.