ಮಡಿಕೇರಿ, ಜೂ. 3: ಭಾರತೀಯ ಕ್ರೀಡಾರಂಗದಲ್ಲಿ, ಕ್ರೀಡಾ ತರಬೇತಿಗಾಗಿ ನೀಡಲ್ಪಡುವ ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಗೆ ಈ ಬಾರಿ ಕೊಡಗಿನವರಾದ ಬೊಳ್ಳೆಪಂಡ ಜೆ. ಕಾರ್ಯಪ್ಪ ಅವರ ಹೆಸರು ಶಿಫಾರಸ್ಸುಗೊಂಡಿದೆ. ಹಾಕಿ ತರಬೇತುದಾರರಾಗಿ ಸಾಕಷ್ಟು ಸಮಯದಿಂದ ದುಡಿಯುತ್ತಿರುವ ಕರ್ನಾಟಕದ ಬಿ.ಜೆ. ಕಾರ್ಯಪ್ಪ ಅವರ ಹೆಸರನ್ನು ಹಾಕಿ ಇಂಡಿಯಾ ಸಂಸ್ಥೆ ಭಾರತೀಯ ಕ್ರೀಡಾ ಸಚಿವಾಲಯಕ್ಕೆ ಶಿಫಾರಸ್ಸು ಮಾಡಿದೆ.

ಕ್ರೀಡಾ ಸಾಧನೆಗಾಗಿ ನೀಡಲಾಗುವ ದೇಶದ ಉನ್ನತ ಪ್ರಶಸ್ತಿಗಳಾದ ಖೇಲ್‍ರತ್ನ, ಅರ್ಜುನ, ದ್ರೋಣಾಚಾರ್ಯ, ಮೇಜರ್ ಧ್ಯಾನ್‍ಚಂದ್‍ನಂತಹ ಪ್ರಶಸ್ತಿಗಳಿಗೆ ಹಲವರ ಹೆಸರನ್ನು ಸೂಚಿಸಲಾಗಿದ್ದು, ಇದರಲ್ಲಿ ದ್ರೋಣಾಚಾರ್ಯ ಬಿರುದಿಗೆ ಕಾರ್ಯಪ್ಪ ಅವರು ಹಾಕಿ ಇಂಡಿಯಾದ ಮೂಲಕ ಸೂಚಿಸಲ್ಪಟ್ಟಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಪ್ರಸ್ತುತವೂ ಭಾರತ ಬಾಕ್ಸಿಂಗ್ ತಂಡದ ಮುಖ್ಯ ತರಬೇತುದಾರರಾಗಿರುವ ಕೊಡಗಿನವರಾದ ಚೇನಂಡ ವಿಶು ಕುಟ್ಟಪ್ಪ ಅವರಿಗೆ ಬಾಕ್ಸಿಂಗ್ ತರಬೇತಿಗಾಗಿ ದ್ರೋಣಾಚಾರ್ಯ ಬಿರುದು ದೊರೆಯುವ ಮೂಲಕ ಕ್ರೀಡಾ ಜಿಲ್ಲೆ ಖ್ಯಾತಿಯ ಕೊಡಗಿಗೆ ಚೊಚ್ಚಲ ದ್ರೋಣಾಚಾರ್ಯ ಪ್ರಶಸ್ತಿ ಲಭಿಸಿತ್ತು. ಇದೀಗ ಕಾರ್ಯಪ್ಪ ಅವರ ಹೆಸರು ಸೂಚಿತವಾಗಿದ್ದು, ಜಿಲ್ಲೆಗೆ ಎರಡನೆಯ ದ್ರೋಣಾಚಾರ್ಯ ಪ್ರಶಸ್ತಿ ಸಿಗುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಈ ಬಗ್ಗೆ ಆಯ್ಕೆ ಸಮಿತಿ ಅಂತಿಮ ತೀರ್ಮಾನಕ್ಕೆ ಬರಬೇಕಿದ್ದು, ಬಹುಶಃ ಮುಂದಿನ ತಿಂಗಳು ಇದು ಘೋಷಣೆಯಾಗುವ ಸಾಧ್ಯತೆ ಇದೆ.

ಕ್ರೀಡಾ ಸಾಧನೆಗಾಗಿ ನೀಡುವ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿಯಾದ ಅರ್ಜುನ ಪ್ರಶಸ್ತಿಯನ್ನೂ ಈ ತನಕ ಕೊಡಗಿನವರಾದ ದೇಶದ ಪರ ಉತ್ತಮ ಸಾಧನೆ ಮಾಡಿದ 13 ಕ್ರೀಡಾಪಟುಗಳು ಪಡೆದುಕೊಂಡಿರುವದನ್ನೂ ಇಲ್ಲಿ ಉಲ್ಲೇಖಿಸಬಹುದು. ಆದರೆ ಈ ವರ್ಷ ಈ ಪಟ್ಟಿಯಲ್ಲಿ ಕೊಡಗಿನ ಮೂಲದ ಅಥವಾ ಕರ್ನಾಟಕದ ಯಾರೂ ಶಿಫಾರಸ್ಸುಗೊಂಡಿಲ್ಲ.

ಈ ಹಿಂದೆ ಕೊಡಗಿನವರಾದ ಡಾ. ಮೊಳ್ಳೆರ ಪಿ. ಗಣೇಶ್, ಡಾ. ಅಂಜಪರವಂಡ ಬಿ. ಸುಬ್ಬಯ್ಯ, ಮನೆಯಪಂಡ ಎಂ. ಸೋಮಯ್ಯ, ಬಿ.ಪಿ. ಗೋವಿಂದ, ವಿ.ಆರ್. ರಘುನಾಥ್, ಎಸ್.ವಿ. ಸುನಿಲ್ (ಹಾಕಿ) ಮನೆಯಪಂಡ ಅಶ್ವಿನಿ ನಾಚಪ್ಪ, ಬಲ್ಲಚಂಡ ರೀತ್ ಅಬ್ರಹಾಂ, ಮಾಚೆಟ್ಟಿರ ಆರ್. ಪೂವಮ್ಮ (ಅಥ್ಲೆಟಿಕ್ಸ್) ಚೇನಂಡ ಸಿ. ಮಾಚಯ್ಯ (ಬಾಕ್ಸಿಂಗ್), ಬ್ಯಾಡ್‍ಮಿಂಟನ್‍ನಲ್ಲಿ ಮಾಚಿಮಂಡ ಅಶ್ವಿನಿಪೊನ್ನಪ್ಪ, (ಈಗ ಪೊನ್ನಚೆಟ್ಟಿರ) ಕುಟ್ಟಂಡ ಜೋಷ್ನಾ ಚಿಣ್ಣಪ್ಪ (ಸ್ಕ್ಯಾಷ್), ಟೆನ್ನಿಸ್‍ನಲ್ಲಿ ಮಚ್ಚಂಡ ರೋಹನ್ ಬೋಪಣ್ಣ ಅವರುಗಳು ಅರ್ಜುನ ಪ್ರಶಸ್ತಿಗಳಿಸಿರುವ ಕ್ರೀಡಾಪಟುಗಳಾಗಿದ್ದಾರೆ. - ಶಶಿ