ಸೋಮವಾರಪೇಟೆ, ಜೂ. 3: ಕೊರೊನಾ ಹಿನ್ನೆಲೆ ಪಟ್ಟಣದಲ್ಲಿ ನಡೆಯುತ್ತಿದ್ದ ಸಂತೆಯನ್ನು ಆರ್‍ಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸಿದ ನಂತರ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿದೆ.

ಈ ಹಿಂದೆ ಇದ್ದಂತಹ ಏಕಮುಖ ಸಂಚಾರ ವ್ಯವಸ್ಥೆ ಬದಲಾಗಿದ್ದು, ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ, ಬೇಕಾಬಿಟ್ಟಿ ವಾಹನಗಳ ಸಂಚಾರ ಕಂಡುಬರುತ್ತಿದೆ. ಈ ಹಿಂದೆ ಸಂತೆ ದಿನವಾದ ಸೋಮವಾರದಂದು ಕ್ಲಬ್‍ರಸ್ತೆ ಹಾಗೂ ಸಿ.ಕೆ. ಸುಬ್ಬಯ್ಯ ರಸ್ತೆಯನ್ನು ಏಕಮುಖ ಸಂಚಾರಕ್ಕೆ ಒಳಪಡಿಸಲಾಗಿತ್ತು.

ಇದರಿಂದಾಗಿ ಸಂತೆಗೆ ಆಗಮಿಸುವ ವಾಹನಗಳು, ಸಾರ್ವಜನಿಕರು ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರಿಂದ ಸುಗಮ ಸಂಚಾರ ವ್ಯವಸ್ಥೆ ಕಂಡುಬರುತ್ತಿತ್ತು. ಪ್ರಸ್ತುತ ಸಂತೆಯನ್ನು ಆರ್‍ಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಿದ್ದರಿಂದ ಈ ಎರಡೂ ರಸ್ತೆಗಳಲ್ಲಿ ಏಕಮುಖ ಸಂಚಾರ ತೆರವುಗೊಂಡಿದೆ. ಪರಿಣಾಮ ಸಂತೆ ದಿನವಾದ ಸೋಮವಾರದಂದು ಎರಡೂ ರಸ್ತೆಗಳಲ್ಲಿ ವಾಹನಗಳ ನಿಲುಗಡೆ, ದ್ವಿಮುಖ ಸಂಚಾರ ಕಂಡುಬಂದಿದ್ದು, ಅವ್ಯವಸ್ಥೆಗೆ ಕಾರಣವಾಗಿದೆ. ಇದರೊಂದಿಗೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿರುವದರಿಂದ ಮುಖ್ಯರಸ್ತೆಯಿಂದ ಸಿ.ಕೆ. ಸುಬ್ಬಯ್ಯ ರಸ್ತೆಗೆ ತೆರಳಲು ಹರಸಾಹಸ ಪಡುವಂತಾಗಿದೆ.

ಕ್ಲಬ್‍ರಸ್ತೆಯಲ್ಲೂ ದ್ವಿಮುಖ ಸಂಚಾರದ ನಡುವೆ ವಾಹನಗಳ ನಿಲುಗಡೆಯೂ ಇರುವದರಿಂದ ಸಾರ್ವಜನಿಕರ ಓಡಾಟಕ್ಕೆ ಸ್ಥಳಾವಕಾಶ ಇಲ್ಲದಂತಾಗಿದೆ. ಸಂತೆ ದಿನದಂದು ಈ ಹಿಂದೆ ಇದ್ದಂತಹ ಏಕಮುಖ ಸಂಚಾರ ವ್ಯವಸ್ಥೆಯನ್ನೇ ಅಳವಡಿಸಲು ಪೊಲೀಸ್ ಇಲಾಖೆ ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಸ್ತೆ ಬದಿಯಲ್ಲೇ ಮೀನು ಮಾರಾಟ

ಇಲ್ಲಿನ ಸಫಾಲಿ ಬಾರ್ ಮುಂಭಾಗದ ಮಡಿಕೇರಿ ರಸ್ತೆಯ ಬದಿಯಲ್ಲಿ ಮೀನು ಮಾರಾಟಕ್ಕೆ ಪಟ್ಟಣ ಪಂಚಾಯಿತಿ ಅವಕಾಶ ಕಲ್ಪಿಸಿರುವದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಮಡಿಕೇರಿ, ಕುಶಾಲನಗರ, ಶಾಂತಳ್ಳಿ ಮಾರ್ಗವಾಗಿ ಸೋಮವಾರಪೇಟೆ ಪಟ್ಟಣಕ್ಕೆ ಆಗಮಿಸಬೇಕೆಂದರೆ ಎಲ್ಲಾ ವಾಹನಗಳು ಇದೇ ರಸ್ತೆಯ ಮೂಲಕವೇ ಸಂಚರಿಸಬೇಕಿದೆ. ಈ ರಸ್ತೆಯ ಒಂದು ಬದಿಯಲ್ಲಿ ಹತ್ತಾರು ಮಂದಿ ನೆಲದ ಮೇಲೆ ಪ್ಲಾಸ್ಟಿಕ್ ಅಳವಡಿಸಿ ಮೀನು ಮಾರಾಟ ಮಾಡುತ್ತಿರುವದರಿಂದ ಸದಾ ಜನಜಂಗುಳಿ ಕಂಡುಬರುತ್ತಿದೆ.

ಕನ್ನಡಾಂಬೆಯ ಸರ್ಕಲ್ ಬಳಿಯಲ್ಲಿ ಅತೀ ಹೆಚ್ಚು ವಾಹನಗಳ ಸಂಚಾರವಿದ್ದು, ಇಂತಹ ಸ್ಥಳದಲ್ಲೇ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಿರುವದರಿಂದ ಪಾದಚಾರಿಗಳಿಗೆ ನಡೆದಾಡಲೂ ಸಮಸ್ಯೆಯಾಗುತ್ತಿದೆ.

ಇದೀಗ ವಾರದ ಸಂತೆ ಆರ್‍ಎಂಸಿ ಮಾರುಕಟ್ಟೆಯಲ್ಲಿ ನಡೆಯುತ್ತಿರುವದರಿಂದ ಈ ರಸ್ತೆಯಲ್ಲಿ ಸೋಮವಾರದಂದು ಸಾವಿರಾರು ವಾಹನಗಳು, ಸಾರ್ವಜನಿಕರು ಓಡಾಡುತ್ತಿರುತ್ತಾರೆ. ಬೆಳಗ್ಗಿನಿಂದ ಸಂಜೆಯವರೆಗೂ ಸಂತೆ ನಡೆಯುತ್ತಿದ್ದು, ಸಂತೆಗೆ ತೆರಳುವ ಮಂದಿಗೆ ರಸ್ತೆ ದಾಟಲೂ ಸಮಸ್ಯೆಯಾಗುತ್ತಿದೆ. ರಸ್ತೆಯ ಬದಿಯಲ್ಲಿ ಯಾವದೇ ಶುಚಿತ್ವವಿಲ್ಲದೇ ಮೀನು ಮಾರಾಟ ನಿರಾತಂಕವಾಗಿ ಸಾಗಿದೆ. ಪಟ್ಟಣದಲ್ಲಿ ಅನೇಕ ಮಳಿಗೆಗಳು ಖಾಲಿ ಬಿದ್ದಿದ್ದು, ಈಗಿರುವ ಮೀನು ವ್ಯಾಪಾರಿಗಳು ಪ.ಪಂ. ಮತ್ತು ಚೌಡ್ಲು ಗ್ರಾ.ಪಂ.ಗೆ ಸಾವಿರಾರು ರೂಪಾಯಿ ನೀಡಿ ಟೆಂಡರ್ ಪಡೆದು ಮೀನು ವ್ಯಾಪಾರ ಮಾಡುತ್ತಿದ್ದಾರೆ. ಆದರೆ ಹೊರಭಾಗದಿಂದ ಬರುವ ಮೀನುಗಾರರು ರಸ್ತೆ ಬದಿಯಲ್ಲಿಯೇ ವ್ಯಾಪಾರ ಮಾಡುತ್ತಿರುವದರಿಂದ ಗ್ರಾಹಕರು ರಸ್ತೆಯಲ್ಲಿಯೇ ನಿಂತುಕೊಂಡು ಮೀನು ಖರೀದಿಸಬೇಕಿದೆ. ಇದರಿಂದಾಗಿ ರಸ್ತೆಯಲ್ಲಿ ವಾಹನಗಳ ಓಡಾಟ, ಸಾರ್ವಜನಿಕರ ಸಂಚಾರಕ್ಕೆ ತೊಡಕಾಗುತ್ತಿದ್ದು, ಈ ಬಗ್ಗೆ ಪಟ್ಟಣ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಸಾರ್ವಜನಿಕರು ಪತ್ರಿಕೆ ಮೂಲಕ ಒತ್ತಾಯಿಸಿದ್ದಾರೆ.

- ವಿಜಯ್